ಬಳ್ಳಾರಿ ವಿಭಜನೆ ಕುರಿತು ಸರ್ಕಾರದ ತೀರ್ಮಾನಕ್ಕೆ ಬದ್ಧವಾಗಿರಬೇಕು; ಶ್ರೀರಾಮುಲು
ಉಡುಪಿ, ಸೆಪ್ಟೆಂಬರ್ 28: ಬಳ್ಳಾರಿ ಜಿಲ್ಲೆ ವಿಭಜನೆ ವಿಚಾರದಲ್ಲಿ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಶ್ರೀರಾಮುಲು, "ಜನರ ಭಾವನೆ ಬೇರೆ ಬೇರೆ ರೀತಿ ಇದೆ. ಸರ್ಕಾರದ ತೀರ್ಮಾನಕ್ಕೆ ಕೆಲವೊಮ್ಮೆ ಬದ್ಧರಾಗಿರಬೇಕಾಗುತ್ತದೆ. ಸಿಎಂ ಜೊತೆ ಈ ಬಗ್ಗೆ ಮಾತನಾಡಿದ್ದೇನೆ. ಆ ಭಾಗದ ಎಲ್ಲಾ ಹೋರಾಟಗಾರರ ಜೊತೆ ಮಾತನಾಡಿದ್ದೇನೆ" ಎಂದು ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶ್ರೀರಾಮುಲು, "ನಾನು, ಸಿಎಂ ಕೂತು ಒಂದು ತೀರ್ಮಾನಕ್ಕೆ ಬರುತ್ತೇವೆ. ಆ ಭಾಗ ಅಭಿವೃದ್ಧಿ ಆಗಬೇಕು ಅನ್ನುವುದು ನನ್ನ ಅಭಿಪ್ರಾಯ. ದೊಡ್ಡ ಜಿಲ್ಲೆಯಾದ ಕಾರಣ ಬೇರೆ ಬೇರೆ ತೊಂದರೆ ಬರಬಾರದು. ಈ ವಿಚಾರದಲ್ಲಿ ನನ್ನ ವೈಯಕ್ತಿಕ ತೀರ್ಮಾನ ಇಲ್ಲ. ಸೋಮಶೇಖರ್ ರೆಡ್ಡಿ ನನ್ನ ಸಹೋದರ. ಅವರು ನನ್ನ ಜೊತೆಗಿರುವ ಶಾಸಕ. ಅವರ ಜೊತೆ ಕುಳಿತು ಒಂದು ತೀರ್ಮಾನಕ್ಕೆ ಬರುತ್ತೇನೆ" ಎಂದು ಪ್ರತಿಕ್ರಿಯೆ ನೀಡಿದ್ದಾರೆ.

"ವಿಜಯನಗರ ಜಿಲ್ಲೆ ಘೋಷಣೆ ಮಾಡಬಾರದು. ಆನಂದ್ ಸಿಂಗ್ ರಾಜೀನಾಮೆಗೆ ನೀಡಿದ್ದಕ್ಕೆ ಸರ್ಕಾರ ಹೊಸ ಜಿಲ್ಲೆ ಘೋಷಣೆ ಮಾಡಬಾರದು. ಜಿಲ್ಲೆಯಲ್ಲಿ ನಾಲ್ಕು ಜನ ಬಿಜೆಪಿ ಶಾಸಕರಿದ್ದೇವೆ. ನಮ್ಮನ್ನು ಕರೆದು ಸಿಎಂ ಬಿಎಸ್‍ವೈ ಚರ್ಚೆ ನಡೆಸಬೇಕು" ಎಂದು ಸೋಮಶೇಖರ್ ರೆಡ್ಡಿ ಹೇಳಿದ್ದರು.
"ಹಿಂದುಳಿದ ವರ್ಗದ ಜನರ ಸೇವೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸಿಎಂ ಯಡಿಯೂರಪ್ಪ ಒಂದು ಮಹತ್ವದ ಅವಕಾಶ ಕೊಟ್ಡಿದ್ದಾರೆ. ಈ ಅವಕಾಶವನ್ನು ಬಳಸಿಕೊಂಡು ಹಿಂದುಳಿದ ಸಮಾಜಕ್ಕೆ ನ್ಯಾಯ ಕೊಡುವ ಕೆಲಸ ಮಾಡುವೆ" ಎಂದು ಹೇಳಿದ್ದಾರೆ.












Click it and Unblock the Notifications