ರೀಲ್ಸ್ ಮಾಡಲು ಹೋಗಿ ಜಲಪಾತಕ್ಕೆ ಬಿದ್ದು ಯುವಕ ಸಾವು: ದೃಶ್ಯ ಸೆರೆ
ಉಡುಪಿ, ಜುಲೈ 24: ರಾಜ್ಯದ ಕೆಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನದಿ, ಹಳ್ಳ-ತೊರೆಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಚಿಕ್ಕಮಗಳೂರು ಹಾಗೂ ದಾವಣಗೆರೆ ಸೇರಿದಂತೆ ವಿವಿಧೆಡೆ ವರುಣನ ಆರ್ಭಟ ಜೋರಾಗಿದ್ದು, ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
ನದಿ ಪಾತ್ರದ ಜನ ಹಾಗೂ ಪ್ರವಾಸಿಗರು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವಂತೆ ಜಿಲ್ಲಾಡಳಿತಗಳು ಸೂಚನೆ ನೀಡುತ್ತಲೇ ಇವೆ. ಇದನ್ನು ಮೀರಿ ಉಕ್ಕಿ ಹರಿವ ನದಿಯಲ್ಲಿ, ಜಲಪಾತಗಳಲ್ಲಿ ಪ್ರವಾಸಿಗರು ಅಪಾಯ ಸಾಹಸಗಳನ್ನು ಮಾಡುತ್ತಿದ್ದು, ಇಂತಹ ಹುಚ್ಚಾಟಕ್ಕೆ ಯುವಕ ಬಲಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದೆ.

ಉಡುಪಿ ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರೀ ಮಳೆಯಾಗುತ್ತಿದ್ದು ಜಿಲ್ಲೆಯ ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಪರಿಣಾಮ ಜಲಪಾತಗಳು ಕೂಡ ಧುಮ್ಮಿಕ್ಕಿ ಹರಿಯುತ್ತವೆ. ಇಂತಹ ಜಲಪಾತಗಳನ್ನು ನೋಡಲು ದೂರ ಊರುಗಳಿಂದ ಬರುತ್ತಿರುವ ಪ್ರವಾಸಿಗರು ಹುಚ್ಚಾಟ ಮೆರೆಯುತ್ತಿದ್ದಾರೆ.
ಕೊಲ್ಲೂರು ಬಳಿಯಿರುವ ಅರಶಿನಗುಂಡಿ ಜಲಪಾತ ವೀಕ್ಷಿಸಲು ಬಂದ ಯುವಕ ರೀಲ್ಸ್ ಮಾಡುವಾಗ ಆಯತಪ್ಪಿ ಬಿದ್ದು ನೀರುಪಾಲಾಗಿರುವ ಘಟನೆ ನಡೆದಿದೆ. ಭದ್ರಾವತಿ ಮೂಲದ ಶರತ್ ಕುಮಾರ್ (23) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಕೊಲ್ಲೂರಿಗೆ ಕಾರಿನಲ್ಲಿ ಬಂದಿದ್ದ ಶರತ್ ಕುಮಾರ್ ಜಲಪಾತ ವೀಕ್ಷಣೆಗೆ ತೆರಳಿದ್ದರು. ಬಳಿಕ ಜಲಪಾತದ ಬಂಡೆಯ ತುದಿಯಲ್ಲಿ ನಿಂತು ರೀಲ್ಸ್ ಮಾಡುವಾಗ ಆಯತಪ್ಪಿ ಧುಮ್ಮುಕ್ಕುತ್ತಿರುವ ಜಲಪಾತಕ್ಕೆ ಬಿದ್ದಿದ್ದಾರೆ.
ಇನ್ನು ಯುವಕ ಜಲಪಾತದಲ್ಲಿ ಬೀಳುತ್ತಿರುವ ಎದೆಝಲ್ ಎನಿಸುವ ದೃಶ್ಯ ಜೊತೆಯಲ್ಲಿ ತೆರಳಿದ್ದ ಮತ್ತೋರ್ವ ಯುವಕನ ಮೊಬೈಲ್‌ನಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಕೊಲ್ಲೂರು ಪಿ.ಎಸ್.ಐ ಜಯಲಕ್ಷ್ಮಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಯುವಕನ ಮೃತದೇಹ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ. ಘಟನೆ ಸಂಬಂಧ ಕೊಲ್ಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications