ಶಾಸಕರ ತರಬೇತಿಗೆ ವೀರೇಂದ್ರ ಹೆಗ್ಗಡೆ, ರವಿಶಂಕರ್ ಗುರೂಜಿಗೆ ಆಹ್ವಾನ-ಎಸ್‌ಡಿಪಿಐ ಕೆಂಡಾಮಂಡಲ
ಉಡುಪಿ, ಜೂನ್ 23: ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಹಾಗೂ ರವಿಶಂಕರ್ ಗುರೂಜಿಯವರ ಭೇಟಿಗೆ ಮುಸ್ಲಿಂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದೆ. ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಉಡುಪಿಯಲ್ಲಿ ಖಾದರ್ ನಡೆಯನ್ನು ಖಂಡಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಶಾಸಕರಿಗೆ ರವಿಶಂಕರ್ ಗುರೂಜಿಯವರಿಂದ ಸ್ಫೂರ್ತಿದಾಯಕ ಮಾತು ಎಂಬ ಪರಿಕಲ್ಪನೆ ಹುಟ್ಟಿ ಹಾಕಿದ ಯುಟಿ ಖಾದರ್ ನಡೆ ಬುದ್ಧಿಹೀನತನದ ಪರಮಾವಧಿಯಾಗಿದೆ. ನಮ್ಮ ಶಾಸಕರಿಗೆ ಪಾಠ ಮಾಡಬೇಕಾಗಿರುವುದು ಸಂವಿಧಾನದ ಬಗ್ಗೆ, ಆಡಳಿತ ಯೋಜನೆ ಕುರಿತು ಪಾಠ ಮಾಡಬೇಕು. ರವಿಶಂಕರ್ ಗುರೂಜಿ ಒಬ್ಬ ಆಧ್ಯಾತ್ಮಿಕ ವ್ಯಕ್ತಿ ಇವರಿಂದ ಏನು ನಿರೀಕ್ಷೆ ಮಾಡಬಹುದು ಎಂದು ಪ್ರಶ್ನಿಸಿದ್ದಾರೆ.

ವೀರೇಂದ್ರ ಹೆಗ್ಗಡೆಯವರು ವಿಶ್ವ ಹಿಂದು ಪರಿಷತ್ ಜೊತೆ ಗುರುತಿಸಿಕೊಂಡವರು. ಎಲ್ಲಾ ಸಂಪನ್ಮೂಲ ವ್ಯಕ್ತಿಗಳು ಸಂಘ ಪರಿವಾರದ ಹಿನ್ನೆಲೆಯವರು. ಯು.ಟಿ. ಖಾದರ್ ಅವರು ಸಂಘ ಪರಿವಾರ ಹಿನ್ನೆಲೆಯ ವ್ಯಕ್ತಿಗಳನ್ನ ಕರೆದು ಏನು ಸಾಧಿಸಲು ಹೊರಟಿದ್ದಾರೆ ಗೊತ್ತಿಲ್ಲ. ಯಾರ ಮೆಚ್ಚುಗೆ ಗಳಿಸಲು ಈ ರೀತಿ ಮಾಡುತ್ತಿದ್ದೀರಿ ಗೊತ್ತಿಲ್ಲ. ಸಂವಿಧಾನ ತಜ್ಞರಿಂದ ಹೊಸ ಶಾಸಕರಿಗೆ ಪಾಠ ಹೇಳಿಸಿ. ವೈಜ್ಞಾನಿಕವಾಗಿ ವಿಚಾರ ಮಂಡಿಸುವವರಿಂದ ಪಾಠ ಹೇಳಿಸಿ. ಸ್ಪೀಕರ್ ಖಾದರ್ ನಡೆ ಖಂಡನೀಯ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.
ತಾವು ಜಾತ್ಯತೀತರು ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಶಾಸಕರು ಖಾದರಿಗೆ ಸ್ವಲ್ಪ ಬುದ್ಧಿ ಹೇಳಿ. ಕೋಮು ದ್ವೇಷದಿಂದ ಮರಣ ಹೊಂದಿದವರಿಗೆ ಬಿಜೆಪಿ ಸರಕಾರ ಸೂಕ್ತ ಪರಿಹಾರ ನೀಡಲಿಲ್ಲ. ಬಿಜೆಪಿ ಬಹುದೊಡ್ಡ ತಾರತಮ್ಯ ಮಾಡಿತ್ತು. ಹರ್ಷ, ಪ್ರವೀಣ್ ನೆಟ್ಟಾರು ಹತ್ಯೆ ಆದಾಗ 50 ಲಕ್ಷ ಕೊಟ್ಟಿದ್ದರು. ಆದರೆ ಮಸೂದ್ ,ಫಾಝಿಲ್ ,ಶಮೀರ್ ,ಶಾಫಾಜ್ ಯಾರಿಗೂ ಪರಿಹಾರ ನೀಡಿರಲಿಲ್ಲ. ಸರಕಾರ ತಾರತಮ್ಯ ಮಾಡಿತ್ತು. ಈಗ ಕಾಂಗ್ರೆಸ್ ಸರಕಾರ ಅವರನ್ನು ಪರಿಗಣಿಸಿರುವುದನ್ನು ಸ್ವಾಗತಿಸುತ್ತೇವೆ ಎಂದರು.
ನೀವು ತಾರತಮ್ಯ ನೀತಿಯ ವಿರುದ್ಧ ಇದ್ರೆ ಮಾನವೀಯತೆ ಆಧಾರದಲ್ಲಿ ಪ್ರವೀಣ್ ನೆಟ್ಟಾರು ಪತ್ನಿಯ ಉದ್ಯೋಗ ಮುಂದುವರಿಸಿದ್ದೀರಿ. ಪ್ರವೀಣ್ ನೆಟ್ಟಾರು ಪತ್ನಿಗೆ ಅನುಕಂಪದ ಆಧಾರದಲ್ಲಿ ಸರಕಾರಿ ಉದ್ಯೋಗ ಕೊಡುವುದಾದರೆ,ಜಲೀಲ್,ಫಾಜಿಲ್,ದೀಪಕ ರಾವ್, ದಿನೇಶ್ ಕನ್ಯಾಡಿ ಕುಟುಂಬಕ್ಕೆ ಯಾಕೆ ಇಲ್ಲ. ಇದು ತಾರತಮ್ಯ ಅಲ್ಲವೇ ಮುಖ್ಯಮಂತ್ರಿಗಳೇ? ದಿನೇಶ್ ಕನ್ಯಾಡಿ, ಅಶ್ರಫ್ ಕಳಾಯಿ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ಬೆಳಗಾಂ ನ ಶಬಾದ್ ಮೈಸೂರಿನ ಸದಾಕತ್ ಕುಟುಂಬಕ್ಕೆ ಪರಿಹಾರ ಕೊಟ್ಟಿಲ್ಲ. ನೀವು ಒಂದು ತಪ್ಪನ್ನು ಸರಿಪಡಿಸುವುದಾದರೆ ಸಮಗ್ರವಾಗಿ ಸರಿಪಡಿಸಿರಿ ಎಂದು ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
ಬಿಜೆಪಿಯ ಮೂರುವರೆ ವರ್ಷದ ಕೋಮು ದ್ವೇಷದ ರಾಜಕೀಯಕ್ಕೆ ಬೇಸತ್ತ ಜನರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ. ಘೋಷಿಸಿದ ಎಲ್ಲಾ ಗ್ಯಾರಂಟಿಯನ್ನು ಕಾಂಗ್ರೆಸ್ ಜನತೆಗೆ ನೀಡಬೇಕು. ಗ್ಯಾರಂಟಿ ಘೋಷಿಸುವಾಗ ಷರತ್ತು ಹೇಳಿರಲಿಲ್ಲ. ಗ್ಯಾರಂಟಿ ಜಾರಿ ಮಾಡಲು ಅನೇಕ ಷರತ್ತು ಹಾಕುತ್ತಿದ್ದಾರೆ ಇದು ಸರಿಯಲ್ಲ ಸರಳಿಕೃತಗೊಳಿಸಿ. ಜೂನ್ ತಿಂಗಳ ವಿದ್ಯುತ್ ಬಿಲ್ ಜನತೆಗೆ ಶಾಕ್ ನೀಡಿದೆ.ವಿದ್ಯುತ್ ದರ ಏರಿಕೆಗೆ ಬಿಜೆಪಿಯನ್ನು ನೀವು ದೂರುವುದಾದರೆ ನಿಮಗೂ ಬಿಜೆಪಿಗೂ ಏನು ವ್ಯತ್ಯಾಸ? ಎಂದು ಪ್ರಶ್ನಿಸಿದ್ದಾರೆ.
ಈಗ ನೀವು ಡಬಲ್ ಬಿಲ್ ನೀಡ್ತಾ ಇದ್ದೀರಿ. 13% ನಷ್ಟ ಅಂತೀರಿ 16% ದರ ಏರಿಸಿದಿರಿ. ವಿದ್ಯುತ್ ಹೊಂದಾಣಿಕೆ ಶುಲ್ಕ ಯೂನಿಟ್ ಗೆ 53 ಪೈಸೆ ಇದ್ದದ್ದು ರೂ.2.43 ಪೈಸೆಗೆ ಏರಿಸಿದ್ದೀರಿ. ಅನಗತ್ಯವಾಗಿ ಮೀಟರ್ ರೀಡಿಂಗ್ ಲೇಟ್ ಮಾಡ್ತಾ ಇದ್ದೀರಿ.180 ಯೂನಿಟ್ ಖರ್ಚು ಮಾಡುವವರಿಗೆ 200 ಯೂನಿಟ್ ಆಗುವವರೆಗೆ ಕಾಯುತ್ತಾ ಇದ್ದೀರಿ. ಎಸ್ಕಾಂಗಳು ಈ ರೀತಿಯ ಷಡ್ಯಂತ್ರ ಮಾಡುತ್ತಿದೆ ಎಂದು ಮಜೀದ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಆಡಳಿತದಲ್ಲಿ ಮುಸಲ್ಮಾನರಿಗೆ ಭಯದ ವಾತಾವರಣ ಇತ್ತು. ಮುಸಲ್ಮಾನರು ಕ್ರೈಸ್ತರು ಸರಾಸಗಟಾಗಿ ಕಾಂಗ್ರೆಸ್ಸಿಗೆ ಮತದಾನ ಹಾಕಿದರು. ಶೇಕಡ 92 ಮುಸಲ್ಮಾನರು ಕಾಂಗ್ರೆಸ್‌ಗೆ ಮತ ಹಾಕಿದರು. ಈ ಬಾರಿ ಕಾಂಗ್ರೆಸ್ ಪಡೆದ ಮತದಲ್ಲಿ ಶೇ. 30 ಮತ ಮುಸ್ಲಿಮರಿಂದ ಬಂದಿದೆ. ಒಟ್ಟು ಶೇಕಡ 60 ಅಲ್ಪಸಂಖ್ಯಾತರು, ಎಸ್ ಸಿ ,ಎಸ್ ಟಿ ಇಂದ ಕಾಂಗ್ರೆಸ್ ಮತ ಪಡೆದಿದೆ. ಒಂದು ಚುನಾವಣೆಯಲ್ಲಿ ಏರಿಳಿತ ಆದ ತಕ್ಷಣ ಎಸ್‍ಡಿಪಿಐ ರಾಜಕೀಯ ಭವಿಷ್ಯ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಕೂಡಾ ಯಥಾ ಸ್ಥಿತಿ ವಾದಿಗಳು. ಕಾಂಗ್ರೆಸ್ ಸರಿ ಇದಿದ್ದರೆ ಬಿಜೆಪಿ ದುರಾಡಳಿತ ಮಾಡುತ್ತಿರುವುದಿಲ್ಲ. ಕೆಲವು ಕ್ಷೇತ್ರಗಳಲ್ಲಿ ನಾವು ಉತ್ತಮ ಸ್ಪರ್ಧೆ ನೀಡಿದ್ದೇವೆ ಎಂದು ಅಬ್ದುಲ್ ಮಜೀದ್ ಹೇಳಿದ್ದಾರೆ.
ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ 70ಕ್ಕೂ ಹೆಚ್ಚು ಶಾಸಕರಿಗೆ 3 ದಿನಗಳ ಕಾಲ ತರಬೇತಿ ಶಿಬಿರ ಏರ್ಪಡಿಸಲಾಗಿದ್ದು, ರವಿಶಂಕರ್ ಗುರೂಜಿ, ಡಾ.ಡಿ ವಿರೇಂದ್ರ ಹೆಗ್ಗಡೆ ಸೇರಿದಂತೆ ಅನೇಕರನ್ನು ಸ್ಪೀಕರ್ ಯು.ಟಿ ಖಾದರ್ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ನ ಕೆಲವು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ದೂರು ನೀಡಿದ್ದಾರೆಂದು ವರದಿಯಾಗಿದ್ದು, ಸದ್ಯ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲು ನಿರ್ಧರಿಸಲಾಗಿದ್ದ ಕೆಲವು ಗಣ್ಯರ ಹೆಸರನ್ನು ಕೈಬಿಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.












Click it and Unblock the Notifications