ರಸ್ತೆ ತೆರವು ವೇಳೆ ಬೈಂದೂರು ಶಾಸಕರ ಮೇಲೆ ಉರುಳಿದ ಮರ: ಗುರುರಾಜ್ ಗಂಟಿಹೊಳೆ ಜಸ್ಟ್ ಮಿಸ್
ಉಡುಪಿ, ಜೂನ್ 29: ಭಾರೀ ಗಾಳಿ ಮಳೆಗೆ ರಸ್ತೆ ಬದಿಯ ಮರ ಉರುಳಿ ಬಿದ್ದು, ಶಾಸಕರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದ ಘಟನೆ ಉಡುಪಿ ಜಿಲ್ಲೆಯ ಹಾಲಾಡಿ ರಸ್ತೆಯಲ್ಲಿ ನಡೆದಿದೆ.
ಬರಿಗಾಲ ಸಂತ ಎಂದೇ ಖ್ಯಾತಿ ಪಡೆದ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಹಾಲಾಡಿ ರಸ್ತೆ ಮಾರ್ಗವಾಗಿ ತೆರಳುತ್ತಿದ್ದರು. ಭಾರೀ ಗಾಳಿ ಮಳೆಗೆ ರಸ್ತೆ ಬದಿಯಲ್ಲಿದ್ದ ಮರವೊಂದು ಅಡ್ಡಲಾಗಿ ಉರುಳಿ ಬಿದ್ದಿತ್ತು. ಅದೇ ಮಾರ್ಗವಾಗಿ ತೆರಳುತ್ತಿದ್ದ ಗುರುರಾಜ್ ಗಂಟಿಹೊಳೆ ಮರ ತೆರವು ಮಾಡಲು ಮುಂದಾಗಿದ್ದರು. ಈ ವೇಳೆ ಅಲ್ಲೇ ಪಕ್ಕದಲ್ಲಿದ್ದ ಮತ್ತೊಂದು ಚಿಕ್ಕ ಮರ ಏಕಾಏಕಿ ಶಾಸಕರ ಮೇಲೆ ಉರುಳಿ ಬಿದ್ದಿದೆ.

ಮರ ಉರುಳುವ ಸದ್ದಿಗೆ ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಅವರ ಜೊತೆಗಿದ್ದವರು ಸ್ಥಳದಿಂದ ಓಡಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಳಿಕ ಶಾಸಕ ಗುರುರಾಜ್ ಗಂಟಿಹೊಳೆ ಸಾಮಾನ್ಯ ಕಾರ್ಯಕರ್ತರಂತೆ ತಮ್ಮ ಜೊತೆಗಿದ್ದವರ ಜೊತೆ ಸೇರಿ ರಸ್ತೆ ಮೇಲೆ ಬಿದ್ದಿದ್ದ ಮರವನ್ನು ತೆರವುಗೊಳಿಸಿದ್ದಾರೆ.
ಸದ್ಯ ಮುಂಗಾರು ಚುರುಕುಗೊಂಡಿದ್ದು ಮುಂದಿನ 24 ಗಂಟೆಯಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಎಚ್ಚರಿಕೆ ನೀಡಿದೆ. ಮುಂದಿನ 24 ಗಂಟೆಯಲ್ಲಿ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 115 ಮಿ.ಮೀನಿಂದ 204 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಕೇರಳದ ಕರಾವಳಿಯಿಂದ ಮಹಾರಾಷ್ಟ್ರದ ಕರಾವಳಿವರೆಗೆ ಗಾಳಿಯ ಒತ್ತಡ ಕಡಿಮೆಯಾದ ವಾತಾವರಣ ರೂಪಗೊಂಡಿರುವುದರಿಂದ ಮುಂದಿನ ಐದು ದಿನ ರಾಜ್ಯದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಹೀಗಾಗಿ ಕರಾವಳಿ ಭಾಗದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ವೇಗವಾಗಿ ಬೀಸುತ್ತಿರುವ ಗಾಳಿಗೆ ಅಲ್ಲಲ್ಲಿ ಮರಗಳು ಧರೆಗುರುಳುತ್ತಿದೆ.











Click it and Unblock the Notifications