ಬ್ರಹ್ಮಾವರ ಶೂಟೌಟ್ ಕೇಸ್ ಭೇದಿಸುವಲ್ಲಿ ಉಡುಪಿ ಪೊಲೀಸ್ ವಿಫಲ?: ಎಚ್ಚರಿಕೆ ನೀಡಿದ ದಲಿತ ಸಂಘರ್ಷ ಸಮಿತಿ
ಉಡುಪಿ, ಮೇ 29: ಉಡುಪಿ ಜಿಲ್ಲೆಯ ಬ್ರಹ್ಮಾವರದ ಹನೆಹಳ್ಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಯುವಕ ಕೃಷ್ಣನ ಶೂಟೌಟ್ ಪ್ರಕರಣವನ್ನು ಜಿಲ್ಲಾ ಪೊಲೀಸ್ ಇಲಾಖೆ ಭೇದಿಸಲು ವಿಫಲವಾಗಿದ್ದಾರೆ. ಆರಂಭದಿಂದಲೂ ನಿಗೂಢತೆಯನ್ನು ಕಾಯ್ದಿರಿಸಿಕೊಂಡಿದ್ದ ಪ್ರಕರಣವು ಅಂತಿಮವಾಗಿ ರಾಜ್ಯ ಗೃಹಸಚಿವರ ಅಂಗಳಕ್ಕೆ ಹೋಗಲಿದೆ.
2024ರ ಮಾರ್ಚ್ 4 ರ ರಾತ್ರಿ ಏಕಾಂಗಿಯಾಗಿದ್ದ ಕೃಷ್ಣ ಎಂಬ ದಲಿತ ಯುವಕನನ್ನು ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದರು. ನಂತರ ತನಿಖೆಗೆ ವಿಶೇಷ ತಂಡವನ್ನು ರಚಿಸಿದ ಎಸ್ಪಿ, ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದರು. ಆದರೆ ಪ್ರಕರಣ ನಡೆದು ಎರಡು ತಿಂಗಳು ಕಳೆದರೂ ಆರೋಪಿಯ ಸುಳಿವೇ ಪತ್ತೆಯಾಗದಿರುವುದು ಜಿಲ್ಲಾ ಪೊಲೀಸ್ ಮೇಲೆ ಸಾರ್ವಜನಿಕರು ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದೆ.

ಕೃಷ್ಣ ದೇಹದಲ್ಲಿ ಸಿಕ್ಕ ನಾಲ್ಕು ಗುಂಡುಗಳು 7.65 ಎಮ್.ಎಮ್ ಪಿಸ್ತೂಲಿನಿಂದ ಹಾರಿದೆ ಎಂದು ಎಫ್.ಎಸ್.ಎಲ್ ವರದಿಯಲ್ಲಿ ಬಹಿರಂಗಗೊಂಡಿದ್ದರು, ಅದನ್ನು ಹೊರತುಪಡಿಸಿ ಮಹತ್ವದ ಮಾಹಿತಿ ಸಿಕ್ಕಿಲ್ಲ. ಮಡದಿಯನ್ನು ವಿಚಾರಿಸಿದಾಗ ಮನೆಯಲ್ಲಿದ್ದ ಟ್ರಂಕ್ ನಾಪತ್ತೆಯಾಗಿದೆ ಎಂಬುದಾಗಿ ಮಾಹಿತಿ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದರು.
ಇದೀಗ ಕರ್ನಾಟಕ ದಲಿತ ಸಂಘರ್ಷ ಸಮಿತಿ ಈ ಹತ್ಯೆ ಪ್ರಕರಣ ಸಂಬಂಧ ರಾಜ್ಯ ಮಟ್ಟದ ಹೋರಾಟಕ್ಕೆ ಸಿದ್ಧವಾಗಿದೆ. ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಕೃಷ್ಣನ ಶೂಟೌಟ್ ಪ್ರಕರಣವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಅವರ ತಂಡ ಸಂಪೂರ್ಣವಾಗಿ ನಿರ್ಲಕ್ಷ್ಯಿಸಿದೆ. ಹೀಗಾಗಿ ಗೃಹಸಚಿವ ಪರಮೇಶ್ವರ್, ಡಿಜಿಪಿಯವರನ್ನು ಭೇಟಿ ಮಾಡಿ ಪ್ರಕರಣದ ಆರೋಪಿಯನ್ನು ಪತ್ತೆಹಚ್ಚುವಂತೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ.
ಪೊಲೀಸರು ಈ ಭಯಾನಕ ಕೊಲೆಯ ಆರೋಪಿಗಳನ್ನು ಬಂಧಿಸುತ್ತಾರೆ ಎಂಬ ಭರವಸೆಯಿಂದ ಸಂಘಟನೆಯು ಇದುವರೆಗೆ ಪೊಲೀಸರೊಂದಿಗೆ ಸಹಕರಿಸಿ ಯಾವುದೇ ಹೋರಾಟಗಳಿಗೆ ಕರೆ ನೀಡಿರಲಿಲ್ಲ. ಆದರೆ ಪೊಲೀಸ್ ಇಲಾಖೆಯ ಗಾಢ ಮೌನವಹಿಸಿರುವುದನ್ನು ಖಂಡಿಸುತ್ತೇವೆ ಎಂದಿದ್ದಾರೆ. ಹತ್ಯೆಯಾದ ಕೃಷ್ಣ ಮಡದಿ ಮತ್ತು ಕುಟುಂಬಕ್ಕೆ ನ್ಯಾಯ ದೊರಕಿಸಿ ಕೊಡುವವರೆಗೆ ಹೋರಾಟ ಮಾಡುತ್ತೇವೆ. ಆರೋಪಿಯನ್ನು ಹದಿನೈದು ದಿನದೊಳಗೆ ಪತ್ತೆಹಚ್ಚದೇ ಇದ್ದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಇತ್ತ ಬ್ರಹ್ಮಾವರ ಶೂಟೌಟ್ ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದ್ದು, ತನಿಖೆಯನ್ನು ನಡೆಸುತ್ತಿದ್ದೇವೆ. ಎಲ್ಲಾ ಆಯಾಮದಲ್ಲೂ ತನಿಖೆ ನಡೆಯುತ್ತಿದ್ದು, ಶೀಘ್ರದಲ್ಲಿ ಆರೋಪಿಯನ್ನು ಪತ್ತೆಹಚ್ಚುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಭರವಸೆ ನೀಡಿದ್ದಾರೆ.












Click it and Unblock the Notifications