ಹಿಜಾಬ್ ವಿವಾದ: ಶಾಸಕ ಹಾಲಾಡಿ ಶ್ರೀನಿವಾಸ್ ವಿರುದ್ಧ ವಿದ್ಯಾರ್ಥಿನಿಯರು ಕೋರ್ಟ್ ಮೊರೆ
ಕುಂದಾಪುರ, ಫೆಬ್ರವರಿ, 07: ಹಿಜಾಬ್ ವಿಚಾರವು ಈಗ ಕರ್ನಾಟಕದಲ್ಲಿ ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಹೇಳಿದರೆ, ಇನ್ನೊಂದೆಡೆ ಕೆಲವು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಹಿಜಾಬ್ ಧರಿಸಿದರೆ ನಾವೂ ಕೂಡಾ ಕೇಸರಿ ಶಾಲು ಧರಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಈಗ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ನಿರ್ದೇಶನದ ಮೇರೆಗೆ ತಮಗೆ ಕಾಲೇಜಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಆರೋಪ ಮಾಡಿ ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ತಮ್ಮ ತಾಯಂದಿರ ಮೂಲಕ ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ಮನವಿ ಸಲ್ಲಿಕೆ ಮಾಡಿದ್ದಾರೆ.
ತೃತೀಯ ಬಿಬಿಎ ವಿದ್ಯಾರ್ಥಿ ಸುಹಾ ಮೌಲಾನಾ ಅವರು ತಮ್ಮ ತಾಯಿ ಬೀಬಿ ಸಾರಾ ಮತ್ತು ಪ್ರಥಮ ಬಿಬಿಎ ವಿದ್ಯಾರ್ಥಿನಿ ಐಶಾ ಅಲೀಫಾ ಕೌಸರ್ ಅವರು ತಮ್ಮ ತಾಯಿ ರಹಮತ್ ಅವರ ಮೂಲಕ ಹೈಕೋರ್ಟ್‌ಗೆ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ವಿರುದ್ಧ ಮನವಿ ಸಲ್ಲಿಕೆ ಮಾಡಿದ್ದಾರೆ. ಹಾಗೆಯೇ ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪರವಾಗಿ ಪ್ರಾಂಶುಪಾಲರುಗಳ ವಿರುದ್ಧವೂ ಅರ್ಜಿ ಸಲ್ಲಿಸಲಾಗಿದೆ.

ವಿದ್ಯಾರ್ಥಿನಿಯರ ಮನವಿಯಲ್ಲಿ ಏನಿದೆ?
ತಮಗೆ ಯಾವುದೇ ನಿರ್ಬಂಧ ಹಾಗೂ ಷರತ್ತು ಹೇರದ ಕಾಲೇಜಿಗೆ ಪ್ರವೇಶ ಮಾಡಲು ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿಗೆ ಆದೇಶ ನೀಡಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ಗೆ ಸೂಚನೆ ನೀಡಲು ವಿದ್ಯಾರ್ಥಿನಿಯರು ಹೈಕೋರ್ಟ್‌ಗೆ ಸಲ್ಲಿಸಿದ ಮನವಿಯಲ್ಲಿ ಹೇಳಿದ್ದಾರೆ. ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಲೇಜಿನಲ್ಲಿ ತಮ್ಮ ರಾಜಕೀಯ ಅಜೆಂಡಾವನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಾಗೆಯೇ ಕಾನೂನಿನ ಯಾವ ನಿಬಂಧನೆಯಡಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಕಾಲೇಜಿನ ಆಡಳಿತದಲ್ಲಿ ಮಧ್ಯಪ್ರದೇಶ ಮಾಡಿದ್ದಾರೆ ಎಂದು ಪ್ರಶ್ನಿಸಿ ಆದೇಶ ಮಾಡಬೇಕು ಎಂದು ತಿಳಿಸಿದ್ದಾರೆ. ಹಾಗೆಯೇ ಈ ವಿಚಾರದಲ್ಲಿ ನ್ಯಾಯ ದೊರಕಿಸುವಂತೆ ಕೋರಲಾಗಿದೆ.
ಮಧ್ಯಂತರ ಪರಿಹಾರವಾಗಿ, ಅರ್ಜಿದಾರರಿಗೆ ಯಾವುದೇ ಪಕ್ಷಪಾತ, ತಾರತಮ್ಯ ತೋರದೆ ಶಿರವಸ್ತ್ರ ಧರಿಸಿ ತರಗತಿಗಳಿಗೆ ಪ್ರವೇಶಿಸಲು ಭಂಡಾರ್ಕಾರ್ಸ್ ಕಾಲೇಜಿಗೆ ಮಂಗಳೂರು ವಿವಿಯ ರಿಜಿಸ್ಟ್ರಾರ್ ಅವರು ಸೂಚಿಸುವಂತೆ ನ್ಯಾಯಾಲಯವು ನಿರ್ದೇಶನ ನೀಡಬೇಕು. ಹಾಗೆಯೇ ಶೈಕ್ಷಣಿಕ ಸಿಬ್ಬಂದಿಯ ತಾರತಮ್ಯದಿಂದಾಗಿ ಈ ಶೈಕ್ಷಣಿಕ ವರ್ಷದಲ್ಲಿ ತರಗತಿಯಿಂದ ಹೊರಗುಳಿದಿರುವ ದಿನಗಳಿಗೆ ಅಥವಾ ಮನವಿ ಇತ್ಯರ್ಥವಾಗುವವರೆಗೆ ಹಾಜರಾತಿ ನೀಡಬೇಕು ಎಂದು ಕೂಡಾ ಅರ್ಜಿದಾರರು ಮನವಿ ಮಾಡಿದ್ದಾರೆ.
ಕಾಲೇಜು ಆರಂಭ ಮಾಡಿದಾಗಿನಿಂದ ನಮಗೆ ಯಾವುದೇ ನಿರ್ಬಂಧ ಇರಲಿಲ್ಲ. ಆದರೆ ಫೆಬ್ರವರಿ 3ರಂದು ಏಕಾಏಕಿ ಪ್ರಾಂಶುಪಾಲರು ಮತ್ತು ಸಿಬ್ಬಂದಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬರಬಾರದು ಎಂದು ಹೇಳಿದ್ದಾರೆ. ಈಗ ಸರ್ಕಾರದ ಆದೇಶವಿದೆ ಎಂದು ನಿರ್ಬಂಧ ವಿಧಿಸಲಾಗುತ್ತಿದೆ. ಪ್ರಾಂಶುಪಾಲರು ಮತ್ತು ಸಿಬ್ಬಂದಿಯನ್ನು ವಿದ್ಯಾರ್ಥಿಗಳ ಪೋಷಕರು ಭೇಟಿ ಮಾಡಿ ಪ್ರಶ್ನಿಸಿದಾಗ ಶಾಸಕ ಶ್ರೀನಿವಾಸ ಶೆಟ್ಟಿ ನಿರ್ದೇಶನದಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಂಶುಪಾಲರು ಹೇಳಿದ್ದಾರೆ ಎಂದು ಮನವಿಯಲ್ಲಿ ವಿದ್ಯಾರ್ಥಿಗಳು ಉಲ್ಲೇಖ ಮಾಡಿದ್ದಾರೆ. ಈಗಾಗಲೇ ವಿದ್ಯಾರ್ಥಿನಿಯೊಬ್ಬರು ಪ್ರತ್ಯೇಕ ಮನವಿ ಸಲ್ಲಿಸಿದ್ದು, ಇನ್ನೊಂದು ಅರ್ಜಿಯನ್ನು ಉಡುಪಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಐವರು ವಿದ್ಯಾರ್ಥಿನಿಯರು ಸಲ್ಲಿಸಿದ್ದಾರೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications