ಎಂ ಬಿ ಪಾಟೀಲ್ ಬಿಜೆಪಿಗೆ ಸೇರುವುದಾದರೆ ಅವರ ಪರವಾಗಿ ನಿಲ್ಲುತ್ತೇನೆ
ವಿಜಯಪುರ, ಮೇ 7: ಸದಾ ವಿವಾದಕಾರಿ ಹೇಳಿಕೆಯಿಂದಲೇ ಸುದ್ದಿಯಲ್ಲಿರುವ, ವಿಜಯಪುರ (ನಗರ) ಕ್ಷೇತ್ರದ ಶಾಸಕ, ಬಿಜೆಪಿ ಮುಖಂಡ ಬಸನಗೌಡ ಪಾಟೀಲ್ ಯತ್ನಾಳ್, ಮತ್ತೊಮ್ಮೆ ಗೃಹಸಚಿವ ಎಂ ಬಿ ಪಾಟೀಲರ ವಿಚಾರದಲ್ಲಿ ಹೇಳಿಕೆಯನ್ನು ನೀಡಿದ್ದಾರೆ.
ನಾನು ಮನಸ್ಸು ಮಾಡಿದರೆ, ಎಂ ಬಿ ಪಾಟೀಲರನ್ನು ಬಿಜೆಪಿ ಕರೆತರುವುದು ದೊಡ್ಡ ವಿಷಯವಲ್ಲ ಎಂದಿದ್ದ ಯತ್ನಾಳ್, ಪಾಟೀಲರು ನಮ್ಮ ಪಕ್ಷಕ್ಕೆ ಸೇರುವುದಾದರೆ ನಾನೇ ಮುಂದೆ ನಿಂತು, ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಅವರಿಗೆ ಸಿಗುವ ಹಾಗೆ ನೋಡಿಕೊಳ್ಳುತ್ತೇನೆ ಎಂದಿದ್ದಾರೆ.
ಉತ್ತರ ಕರ್ನಾಟಕ ಭಾಗದ ಮುಖಂಡರಿಗೆ ಈ ಬಾರಿ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗಬೇಕೆಂದು ಒತ್ತಾಯಿಸುತ್ತಾ ಬಂದಿದ್ದೇನೆ, ನಾನೂ ಒಬ್ಬ ಆ ಹುದ್ದೆಯ ಆಕಾಂಕ್ಷಿ ಎಂದು ಬಸನಗೌಡ ಪಾಟೀಲ್ ಹೇಳಿದ್ದಾರೆ.

ಎಂ ಬಿ ಪಾಟೀಲರು ಬಿಜೆಪಿಗೆ ಬರಬೇಕು ಎನ್ನುವುದು ಆಸೆ, ಅವರು ಇಲ್ಲಿಗೆ ಬಂದರೆ, ಅವರಿಗೆ ಒಳ್ಳೆಯ ಸಚಿವಸ್ಥಾನ ಸಿಗುವ ಹಾಗೇ ನಾನೇ ಲಾಬಿ ಮಾಡುತ್ತೇನೆ. ನೀರಾವರಿ ಖಾತೆಯ ಜೊತೆಗೆ, ಅವರಿಗೆ ಬಯಸಿದ ಖಾತೆ ಸಿಗುವುದಕ್ಕೂ ನಾನು ಪ್ರಯತ್ನಿಸುತ್ತೇನೆ ಎಂದು ಯತ್ನಾಳ್ ಹೇಳಿದ್ದಾರೆ.
ಯಡಿಯೂರಪ್ಪನವರು ನಮ್ಮ ನಾಯಕರು, ಬದುಕಿರುವವರೆಗೂ ಅವರೇ ನಮ್ಮ ಸಿಎಂ. ನನ್ನ ವಿರುದ್ದ ಯಾವುದಾದರೂ ಹಗರಣಗಳಿವೆಯಾ, ನಾನ್ಯಾಕೆ ಮುಖ್ಯಮಂತ್ರಿ ಅಭ್ಯರ್ಥಿಯಾಗಬಾರದೆಂದು ಯತ್ನಾಳ್, ತಾವೂ ಸಿಎಂ ಹುದ್ದೆಯ ಆಕಾಂಕ್ಷಿ ಎನ್ನುವ ಅಭಿಲಾಷೆಯನ್ನು ಹೊರಹಾಕಿದ್ದಾರೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಸಿದ್ದರಾಮಯ್ಯನವರನ್ನ ರಾಜಕೀಯವಾಗಿ ಮುಗಿಸುವ ತಂತ್ರ ರೂಪಿಸಲು ಮುಂದಾಗಿದ್ದಾರೆ. ಸರ್ಕಾರ ಬೀಳಿಸಲು ನಾವು ಪ್ರಯತ್ನ ಮಾಡುತ್ತಿಲ್ಲ ಎಂದು ಯತ್ನಾಳ್ ಮತ್ತೊಮ್ಮೆ ಸ್ಪಷ್ಟಪಡಿಸಿದರು.












Click it and Unblock the Notifications