"ಸಿದ್ದರಾಮಯ್ಯನಂಥ ಚೀಪ್ ರಾಜಕಾರಣಿಗೆ ಇವೆಲ್ಲ ಅರ್ಥ ಆಗಲ್ಲ"; ಸಿಡುಕಿದ ಶೋಭಾ ಕರಂದ್ಲಾಜೆ
ಉಡುಪಿ, ಅಕ್ಟೋಬರ್ 24: "ಸಾವರ್ಕರ್ ಗೆ ಸಿದ್ದರಾಮಯ್ಯ ಅವಮಾನ ಮಾಡಿದ್ದಾರೆ, ಅವರು ದೇಶದ ಜನತೆಯ ಕ್ಷಮೆ ಕೇಳಬೇಕು" ಎಂದು ಆಗ್ರಹಿಸಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ.
ಉಡುಪಿಯಲ್ಲಿ ಮಾತನಾಡಿದ ಅವರು, "ಸಾವರ್ಕರ್ ಕುಟುಂಬವೇ ದೇಶಕ್ಕಾಗಿ ತ್ಯಾಗ ಮಾಡಿದೆ. ಸಿದ್ದರಾಮಯ್ಯಗೆ ಓಟು, ಜಾತಿ ಧರ್ಮ ಮಾತ್ರ ಕಾಣುತ್ತೆ. ನಮಗೆ ಸಾವರ್ಕರ್ ಅವರ ತ್ಯಾಗ ಮುಖ್ಯ. ಅವರಿಗೆ ಭಾರತ ರತ್ನ ಗೌರವ ಸಿಗಬೇಕು. ಇದು ಸಿದ್ದರಾಮಯ್ಯನಂಥ ಕ್ಷುಲ್ಲಕ ರಾಜಕಾರಣಿಗೆ ಅರ್ಥ ಆಗಲ್ಲ. ಸಿದ್ದರಾಮಯ್ಯನಂಥ ಚೀಪ್ ರಾಜಕಾರಣಿಗೆ ಇವೆಲ್ಲ ಅರ್ಥ ಆಗಲ್ಲ" ಎಂದು ಕಿಡಿಕಾರಿದ್ದಾರೆ.
"ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಸಿದ್ದರಾಮಯ್ಯ ತಿಳಿದುಕೊಳ್ಳಲಿ, ಸಿದ್ದರಾಮಯ್ಯನವರ ಸರ್ಟಿಫಿಕೇಟ್ ಸಾವರ್ಕರ್ ಗೆ ಬೇಡ" ಎಂದು ವ್ಯಂಗ್ಯ ಮಾಡಿದ್ದಾರೆ.

ಮಹಾರಾಷ್ಟ್ರ, ಹರಿಯಾಣ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿ, "ಎರಡೂ ರಾಜ್ಯದಲ್ಲಿ ಉತ್ತಮ ಚುನಾವಣೆ ಮಾಡಿದ್ದೇವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಉತ್ತಮ ಫಲಿತಾಂಶ ಪಡೆದಿದೆ. ಮಹಾರಾಷ್ಟ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದೇವೆ, ಹರಿಯಾಣದಲ್ಲೂ ಬಿಜೆಪಿ ಸರ್ಕಾರವೇ ರಚನೆಯಾಗುತ್ತೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಡಿಕೆಶಿಗೆ ಜಾಮೀನು ದೊರೆತ ವಿಚಾರವಾಗಿಯೂ ಮಾತನಾಡಿದ ಅವರು, "ಡಿಕೆಶಿ ಬಿಡುಗಡೆಗೆ ವಿಜಯೋತ್ಸವ ಯಾಕೆ?, ಸಿದ್ದರಾಮಯ್ಯನವರೇ ಯಾಕೆ ವಿಜಯೋತ್ಸವ ಮಾಡ್ತಿದ್ದಿರಿ, ಡಿಕೆಶಿ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲಿನಿಂದ ಬಿಡುಗಡೆಯಾಗಿದ್ದಾ?" ಎಂದು ಪ್ರಶ್ನಿಸಿದ್ದಾರೆ.
"ಡಿಕೆಶಿಯವರ ಅನೇಕ ಕೇಸುಗಳು ಇನ್ನೂ ತನಿಖಾ ಹಂತದಲ್ಲಿವೆ. ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಡಿಕೆಶಿ ಅವರ ಕೇಸುಗಳ ವಿಚಾರಣೆ ಮೊದಲು ಮುಗೀಲಿ. ಚುನಾವಣಾ ರಾಜಕೀಯಕ್ಕೆ ನಂತರ ಬರಲಿ" ಎಂದು ಹೇಳಿದ್ದಾರೆ.












Click it and Unblock the Notifications