ಮೋದಿ ಸಂಪುಟದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಪಟ್ಟಿಗೆ ರಾಜ್ಯದ ಸಂಸದರೊಬ್ಬರ ಸೇರ್ಪಡೆ
ಉಡುಪಿ, ಡಿ 22: ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪನವರ ಒಬ್ಬ ಪುತ್ರ ಬಿ.ವೈ.ವಿಜಯೇಂದ್ರ ಬೈಇಲೆಕ್ಷನ್ ಸ್ಪೆಷಲಿಸ್ಟ್ ಆಗಿ ಸದ್ದು ಮಾಡುತ್ತಿದ್ದರೆ, ಇನ್ನೋರ್ವ ಪುತ್ರ, ಎರಡೆರಡು ಬಾರಿ ಸಂಸದರಾಗಿರುವ ಬಿ.ವೈ.ರಾಘವೇಂದ್ರ ಅಷ್ಟೇನೂ ಸುದ್ದಿಯಲ್ಲಿ ಇಲ್ಲ.
ಕಳೆದ ಲೋಕಸಭಾ ಚುನಾವಣೆಯಲ್ಲಿ 28ಕ್ಕೆ 25 ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿತ್ತು. ಆದರೆ, ನಿರ್ಮಲಾ ಸೀತಾರಾಮನ್ (ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದು) ಹೊರತು ಪಡಿಸಿ, ಮೋದಿ ಸಂಪುಟದಲ್ಲಿ ಸ್ಥಾನ ಸಿಕ್ಕಿದ್ದು ಮೂವರಿಗೆ ಮಾತ್ರ. ಅವರೆಂದರೆ, ದಿ.ಸುರೇಶ್ ಅಂಗಡಿ, ಸದಾನಂದ ಗೌಡ, ಪ್ರಲ್ಹಾದ್ ಜೋಷಿ.
ಈಗ, ಯಡಿಯೂರಪ್ಪನವರ ಪುತ್ರ ರಾಘವೇಂದ್ರ ಸಚಿವ ಸ್ಥಾನದ ತನ್ನ ಆಕಾಂಕ್ಷೆಯನ್ನು ವ್ಯಕ್ತ ಪಡಿಸಿದ್ದಾರೆ. ಜಿಲ್ಲೆಯ ಕುಂದಾಪುರದ ಸಿದ್ದಾಪುರದ ಬಿಜೆಪಿ ಕಚೇರಿಯಲ್ಲಿ ಮಾತನಾಡುತ್ತಿದ್ದ ರಾಘವೇಂದ್ರ, "ಕೇಂದ್ರದಲ್ಲಿ ಸಚಿವ ಸ್ಥಾನ ಎನ್ನುವುದೊಂದು ದೊಡ್ಡ ಹುದ್ದೆ. ನನಗೆ ಸಚಿವ ಸ್ಥಾನ ನೀಡುವ ಬಗ್ಗೆ ಮಾಹಿತಿಯಿಲ್ಲ"ಎಂದು ಹೇಳಿದರು.

"ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಈ ಬಗ್ಗೆ ನಿರ್ಧರಿಸುತ್ತಾರೆ. ನನಗಿಂತಲೂ ಅನುಭವಿಗಳು ಪಕ್ಷದಲ್ಲಿ ಬೇಕಾದಷ್ಟು ಜನ ಇದ್ದಾರೆ. ನಿಮ್ಮೆಲ್ಲರ ಹಾರೈಕೆ, ಶುಭ ಕಾಮನೆಯಿಂದ ಸಚಿವ ಸ್ಥಾನ ಸಿಗುವ ದಿನ ಆದಷ್ಟು ಬೇಗ ಬರಲಿ"ಎಂದು ರಾಘವೇಂದ್ರ, ಕೇಂದ್ರದಲ್ಲಿ ಸಚಿವ ಸ್ಥಾನದ ತಮ್ಮ ಕನಸನ್ನು ತೋಡಿಕೊಂಡಿದ್ದಾರೆ.
ದೆಹಲಿಯಲ್ಲಿ ನಡೆಯುತ್ತಿರುವ ಅನ್ನದಾತರ ಪ್ರತಿಭಟನೆಯ ಬಗ್ಗೆ ವಿವಾದಕಾರಿ ಹೇಳಿಕೆಯನ್ನು ನೀಡಿದ ರಾಘವೇಂದ್ರ, "ದೆಹಲಿಯಲ್ಲಿ ರೈತರ ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಸಂಘಟನೆಯ ಸದಸ್ಯರು"ಎಂದು ಹೇಳಿದರು.
Recommended Video
"ರೈತರು ಈ ದೇಶದ ಬೆನ್ನೆಲುಬು ಎನ್ನುವುದನ್ನು ನಾವು ಕಾಂಗ್ರೆಸ್ಸಿಗರಿಂದ ಕಲಿಯಬೇಕಾಗಿಲ್ಲ. ರೈತರ ಹಿತ ಕಾಪಾಡಲೆಂದೇ ನೂತನ ಕೃಷಿ ಮಸೂದೆಯನ್ನು ಜಾರಿಗೆ ತರಲು ಹೊರಟಿರುವುದು. ವಿರೋಧ ಪಕ್ಷಗಳು ಪ್ರತಿಭಟನಾಕಾರರ ತಲೆ ಕೆಡಿಸುತ್ತಿದ್ದಾರೆ"ಎಂದು ರಾಘವೇಂದ್ರ ಆರೋಪಿಸಿದರು.












Click it and Unblock the Notifications