ವಿಜಯಪುರ: ಬಾಲಕಿ ಅತ್ಯಾಚಾರ, ಕೊಲೆ ಪ್ರಕರಣ ಸಿಐಡಿಗೆ ವಹಿಸಲು ನಿರ್ಧಾರ
ವಿಜಯಪುರ, ಡಿಸೆಂಬರ್ 21: ವಿಜಯಪುರದಲ್ಲಿ ಕಾಮುಕರ ಅಟ್ಟಹಾಸಕ್ಕೆ ಬಲಿಯಾದ ಅಪ್ರಾಪ್ತೆ ಬಾಲಕಿ ಧಾನಮ್ಮ ಮನೆಗೆ ಇಂದು (ಗುರುವಾರ) ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಸಾಂತ್ವಾನ ಹೇಳಿದರು.
ವಿಜಯಪುರ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ತಪ್ಪಿತಸ್ಥರೆಲ್ಲರನ್ನು ತಕ್ಷಣ ಬಂಧಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. pic.twitter.com/fxHERfG29e
— Siddaramaiah (@siddaramaiah) December 21, 2017
ವಿಜಯಪುರ ನಗರದ ದರ್ಗಾ ರಸ್ತೆಯಲ್ಲಿರುವ ಧಾನಮ್ಮ ಅವರ ಮನೆಗೆ ಸಿದ್ದರಾಮಯ್ಯ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, "ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ಸರ್ಕಾರ ನಿರ್ಧರಿಸಿದೆ. ತಪ್ಪಿತಸ್ಥರೆಲ್ಲರನ್ನು ತಕ್ಷಣ ಬಂಧಿಸುವಂತೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದರು.

"ಬಾಲಕಿ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ 8.25 ಲಕ್ಷ ಘೋಷಣೆ ಮಾಡಲಾಗಿದೆ. ಮೊದಲ ಕಂತಿನಲ್ಲಿ ಈಗಾಗಲೇ 4 ಲಕ್ಷ 12 ಸಾವಿರದ 500 ರೂಪಾಯಿ ಚೆಕ್ ನೀಡಲಾಗಿದ್ದು, ಪ್ರಕರಣದ ಜಾರ್ಜ್ ಶೀಟ್ ನಂತರ ಉಳಿದ ಹಣ ನೀಡಲಾಗುವುದು ಎಂದು ಹೇಳಿದರು.
ವಿಜಯಪುರದ ಮಂಜುನಾಥ ನಗರದ ಮಲ್ಲಿಕಾರ್ಜುನ ಶಾಲೆ ಬಳಿ ಡಿಸೆಂಬರ್ 19ರಂದು ನಾಲ್ಕೈದು ಕಾಮುಕರು ಗಾಂಜಾ ನಶೆಯಲ್ಲಿ ಧಾನಮ್ಮ ಎಂಬ ಅಪ್ರಾಪ್ತೆ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬಳಿಕ ಕತ್ತು ಹಿಸುಕಿ ಕೊಲೆ ಮಾಡಿ ವಿಕೃತಿ ಮೆರೆದಿದ್ದರು.
ಮುದ್ದೇಬಿಹಾಳ ಬಂದ್: ಬಾಲಕಿ ಅತ್ಯಾಚಾರ, ಕೊಲೆ ಖಂಡಿಸಿ ಗುರುವಾರ ದಲಿತಪರ ಸಂಘಟನೆಗಳು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಪಟ್ಟಣ ಬಂದ್ ಕರೆ ನೀಡಿವೆ. ಅಂಗಡಿ ಮುಂಗಟ್ಟು ಹಾಗೂ ಸಾರಿಗೆ ಬಸ್ ಬಂದ್ ಮಾಡಿಸಿದ ಸಂಘಟನೆಗಳ ಮುಖಂಡರು ಬಾಲಕಿ ಸಾವಿಗೆ ನ್ಯಾಯ ಬೇಕು ಎಂದು ಆಗ್ರಹಿಸಿದರು.












Click it and Unblock the Notifications