ಕೋವಿಡ್ ಪರಿಸ್ಥಿತಿ; ಸಿಂಧಗಿ ಉಪ ಚುನಾವಣೆ ಮುಂದೂಡಿಕೆ
ವಿಜಯಪುರ, ಮೇ 06; ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕರ್ನಾಟಕದಲ್ಲಿಯೂ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಚುನಾವಣಾ ಆಯೋಗ ಹಲವಾರು ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿಕೆ ಮಾಡಿದೆ.
ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ (85) ಜನವರಿ 28ರಂದು ಮೃತಪಟ್ಟಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು.
ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಹಿನ್ನಲೆಯಲ್ಲಿ ಚುನಾವಣಾ ಆಯೋಗ 3 ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಮತ್ತು 8 ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯನ್ನು ಮುಂದೂಡಿದೆ. ಈ ಹಿನ್ನಲೆಯಲ್ಲಿ ಸಿಂಧಗಿ ಉಪ ಚುನಾವಣೆಯೂ ಮುಂದೂಡಿಕೆಯಾಗಿದೆ.

ಯಾವುದೇ ಎಂಪಿ ಅಥವ ಎಂಎಲ್‌ಎ ಮೃತಟ್ಟರೆ ಆರು ತಿಂಗಳ ಒಳಗೆ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಬೇಕು. ಆದರೆ, ದೇಶದಲ್ಲಿನ ಕೋವಿಡ್ ಪರಿಸ್ಥಿತಿ ಅವಲೋಕಿಸಿರುವ ಆಯೋಗ ಉಪ ಚುನಾವಣೆಗಳನ್ನು ಮುಂದೂಡಿಕೆ ಮಾಡಿದೆ.
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಸುಧಾರಣೆಯಾದ ಬಳಿಕ ಚುನಾವಣೆ ನಡೆಸುವುದಾಗಿ ಆಯೋಗ ಹೇಳಿದೆ. ಪಶ್ಚಿಮ ಬಂಗಾಳದಲ್ಲಿ 294 ವಿಧಾನಸಭಾ ಕ್ಷೇತ್ರಗಳ ಪೈಕಿ 292 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದೆ. ಇನ್ನೂ 2 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ಜೆಡಿಎಸ್ ಶಾಸಕ ಎಂ. ಸಿ. ಮನಗೂಳಿ ಅವರು ಮೃತಪಟ್ಟ ಬಳಿಕ ಅವರ ಪುತ್ರ ಅಶೋಕ ಮನಗೂಳಿ ಜೆಡಿಎಸ್ ಪಕ್ಷವನ್ನು ತೊರೆಯುವುದಾಗಿ ಘೋಷಣೆ ಮಾಡಿದ್ದಾರೆ. ಸಿಂಧಗಿ ಉಪ ಚುನಾವಣೆ ಯಾವಾಗ ನಡೆಯಲಿದೆ? ಎಂಬುದು ಇನ್ನೂ ಖಚಿತವಾಗಿಲ್ಲ.












Click it and Unblock the Notifications