ಯತ್ನಾಳ್ ಗೆ ಬಿಸಿಮುಟ್ಟಿಸಿದ ಸಿಎಂ ಯಡಿಯೂರಪ್ಪ: ನೀವೇ ಹೊಣೆಯೆಂದ ಯತ್ನಾಳ್
ವಿಜಯಪುರ, ಜ 16: ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಗುದ್ದಾಟ ಇನ್ನೊಂದು ಮಜಲಿಗೆ ಹೋಗಿ ನಿಂತಿದೆ.
ಸಂಪುಟ ವಿಸ್ತರಣೆಯ ನಂತರ ಸಿಎಂ ವಿರುದ್ದ ಇನ್ನೂ ಹೆಚ್ಚು ಮುಗಿಬೀಳುತ್ತಿರುವ ಯತ್ನಾಳ್, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಸಿಡಿ ಮೂಲಕ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ, ಅವರ ಪುತ್ರ ವಿಜಯೇಂದ್ರ ದುಡ್ಡು ತೆಗೆದುಕೊಂಡು ಸಚಿವ ಸ್ಥಾನ ಹಂಚಿದ್ದಾರೆ"ಎನ್ನುವ ಆರೋಪವನ್ನು ಮಾಡಿದ್ದರು.
ಬಿಎಸ್ವೈ ಅವರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿರುವ ನೂತನ ಸಚಿವರಾರು, ಆ 'ಸಿಡಿ'ಯಲ್ಲಿ ಅಂತದ್ದೇನಿದೆ!
ಇದಕ್ಕೆ ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಬಿಎಸ್ವೈ, "ಕೆಲವರು ಸಂಪುಟ ವಿಸ್ತರಣೆಯ ವಿಚಾರದಲ್ಲಿ ಅಪಸ್ವರವನ್ನು ಎತ್ತುತ್ತಿದ್ದಾರೆ. ನನ್ನ ಇತಿಮಿತಿಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡಿದ್ದೇನೆ. ದೂರು ಏನಾದರೂ ಇದ್ದರೆ, ವರಿಷ್ಠರ ಬಳಿ ನೇರವಾಗಿ ಕೊಡಬಹುದು"ಎಂದು ಹೇಳಿದ್ದರು.
ಎಲ್ಲದಕ್ಕೂ ನಿಮ್ಮ ಮಗನ ಬಳಿಯೇ ಮಾತನಾಡಬೇಕೇ?: ವಿಜಯೇಂದ್ರ ವಿರುದ್ಧ ಯತ್ನಾಳ್ ನೇರಾ ನೇರ ಕಿಡಿ
ಈ ಎಲ್ಲಾ ಬೆಳವಣಿಗೆಗಳ ಮಧ್ಯೆ, ಯಡಿಯೂರಪ್ಪ ಸರಕಾರ, ಬಸನಗೌಡ ಪಾಟೀಲ್ ಯತ್ನಾಳ್ ಗೆ ಬಿಸಿಮುಟ್ಟಿಸಿದ್ದು,ಅವರಿಗೆ ಕೊಟ್ಟಿದ್ದ ಭದ್ರತೆಯನ್ನು ಹಿಂದಕ್ಕೆ ಪಡೆದುಕೊಂಡಿದೆ.

ಸಿಡಿ ಮತ್ತು ದುಡ್ಡನ್ನು ವಿಜಯೇಂದ್ರಗೆ ನೀಡಿ ಮಂತ್ರಿಯಾಗಿದ್ದಾರೆ
"ಕಳೆದ ಮೂರು ತಿಂಗಳಿನಿಂದ ಮೂರು ಸಿಡಿಯನ್ನು ಇಟ್ಟುಕೊಂಡು ಮುಖ್ಯಮಂತ್ರಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಆ ಸಿಡಿಯನ್ನು ಇಟ್ಟುಕೊಂಡು ಇಬ್ಬರು ಸಚಿವರಾಗಿದ್ದರೆ, ಒಬ್ಬರು ಸಿಡಿ ಮತ್ತು ದುಡ್ಡನ್ನು ಸಿಎಂ ಪುತ್ರ ವಿಜಯೇಂದ್ರಗೆ ನೀಡಿ, ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ"ಎನ್ನುವ ಗಂಭೀರ ಆರೋಪವನ್ನು ಯತ್ನಾಳ್ ಮಾಡಿದ್ದರು. ಈ ಹೇಳಿಕೆ, ರಾಜ್ಯ ರಾಜಕೀಯದಲ್ಲಿ ಹೊಸ ಆರೋಪ, ಪ್ರತ್ಯಾರೋಪಕ್ಕೆ ನಾಂದಿ ಹಾಡಿತ್ತು.

ಪೊಲೀಸ್ ಭದ್ರತೆಯನ್ನು ರಾಜ್ಯ ಸರಕಾರ ತಕ್ಷಣದಿಂದಲೇ ಹಿಂದಕ್ಕೆ ಪಡೆದಿದೆ
ಈ ಹೇಳಿಕೆ ರಾಜ್ಯ ರಾಜಕೀಯದಲ್ಲಿ ವ್ಯಾಪಕ ಚರ್ಚೆಗೆ ನಾಂದಿ ಹಾಡಿದ ಬೆನ್ನಲ್ಲೇ, ಯತ್ನಾಳ್ ಅವರಿಗೆ ನೀಡಿದ್ದ ಪೊಲೀಸ್ ಭದ್ರತೆಯನ್ನು ರಾಜ್ಯ ಸರಕಾರ ತಕ್ಷಣದಿಂದಲೇ ಹಿಂದಕ್ಕೆ ಪಡೆದಿದೆ. ಮುಖ್ಯಮಂತ್ರಿಗಳ ಈ ನಿರ್ಧಾರದಿಂದ ಯತ್ನಾಳ್ ಕೆಂಡಾಮಂಡಲವಾಗಿದ್ದಾರೆ. ನನಗೇನಾದರೂ ಆದರೆ, ಅದಕ್ಕೆ ನೀವೇ ಹೊಣೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನನ್ನನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ
ಭದ್ರತೆ ಹಿಂದಕ್ಕೆ ಪಡೆದಿರುವ ಬಗ್ಗೆ ಸಿಎಂ ಯಡಿಯೂರಪ್ಪ, ಗೃಹಸಚಿವ ಬಸವರಾಜ ಬೊಮ್ಮಾಯಿ, ರಾಜ್ಯ ಪೊಲೀಸ್ ಮಹಾನಿರ್ದೇಶಕ, ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಯತ್ನಾಳ್ ಪತ್ರವನ್ನು ಬರೆದು, "ನನ್ನ ಹಿಂದೂಪರ, ಜನಪರ, ಅನ್ಯಾಯದ ವಿರುದ್ದದ ಹೋರಾಟವನ್ನು ಹತ್ತಿಕ್ಕಲು ಯಾರಿಂದಲೂ ಸಾಧ್ಯವಿಲ್ಲ"ಎಂದು ಪತ್ರದಲ್ಲಿ ಬರೆದಿದ್ದಾರೆ.

ಸರಕಾರವೇ ನೇರ ಹೊಣೆ
"ಗುಪ್ತಚರ ಇಲಾಖೆಯ ಆದೇಶದ ಮೇರೆಗೆ ನನಗೆ ಭದ್ರತೆಯನ್ನು ನೀಡಲಾಗಿತ್ತು. ಸಿಎಂ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ತಮ್ಮ ಹಳೆಯ ಚಾಳಿ, ವಿಕೃತ ಮನಸ್ಸಿಗೆ ಇದು ಸಾಕ್ಷಿಯಾಗಿದೆ. ಏನಾದರೂ ನನಗೆ ತೊಂದರೆ, ಅನಾಹುತವಾದಲ್ಲಿ ಅದಕ್ಕೆ ಸರಕಾರವೇ ನೇರ ಹೊಣೆ" ಎಂದು ಯತ್ನಾಳ್ ಪತ್ರದಲ್ಲಿ ಬರೆದಿದ್ದಾರೆ.