Karnataka Polls: ಬಸವನ ಬಾಗೇವಾಡಿಯಲ್ಲಿ ಹ್ಯಾಟ್ರಿಕ್ ಸಾಧಿಸಲಿದೆಯೇ ಕಾಂಗ್ರೆಸ್? ಇನ್‌ಸೈಡ್ ಸ್ಟೋರಿ
ವಿಜಯಪುರ, ಏಪ್ರಿಲ್ 28: ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ ಪಕ್ಷಗಳು ಭರ್ಜರಿ ಪ್ರಚಾರ ನಡೆಸುತ್ತಿವೆ. 224 ಕ್ಷೇತ್ರಗಳಿಗೆ ಮೇ 10 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಕ್ಷೇತ್ರವೂ ಒಂದು. ಈ ಕ್ಷೇತ್ರದಲ್ಲಿ ಸತತ ಮೂರನೇ ಬಾರಿ ಗೆಲ್ಲಲು ಕಾಂಗ್ರೆಸ್ ಯತ್ನ ನಡೆಸಿದೆ.
ಕ್ಷೇತ್ರದಲ್ಲಿ ಸಾಮಾನ್ಯ ಮತದಾರರು, ಅನಿವಾಸಿ ಭಾರತೀಯರು ಮತ್ತು ಸೇವಾ ಮತದಾರರು ಸೇರಿ ಒಟ್ಟು 1,96,571 ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ 1,01,345 ಪುರುಷರು, 95,026 ಮಹಿಳೆಯರು ಮತ್ತು 18 ಇತರರು ಇದ್ದಾರೆ. ಕ್ಷೇತ್ರದಲ್ಲಿ ಮತದಾರರ ಲಿಂಗ ಅನುಪಾತ 93.6 ರಷ್ಟಿದೆ ಮತ್ತು ಇಲ್ಲಿನ ಅಂದಾಜು ಸಾಕ್ಷರತೆ ಪ್ರಮಾಣ ಶೇ 66 ರಷ್ಟಿದೆ.

ಈ ಬಾರಿ ಭಾರತೀಯ ಜನತಾ ಪಕ್ಷ ಎಸ್ ಕೆ ಬೆಳ್ಳುಬ್ಬಿ ಅವರನ್ನು ಕಣಕ್ಕಿಳಿಸಿದೆ. ಜೆಡಿಎಸ್ ನಿಂದ ಸೋಮನಗೌಡ (ಅಪ್ಪುಗೌಡ) ಬಿ ಪಾಟೀಲ್ (ಮನಗೂಳಿ) ಅವರು ಸ್ಪರ್ಧಿಸಿದ್ದಾರೆ. ಇವರಿಕೆ ಎದುರಾಳಿಯಾಗಿ ಕಾಂಗ್ರೆಸ್ ನಾಯಕ, ಮಾಜಿ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಸ್ಪರ್ಧಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ಹಾಗೂ ವಿರೋಧ ಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಪೈಪೋಟಿ ಏರ್ಪಟ್ಟಿದೆ.
2018 ರಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಅವರು ಜೆಡಿಎಸ್ ಅಭ್ಯರ್ಥಿ ಸೋಮನಗೌಡ (ಅಪ್ಪುಗೌಡ) ಬಿ ಪಾಟೀಲ್ (ಮನಗೂಳಿ) ಅವರನ್ನು ಸೋಲಿಸುವ ಮೂಲಕ ಜಯಗಳಿಸಿದರು. ಬಿಜೆಪಿಯ ಸಂಗರಾಜ್ ದೇಸಾಯಿ ಅವರು ಮೂರನೇ ಸ್ಥಾನದಲ್ಲಿದ್ದರು.
2013 ರ ಕರ್ನಾಟಕ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲ್ ಅವರು 19,676 ಮತಗಳ (15.52%) ಅಂತರದಿಂದ ಜಯಗಳಿಸಿದರು. ಇಲ್ಲಿ ಒಟ್ಟು ಚಲಾವಣೆಯಾದ ಮತಗಳಲ್ಲಿ ಶೇ 44.42ರಷ್ಟು ಕಾಂಗ್ರೆಸ್ ಗಳಿಸಿತು. 2013 ರಲ್ಲಿ ಈ ಕ್ಷೇತ್ರದಲ್ಲಿ ಶೇ 72.18 ರಷ್ಟು ಮತದಾನವಾಗಿತ್ತು.
ಬಿಜೆಪಿಯಲ್ಲಿ ಬಂಡಾಯ
ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ ಸೋತಿದ್ದ ಅಪ್ಪುಗೌಡ ಅವರು ಈ ಬಾರಿ ಬಿಜೆಪಿ ಟಿಕೆಟ್‌ಗಾಗಿ ತೀವ್ರ ಲಾಭಿ ಮಾಡಿದ್ದರು. ಆದರೆ, ಬಿಜೆಪಿ ಅವರಿಗೆ ಟಿಕೆಟ್ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಬಂಡಾಯದ ಎದ್ದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಜೆಡಿಎಸ್ ಈಗಾಗಲೇ ಅಭ್ಯರ್ಥಿಯನ್ನು ಘೋಷಿಸಿದೆ. ಪರಮಾನಂದ ಬಸಪ್ಪ ತನಿಖೆದಾರ ಅವರನ್ನು ಜೆಡಿಎಸ್ ನಿಲ್ಲಿಸಿದೆ. ಇವರ ಹೊಸ ಮುಖವಾದ್ದರಿಂದ ಕಾಂಗ್ರೆಸ್ ಹಾಗೂ ಬಿಜೆಪಿಗೆ ನೆರವಾಗಬಹುದು.
ಬಸವನ ಬಾಗೇವಾಡಿ ಕ್ಷೇತ್ರದಲ್ಲಿ ಲಿಂಗಾಯತರ ಮತಗಳು ಅಧಿಕವಾಗಿವೆ. ಅದರಲ್ಲೂ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು ಹೆಚ್ಚಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶಿವಾನಂದ ಪಾಟೀಲ್ ಅವರು ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಈ ಹಿನ್ನೆಲೆಯಲ್ಲಿ ಅವರು ಸಮುದಾಯದ ಮತಗಳನ್ನು ಸೆಳೆಯಲಿದ್ದಾರೆ ಎಂಬ ಅಭಿಪ್ರಾಯಗಳು ಕ್ಷೇತ್ರದಲ್ಲಿ ವ್ಯಕ್ತವಾಗಿದೆ.
ಇನ್ನುಳಿದಂತೆ ಕುರುಬ, ಮುಸ್ಲಿಂ ಹಾಗೂ ದಲಿತರ ಮತಗಳು ಈ ಕ್ಷೇತ್ರದಲ್ಲಿ ನಿರ್ನಾಯಕ ಪಾತ್ರವಹಿಸುತ್ತವೆ. ಈ ಸಮುದಾಯದ ಮತಗಳು ಅಧಿಕವಾಗಿ ಕಾಂಗ್ರೆಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎಂದು ರಾಜಕೀಯ ಪರಿಣತರು ಅಭಿಪ್ರಾಯ ಪಟ್ಟಿದ್ದಾರೆ












Click it and Unblock the Notifications