ಉಡುಪಿಯಲ್ಲಿ ಬಾವಿ ನಿರ್ಮಿಸಿದ ಏಕಲವ್ಯ ಪ್ರಶಸ್ತಿ ಪುರಸ್ಕೃತೆ
ಉಡುಪಿ, ಏಪ್ರಿಲ್ 27: ಸಾಧಕರು, ಯಾವತ್ತಿದ್ದರೂ ಸಾಧಕರೇ. ಅವರು ಯಾವುದೇ ಕಠಿಣ ಸಮಯವನ್ನೂ ಉತ್ತಮ ಸಮಯವನ್ನಾಗಿ ತಮಗೆ ಬೇಕಾದಂತೆ ಮಾಡಿಕೊಳ್ಳಬಲ್ಲರು. ಆ ಸಾಧಕರ ಸಾಲಿಗೆ ಉಡುಪಿ ಜಿಲ್ಲೆಯ ಅಕ್ಷತಾ ಪೂಜಾರಿ ಬೋಳ ಹೆಸರು ಸೇರುತ್ತದೆ.
ಈಕೆ ಪವರ್ ಲಿಫ್ಟಿಂಗ್ ಕ್ಷೇತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹಲವು ಚಿನ್ನದ ಪದಕ ಪಡೆದ ಯುವತಿ. ಏಕಲವ್ಯ ಪ್ರಶಸ್ತಿ ಪುರಸ್ಕೃತಳಾದ ಕರಾವಳಿ ಕುವರಿ. ಕಳೆದ ಬಾರಿ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ಗೆದ್ದು ದೇಶಕ್ಕೇ ಕೀರ್ತಿ ತಂದುಕೊಟ್ಟ ಹುಡುಗಿ. ಈ ಬಾರಿ ಮನೆಯಲ್ಲಿ ಬಾವಿ ನಿರ್ಮಾಣ ಮಾಡುವ ಮೂಲಕ ಸುದ್ದಿಯಾಗಿದ್ದಾರೆ.
ಈ ಬಾರಿ ಲಾಕ್ ಡೌನ್ ನಿಂದ ಯಾವುದೇ ಕ್ರೀಡಾಕೂಟ ಇಲ್ಲ, ಹಾಗಾಗಿ ಅಕ್ಷತಾ ಪೂಜಾರಿ ಮನೆಯಲ್ಲಿಯೇ ಇದ್ದರು. ಕರಾವಳಿಯಲ್ಲಿ ಈಗ ಬಿರು ಬೇಸಿಗೆ. ಮನೆಯ ಹಳೆಯ ಬಾವಿಯಲ್ಲಿ ಇದ್ದ ಅಲ್ಪ ಸ್ಪಲ್ಪ ನೀರು ಇಂಗಿತ್ತು. ಹೀಗಾಗಿ ಹೊಸ ಬಾವಿ ತೋಡುವ ಆಲೋಚನೆ ಅಕ್ಷತಾ ಪೂಜಾರಿ ಅವರಿಗೆ ಬಂದದ್ದೇ ತಡ, ತಮ್ಮ ಸಹೋದರರ ಜೊತೆಗೂಡಿ ಮನೆಯ ಹತ್ತಿರವೇ ಹೊಸ ಬಾವಿ ನಿರ್ಮಾಣಕ್ಕೆ ಇಳಿದು ಯಶಸ್ಸು ಕಂಡಿದ್ದಾರೆ.

ಲಾಕ್ ಡೌನ್ ಸಂದರ್ಭದಲ್ಲಿ ಬಾವಿ ನಿರ್ಮಾಣ ಕಾರ್ಯಕ್ಕೆ ಕೆಲಸಗಾರರು ಸಿಗದೇ ಮನೆಯವರ ಜೊತೆ ಸೇರಿ ಸತತ ಆರು ದಿನಗಳ ಕಾಲ ಪರಿಶ್ರಮ ಪಟ್ಟು 25 ಅಡಿ ಬಾವಿ ತೋಡಿದ್ದಾರೆ. ಇವರ ಈ ಪರಿಶ್ರಮಕ್ಕೆ ತಕ್ಕ ಪ್ರತಿಫಲವೂ ಸಿಕ್ಕಿದೆ. 25 ಅಡಿ ಆಳದಲ್ಲಿ ಉತ್ತಮ ನೀರು ಸಿಕ್ಕಿದೆ.

ಈಕೆ ತಾನು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ ಕ್ರೀಡಾಪಟು ಅಂದುಕೊಳ್ಳದೇ ಸಾಮಾನ್ಯ ಯುವತಿಯಂತೆ ಹಾರೆಯ ಮೂಲಕ ಮಣ್ಣು ಅಗೆಯುವುದು, ಬುಟ್ಟಿಗೆ ಮಣ್ಣು ತುಂಬಿಸುವುದು ಮುಂತಾದ ಎಲ್ಲ ಕೆಲಸವನ್ನು ಮಾಡಿದ್ದಾರೆ. ಏಳು ದಿನಗಳ ಸತತ ಪರಿಶ್ರಮದ ಬಳಿಕ ಬಾವಿಯಲ್ಲಿ ಉತ್ತಮ ನೀರೂ ಸಿಕ್ಕಿದೆ.

ಇಷ್ಟು ದಿನಗಳ ಕಾಲ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗಳಿಸುವ ಮೂಲಕ ಸುದ್ದಿ ಮಾಡುತ್ತಿದ್ದ ಅಕ್ಷತಾ, ಈ ಬಾರಿ ಸ್ವತಃ ಬಾವಿ ನಿರ್ಮಾಣ ಮಾಡಿ ಸುದ್ದಿಯಲ್ಲಿದ್ದಾರೆ. ಈಕೆಯ ಈ ಕಾರ್ಯ ಎಲ್ಲರಿಗೂ ಒಂದು ಮಾದರಿಯಾಗಲಿ.












Click it and Unblock the Notifications