ವಿಜಯಪುರ ಜೈಲಿನಲ್ಲಿ ಶ್ರೀರಾಮೋತ್ಸವ: ಹಿಂದೂ ಕೈದಿಗಳ ಮೇಲೆ ಹಲ್ಲೆ ಆರೋಪ
ವಿಜಯಪುರ ಜನವರಿ 27: ಜೈಲಿನಲ್ಲಿ ಶ್ರೀರಾಮೋತ್ಸವ ಮಾಡಿದಕ್ಕೆ ಹಿಂದೂ ಕೈದಿಗಳ ಮೇಲೆ ಮುಸ್ಲಿಂ ಕೈದಿಗಳು ಹಲ್ಲೆ ಮಾಡಿದ್ದಾರೆನ್ನುವ ಆರೋಪ ವಿಜಯಪುರದಲ್ಲಿ ಕೇಳಿ ಬಂದಿದೆ.
ಜನವರಿ 22 ದೇಶದಲ್ಲಿ ಒಂದು ಐತಿಹಾಸಿಕ ದಿನ. ಇಡೀ ದೇಶ ಮಾತ್ರವಲ್ಲ ವಿದೇಶದಲ್ಲೂ ಶ್ರೀರಾಮೋತ್ಸವವನ್ನು ಆಚರಿಸಲಾಯಿತು. ಹಲವು ವರ್ಷಗಳ ಅಡೆತಡೆಗಳ ನಂತರ ಜನವರಿ 22ರಂದು ಉತ್ತರಪ್ರದೇಶದ ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ರಾಮಲಲ್ಲಾನ ಮೂರ್ತಿ ಪ್ರಾಣಪ್ರತಿಷ್ಠಾಪನೆ ಅದ್ದೂರಿಯಾಗಿ ಮಾಡಲಾಯಿತು. ಇದನ್ನು ಇಡೀ ದೇಶದ ಜನ ಕಣ್ತುಂಬಿಕೊಂಡರು.

ಸಾವಿರಾರು ಜನ ಅಯೋಧ್ಯೆಯಲ್ಲಿ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರೆ, ಹಲವೆಡೆ ಈ ದಿನವನ್ನು ಜನ ನೇರ ಪ್ರಸಾರದ ಮೂಲಕ ಕಂಡು ಖುಷಿಪಟ್ಟರು. ಈ ದಿನ ಶ್ರೀರಾಮನ ಭಕ್ತರು ದೇಶಾದ್ಯಂತ ವಿಶೇಷ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದ್ದರು. ಅದರಂತೆ ವಿಜಯಪುರದ ಜೈಲಿನಲ್ಲಿಯೂ ಕೆಲ ಕೈದಿಗಳು ಜೈಲಿನಲ್ಲಿ ರಾಮೋತ್ಸವ ಆಚರಣೆ ಮಾಡಿದ್ದರು.
ಆದರೆ ಇದನ್ನು ಸಹಿಸಿದ ಕೆಲ ಮುಸ್ಲಿಂ ಕೈದಿಗಳು ಹಿಂದೂ ಕೈದಿಗಳ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನವ ಆರೋಪ ಕೇಳಿಬಂದಿದೆ. ವಿಜಯಪುರದ ಕೇಂದ್ರ ಕಾರಾಗೃಹದ ದರ್ಗಾ ಜೈಲಿನಲ್ಲಿ ಈ ಘಟನೆ ನಡೆದಿದೆ. ಜೈಲಿನಲ್ಲಿ ಕೆಲ ಕೈದಿಗಳು ಜನವರಿ 22ರಂದು ರಾಮೋತ್ಸವವನ್ನು ಆಚರಿಸಿದರು. ಈ ವೇಳೆ ಮುಸ್ಲಿಂ ಕೈದಿಗಳು ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೂ ಮಹಾರಾಷ್ಟ್ರ ಮೂಲದ ಪರಮೇಶ್ವರ ಜಾಧವ(ದೇವಾ), ರಮೇಶ ದಳವಿ, ಪ್ರದೀಪ ಮಾನೆ ಎಂಬ ಹಿಂದೂ ಕೈದಿಗಳು ಜೈಲಿನಲ್ಲಿ ಜನವರಿ 22ರಂದು ಶ್ರೀರಾಮೋತ್ಸವವನ್ನು ಆಚರಿಸಿದ್ದಾರೆ. ಇದರಿಂದ ಕೋಪಕೊಂಡ ಜೈಲರ್ ತನ್ನ ಕಚೇರಿಗೆ ಕರೆಸಿ ಮುಸ್ಲಿಂ ಕೈದಿಗಳಿಂದ ಹಲ್ಲೆ ಮಾಡಿಸಿದ್ದಾರೆ. ಕೊಲೆ ಪ್ರಕರಣದಲ್ಲಿ ಜೈಲ್‌ನಲ್ಲಿರುವ ಶೇಖ್ ಅಹ್ಮದ್ ಹಾಗೂ ಸಹಚರರಿಂದ ಹಲ್ಲೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾತ್ರವಲ್ಲದೆ ಜೈಲಿನಲ್ಲಿರುವ ಇತರ ಮುಸ್ಲಿಂ ಅಧಿಕಾರಿಗಳೂ ಸಾಥ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕುರಿತು ಆರೋಪ ಮಾಡಿರುವ ವೀಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಜೈಲರ್ ನಡೆಯನ್ನು ಹಿಂದೂ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ. ಈ ಬಗ್ಗೆ ಸೂಕ್ತ ತಣಿಕೆ ಹಾಗೂ ಕ್ರಮಕ್ಕೆ ಒತ್ತಾಯಿಸಲಾಗಿದೆ.












Click it and Unblock the Notifications