MLC Election: ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಈ ಬದಲಾವಣೆ
ಉಡುಪಿ, ಜೂನ್ 02: ಉಡುಪಿ ಚಿಕ್ಕಮಗಳೂರು ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ಮತ ಎಣಿಕೆ ಕಾರ್ಯವು ನಗರದ ಬ್ರಹ್ಮಗಿರಿ ಸಮೀಪದ ಸೈಂಟ್ ಸಿಸಿಲೀಸ್ ವಿದ್ಯಾಸಂಸ್ಥೆಯಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಹೇಳಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಮೂರು ಹಂತದ ಭದ್ರತೆಯನ್ನು ಒದಗಿಸಲಾಗಿದೆ. ಕೇಂದ್ರದ ಸುತ್ತಲಿನ 100 ಮೀಟರ್ ಅಂತರದೊಳಗೆ ಯಾವುದೇ ವಾಹನಗಳಿಗೆ ಪ್ರವೇಶವಿಲ್ಲ. ಜೂನ್ ನಾಲ್ಕರಂದು ಶುಷ್ಕ ದಿನ ಎಂದು ಘೋಷಣೆ ಮಾಡಲಾಗಿದೆ ಎಂದರು.

ಮತ ಎಣಿಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಎಣಿಕೆ ಕೇಂದ್ರದ ಸುತ್ತಲೂ, ಕೊಠಡಿ ಒಳಗೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಚುನಾವಣಾ ಫಲಿತಾಂಶಗಳು ಹೊರಬಿದ್ದ ನಂತರ ವಿಜಯೋತ್ಸವ ಆಚರಣೆಯ ಸಂದರ್ಭದಲ್ಲಿ ಸಿಡಿಮದ್ದು ಪಟಾಕಿ ಸಿಡಿಸುವುದನ್ನು ಅಂದು ಮಧ್ಯರಾತ್ರಿ 12 ಗಂಟೆಯವರೆಗೆ ನಿಷೇಧಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದರು.
ಇವಿಎಂ ಮತ ಎಣಿಕೆಗಾಗಿ ವಿಧಾನಸಭಾ ಕ್ಷೇತ್ರವಾರು ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಇವಿಎಂ ಮತ ಎಣಿಕೆಗಾಗಿ ಚುನಾವಣಾ ಅಧಿಕಾರಿಗಳನ್ನು ಹೊರತುಪಡಿಸಿ ಎಂಟು ಮಂದಿ ಸಹಾಯಕ ಚುನಾವಣೆ ಅಧಿಕಾರಿಗಳು ಮತ್ತು ನಾಲ್ಕು ಹೆಚ್ಚುವರಿ ಸಹಾಯಕ ಚುನಾವಣೆ ಅಧಿಕಾರಿಗಳನ್ನು ನೇಮಿಸಲಾಗಿದೆ. ಮತ ಎಣಿಕೆ ಮುಕ್ತಾಯದ ನಂತರ ಮತಯಂತ್ರ ಮತ್ತು ಚುನಾವಣಾ ದಾಖಲೆಗಳನ್ನು ಭದ್ರತಾ ಕೊಠಡಿಯಲ್ಲಿ ಠೇವಣಿ ಇಡಲಾಗುವುದು ಎಂದರು.
ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಯೆಯಲ್ಲಿ ಈ ಬದಲಾವಣೆ
ಇದೇ ವೇಳೆ ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಜೂನ್ ಮೂರರಂದು ನಡೆಯಲಿದ್ದು. ಈ ಬಾರಿಯ ಮತದಾನ ಪ್ರಕ್ರಿಯೆಯಲ್ಲಿ ಕೆಲವೊಂದು ಬದಲಾವಣೆಗಳಿವೆ ಎಂದು ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ತಿಳಿಸಿದ್ದಾರೆ.
ನೈರುತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಕ್ಕೆ ನಡೆಯುವ ವಿಧಾನ ಪರಿಷತ್ ಚುನಾವಣೆಯಲ್ಲಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಒಟ್ಟು 19 ಹಾಗೂ ಶಿಕ್ಷಕರ ಕ್ಷೇತ್ರಕ್ಕೆ 10 ಮತಗಟ್ಟೆಗಳನ್ನು ವ್ಯವಸ್ಥೆ ಗೊಳಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 17033 ಪದವೀಧರ ಮತದಾರರಿದ್ದು, ಶಿಕ್ಷಕರ ಕ್ಷೇತ್ರದಲ್ಲಿ 4,067/ ಮತದಾರರು ನೋಂದಾಯಿಸಿಕೊಂಡಿದ್ದಾರೆ ಎಂದರು. ಈ ಬಾರಿ ಮತ ಚಲಾಯಿಸುವಾಗ ಆಂಗ್ಲ ಸಂಖ್ಯೆಗಳು ಮಾತ್ರವಲ್ಲದೆ, ಕನ್ನಡ, ರೋಮನ್ ಹಾಗೂ ದೇವನಾಗರಿ ಸಂಖ್ಯೆಗಳನ್ನು ಕೂಡ ಬಳಸಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.












Click it and Unblock the Notifications