ಗಂಗಾಧರ ಚಡಚಣ ಹತ್ಯೆ : ಎಂ.ಬಿ.ಅಸೋಡೆ 14 ದಿನ ನ್ಯಾಯಾಂಗ ಬಂಧನಕ್ಕೆ
ವಿಜಯಪುರ, ಅಕ್ಟೋಬರ್ 31 : ಗಂಗಾಧರ ಚಡಚಣ ಹತ್ಯೆ ಪ್ರಕರಣದ ಆರೋಪಿ ಎಂ.ಬಿ.ಅಸೋಡೆ ಸೇರಿ ಸೇರಿದಂತೆ ಮೂವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಎಂ.ಬಿ.ಅಸೋಡೆ ಪ್ರಕರಣದ 13ನೇ ಆರೋಪಿ.
ಸಿಐಡಿ ಪೊಲೀಸರ ವಶದಲ್ಲಿದ್ದ ಅಂದಿನ ಚಡಚಣ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಎಂ.ಬಿ.ಅಸೋಡೆ, ಅಸೋಡೆ ಸೋದರ ಸಂಬಂಧಿ ಶ್ರೀಮಂತ ಸಂಗಪ್ಪ ಅಸೋಡೆ, ಕಾರು ಚಾಲಕ ವಿಶ್ವಜ್ಯೋತ ಗಾಯಕವಾಡ ಅವರನ್ನು ವಿಜಯಪುರದ ಇಂಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇಂಡಿ ನ್ಯಾಯಾಲಯ ಮೂವರು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ಭೈರಗೊಂಡ ಮತ್ತು ಚಡಚಣ ಕುಟುಂಬದ ದ್ವೇಷದ ಹಿನ್ನಲೆಯಲ್ಲಿ ನ್ಯಾಯಾಲಯದ ಸುತ್ತ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿತ್ತು.

ಗಂಗಾಧರ ಚಡಚಣ ಮತ್ತು ಧರ್ಮರಾಜ ಚಡಚಣ ಸಾವನ್ನಪ್ಪಿ ಅಕ್ಟೋಬರ್ 30ಕ್ಕೆ ಒಂದು ವರ್ಷ ಕಳೆದಿದೆ. ಚಡಚಣ ಸಹೋದರರ ತಾಯಿ ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಅವರು ಚಡಚಣ ಸಹೋದರರ ಫೋಟೋವನ್ನು ತೋಟದ ಮನೆಯಲ್ಲಿಟ್ಟು ಪೂಜೆ ಸಲ್ಲಿಸಿದರು. ಧರ್ಮರಾಜ ಚಡಚಣ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.
'ಗಂಗಾಧರ ಚಡಚಣ ಮತ್ತು ಧರ್ಮರಾಜ ಚಡಚಣ ಹತ್ಯೆ ಪ್ರಕರಣದಲ್ಲಿ ಕೆಲವು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಆದ್ದರಿಂದ, ಪ್ರಕರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕು. ಸಿಬಿಐ ತನಿಖೆಯಿಂದ ಮಾತ್ರ ನ್ಯಾಯ ಸಿಗಲು ಸಾಧ್ಯ' ಎಂದು ವಿಮಲಾಬಾಯಿ ಮಲ್ಲಿಕಾರ್ಜುನ ಚಡಚಣ ಒತ್ತಾಯಿಸಿದರು.












Click it and Unblock the Notifications