ಸೌಜನ್ಯ ಹೋರಾಟದಲ್ಲಿ ಹೈಡ್ರಾಮ: ಪ್ರತಿಭಟನೆ ನಡುವೆ ಧರ್ಮಸ್ಥಳದ ಪರವಾಗಿ ಜೈಕಾರ ಹಾಕಿದ ಮಹಿಳೆಯರು
ಉಡುಪಿ , ಆಗಸ್ಟ್ 30: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣ ಮರು ತನಿಖೆಗೆ ಆಗ್ರಹಿಸಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಹೈಡ್ರಾಮ ನಡೆದಿದೆ. ಸೌಜನ್ಯ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಉಡುಪಿ ಕೃಷ್ಣ ಮಠದ ಮುಂಭಾಗದಿಂದ ಪ್ರತಿಭಟನೆ ಮೆರವಣಿಗೆ ಆರಂಭವಾಗಿ ಅಜ್ಜರಕಾಡು ಹುತಾತ್ಮರ ಸ್ಮಾರಕದಲ್ಲಿ ಪ್ರತಿಭಟನಾ ಸಭೆ ನಡೆದಿದೆ
ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನಾ ಜಾಥಾದಲ್ಲಿ ಭಾಗವಹಿಸಿ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ. ಆದರೆ ಇದರ ನಡುವೆ ಸೌಜನ್ಯ ಹೋರಾಟದ ನಡುವೆ ಧರ್ಮಸ್ಥಳದ ಪರವಾಗಿ ನೂರಾರು ಮಹಿಳೆಯರು ಆಗಮಿಸಿ ಕ್ಷೇತ್ರದ ಪರವಾಗಿ ಜೈಕಾರ ಕೂಗಿದ್ದಾರೆ.

ಸೌಜನ್ಯ ಪರ ಹೋರಾಟ ಸ್ಥಳದಲ್ಲಿ ಹೈಡ್ರಾಮ ನಡೆದಿದ್ದು, ಧರ್ಮಸ್ಥಳ ದೇವಸ್ಥಾನದ ಪರ ಮಹಿಳೆಯರು ಜಮಾಯಿಸಿ ಅಪಪ್ರಚಾರ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಎರಡೂ ಕಡೆಯವರ ನಡುವೆ ವಾಗ್ವಾದ ನಡೆದಿದ್ದು, ಪೊಲೀಸರು ಮಹಿಳೆಯರನ್ನು ಪ್ರತಿಭಟನಾ ಸ್ಥಳದಿಂದ ಹೊರಗೆ ಕಳುಹಿಸಿದ್ದಾರೆ.
ಹೋರಾಟದ ನೇತೃತ್ವ ವಹಿಸಿದ ಮಹೇಶ್ ತಿಮರೋಡಿ ಭಾಷಣ ಮಾಡಿ ಹೋರಾಟದ ಸಭೆಗೆ ಬರಲು ಯತ್ನಿಸಿದ್ದ ಶ್ರೀಕ್ಷೇತ್ರ ಧರ್ಮಸ್ಥಳ- ಡಾ.ಹೆಗ್ಗಡೆ ಅಭಿಮಾನಿಗಳ ಕ್ರಮವನ್ನು ಖಂಡಿಸಿದ್ದಾರೆ.
ಕಳೆದ 11 ವರ್ಷದಿಂದ ನಾವು ಹೋರಾಟ ಮಾಡುತ್ತಿದ್ದೇವೆ. ನಮ್ಮ ಪ್ರತಿಭಟನೆಗೆ ಕಪ್ಪು ಚುಕ್ಕೆ ಬಂದರೆ ಸುಮ್ಮನಿರಲ್ಲ. ನಾವು ಶಾಂತ ರೀತಿಯ ಹೋರಾಟ ಮಾಡುತ್ತಿದ್ದೇವೆ. ಈ ಪರಿಪಾಠ ಮುಂದುವರೆದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಉಡುಪಿಯಲ್ಲಿ ಮಹೇಶ್ ಶೆಟ್ಟಿ ಪ್ರತಿಭಟನಾ ತಿಮರೋಡಿ ಹೇಳಿದ್ದಾರೆ.

ಕೋಟಿ ಸಂಖ್ಯೆಯಲ್ಲಿ ಧರ್ಮಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ
ಮುಂದೆ ಪ್ರತಿಭಟನೆಯನ್ನು ತಡೆದರೆ ಲಕ್ಷ ಕೋಟಿ ಸಂಖ್ಯೆಯಲ್ಲಿ ಧರ್ಮಸ್ಥಳದಲ್ಲಿ ಪ್ರತಿಭಟನೆ ಮಾಡುತ್ತೇವೆ. ಸಿಎಂ, ಗೃಹಸಚಿವರು, ಪ್ರಧಾನಿಗೆ ಎಚ್ಚರಿಕೆ ಕೊಡುತ್ತೇನೆ. ಯಾಕೆ ನೀವು ಆರೋಪಿಗಳನ್ನು ರಕ್ಷಿಸಿ ಇಟ್ಟಿದ್ದೀರಿ? ಮಾತೆಯರನ್ನು ನಮ್ಮ ಮೇಲೆ ಚೂ ಬಿಡ್ತೀರಾ? ನಮ್ಮ ಬಳಿಯೂ ಮಾತೆಯರಿದ್ದಾರೆ ಎಂತೆಂತಹ ದುರ್ಗಾದೇವಿಯರಿದ್ದಾರೆ ಗೊತ್ತಾ?. ದುಡ್ಡಿಗೋಸ್ಕರ ಅಲ್ಲ ಸತ್ಯ ಧರ್ಮ ನ್ಯಾಯಕ್ಕೋಸ್ಕರ ಹೋರಾಡುವ ದುರ್ಗೆಯರಿದ್ದಾರೆ ಎಂದು ತಿಮರೋಡಿ ಹೇಳಿದ್ದಾರೆ.
ಭಾಷಣ ಮಾಡುವುದು ನಮಗೆ ತೀಟೆ ಅಲ್ಲ. ನಮ್ಮ ತೆರಿಗೆಯ ಹಣ ಪ್ರಕರಣದ ತನಿಖೆಗೆ ಬಳಕೆಯಾಗಿದೆ. ಪ್ರಕರಣ ತನಿಖೆಗೆ 80 ಕೋಟಿ ಅಧಿಕ ಖರ್ಚಾಗಿದೆ. ಜನರ ತೆರಿಗೆ ಹಣಕ್ಕೆ ಬೆಲೆ ಇಲ್ವಾ? ರಾಜ್ಯ ಸರ್ಕಾರ ಜನರ ಒತ್ತಾಯವನ್ನು ಗಂಭೀರವಾಗಿ ತೆಗೆದುಕೊಳ್ಳಬೇಕೆಂದು ತಿಮರೋಡಿ ಆಗ್ರಹಿಸಿದ್ದಾರೆ.












Click it and Unblock the Notifications