ಬೈಂದೂರು: ಕಡಲ ಅಲೆಗೆ ಸಿಲುಕಿದ ದೋಣಿ, ಇಬ್ಬರು ಮೀನುಗಾರರು ಸಾವು
ಉಡುಪಿ, ಆಗಸ್ಟ್ 01: ಸಮುದ್ರದ ಅಬ್ಬರದ ಅಲೆಗಳ ಹೊಡೆತಕ್ಕೆ ಸಿಲುಕಿ ದೋಣಿ ಮಗುಚಿ ಇಬ್ಬರು ಮೀನುಗಾರರು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಉಪ್ಪುಂದಲ್ಲಿ ನಡೆದಿದೆ.
ಮಾಸ್ತಿ ಮರ್ಲಚಿಕ್ಕು ಎಂಬ ಹೆಸರಿನ ನಾಡದೋಣಿಯಲ್ಲಿ ಉಪ್ಪುಂದ ಕಡಲ ಕಿನಾರೆಯಲ್ಲಿ ಎಂಟು ಮಂದಿ ಮೀನುಗಾರರು ಮೀನುಬೇಟೆ ನಡೆಸುತ್ತಿದ್ದರು. ಈ ವೇಳೆ ಸಮುದ್ರದ ಅಲೆಗಳ ಅಬ್ಬರಕ್ಕೆ ನಾಡದೋಣಿ ಸಿಲುಕಿದೆ. ಅಲೆಗಳ ಹೊಡೆತಕ್ಕೆ ನಾಡದೋಣಿ ಪಲ್ಟಿಯಾಗಿದೆ.ಈ ವೇಳೆ ಆರು ಮಂದಿಯನ್ನು ಇತರ ದೋಣಿಯವರು ರಕ್ಷಣೆ ಮಾಡಿದ್ದಾರೆ. ಆದರೆ ಇಬ್ಬರು ಮೀನುಗಾರರು ಮಾತ್ರ ಕಡಲ ಅಲೆಯೊಳಗೆ ನಾಪತ್ತೆಯಾಗಿದ್ದಾರೆ.

ಮೀನುಗಾರರ ರಕ್ಷಣಾ ಕಾರ್ಯಾಚರಣೆ ವೇಳೆ ಓರ್ವ ಮೀನುಗಾರರ ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರನ್ನು ನಾಗೇಶ್ ಎಂದು ಗುರುತಿಸಲಾಗಿದ್ದು, ಕೂಡಲೇ ಸಮುದ್ರದಿಂದ ಮೇಲೆತ್ತಿ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ನಾಗೇಶ್ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಇನ್ನು ಈ ದೋಣಿ ಅವಘಡದಲ್ಲಿ ಸತೀಶ್ ಎಂಬ ಮೀನುಗಾರ ನಾಪತ್ತೆಯಾಗಿದ್ದು, ಮೀನುಗಾರರು ಸಾಕಷ್ಟು ಹುಡುಕಾಟ ನಡೆಸಿದರೂ, ಸತೀಶ್ ಮೃತದೇಹ ಪತ್ತೆಯಾಗಿಲ್ಲ. ಮೃತ ಬಡ ಮೀನುಗಾರರ ಕುಟುಂಬವನ್ನು ಹೊಂದಿದ್ದು, ಇವರ ದುಡಿಮೆಯಿಂದಲೇ ಮನೆಯವರ ಜೀವನ ಸಾಗುತಿತ್ತು. ಇದೀಗ ವಿಧಿಯ ಕ್ರೂರತೆ ಇಬ್ಬರ ಬಲಿ ಪಡೆದಿದ್ದು, ಮನೆಯ ಆಧಾರ ಸ್ತಂಭವನ್ನೇ ಕಳೆದುಕೊಂಡಿರುವ ಕುಟುಂಬಸ್ಥರು ಕಂಗಾಲಾಗಿದ್ದಾರೆ.

ಆಳ ಸಮುದ್ರ ಮೀನುಗಾರಿಕೆಗೆ ಕ್ಷಣಗಣನೆ
ಕಳೆದ ಎರಡು ತಿಂಗಳಿಂದ ಬಂದಾಗಿದ್ದ ಆಳ ಸಮುದ್ರ ಮೀನುಗಾರಿಕೆಗೆ ಕ್ಷಣಗಣನೆ ಪ್ರಾರಂಭವಾಗಿದೆ. ಬಿಡುವಿನ ಬಳಿಕ ಮೀನುಗಾರರು ಮತ್ಸ ಶಿಖಾರಿ ನಡೆಸಲು ಬಲೆ ಬೋಟ್‌ಗಳೊಂದಿಗೆ ಅಗತ್ಯ ಸಿದ್ದತೆ ಮಾಡಿಕೊಂಡಿದ್ದಾರೆ. ಇದೀಗ ಮೀನುಗಾರಿಕೆಗೆ ಅನುಕೂಲಕರ ವಾತವರಣವಿದೆ ಎನ್ನಲಾಗಿದೆ.
ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗಿಕೊಳ್ಳುವ ಕಾರಣ ಜೂನ್ 1ರಿಂದ ಎರಡು ತಿಂಗಳು ಕಾಲ ಆಳ ಸಮುದ್ರ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿತ್ತು. ಆದರೆ ಇಂದಿನಿಂದ ಆಗಸ್ಟ್1 ರಿಂದ ನಿರ್ಬಂಧ ತೆರವುಗೊಳ್ಳಲಿದ್ದು ಬಿಡುವಿನ ಅವಧಿಯಲ್ಲಿ ಬೋಟ್‌ಗಳ ಎಂಜಿನ್ ಸರ್ವೀಸ್, ಮುರಿದು ಹೋಗಿದ್ದ ಹಲಗೆಗಳ ಬದಲಾವಣೆ, ಬಲೆಗಳ ದುರಸ್ಥಿ, ಹೊಸ ಬಲೆಗಳ ಖರೀದಿ, ಬೋಟ್‌ಗಳಿಗೆ ಬಣ್ಣ ಬಳಿದು ಸ್ವಚ್ಛಗೊಳಿಸುವುದು, ಪರವಾನಗಿ ನವೀಕರಣ, ಡೀಸೆಲ್ ಪಾಸ್ ಪುಸ್ತಕ, ಮೀನುಗಾರಿಕೆಗೆ ಆರಂಭಿಕ ಬಂಡವಾಳ ಕ್ರೂಢೀಕರಣ ಸೇರಿದಂತೆ ಮೀನುಗಾರಿಕೆಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಬೋಟ್‌ನಲ್ಲಿ ಕೆಲಸ ಮಾಡುವ ಹೊರ ರಾಜ್ಯದ ಕಾರ್ಮಿಕರು ಬಂದರುಗಳತ್ತ ಮುಖ ಮಾಡಿದ್ದಾರೆ.












Click it and Unblock the Notifications