'ಪಟ್ಟದ ದೇವರ ವಾಪಸ್ ಕೊಡಲಿಲ್ಲ ಅಂದರೆ ಕ್ರಿಮಿನಲ್ ಕೇಸ್ ಹಾಕ್ತೀನಿ'
Recommended Video

ಉಡುಪಿ ಜಿಲ್ಲೆ, ಜುಲೈ 17: ಶೀರೂರು ಮಠದ ಪಟ್ಟದ ದೇವರನ್ನು ವಾಪಸ್ ಪಡೆಯುವ ಸಲುವಾಗಿ ಕ್ರಿಮಿನಲ್ ಕೇಸ್ ಹಾಕುವುದಕ್ಕೂ ಹಿಂತೆಗೆಯುವುದಿಲ್ಲ ಎಂದಿದ್ದಾರೆ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿ.
ಕಳೆದ ಕೆಲ ತಿಂಗಳ ಅಂತರದಲ್ಲೇ ನಡೆಯುತ್ತಿರುವ ಅಷ್ಟಮಠಗಳ ಮಧ್ಯದ ಜಟಾಪಟಿ ಮತ್ತೊಮ್ಮೆ ನ್ಯಾಯಾಲಯದ ಮೆಟ್ಟಿಲೇರುವ ಹಂತದಲ್ಲಿದೆ. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಶೀರೂರು ಸ್ವಾಮೀಜಿ ಮುಂದಾದಾಗ ಸಾಕಷ್ಟು ಗೊಂದಲ ಉಂಟಾಗಿತ್ತು. ಈ ವೇಳೆ ಬಹಿರಂಗಗೊಂಡ ಒಂದು ವಿಡಿಯೋ ತುಣುಕು ಅವರ ವಿರುದ್ಧ ನೈತಿಕ ಪ್ರಶ್ನೆಗಳನ್ನು ಹುಟ್ಟುಹಾಕಿತ್ತು.
ಈ ಕಾರಣಗಳಿಗೆ ಶೀರೂರು ಸ್ವಾಮೀಜಿ ವಿರುದ್ಧ ಇತರ ಮಠಾಧೀಶರು ತಿರುಗಿಬಿದ್ದಿದ್ದರು. ಶೀರೂರು ಸ್ವಾಮೀಜಿ ಸನ್ಯಾಸ ಧರ್ಮ ಪಾಲನೆ ಮಾಡುತ್ತಿಲ್ಲ, ಹಾಗಾಗಿ ಅವರು ಶಿಷ್ಯ ಸ್ವೀಕಾರ ಮಾಡಬೇಕು ಎಂದು ತೀರ್ಮಾನಿಸಿದ್ದರು. ಶೀರೂರು ಸ್ವಾಮೀಜಿ ತಮ್ಮ ಅನಾರೋಗ್ಯ ಸಂದರ್ಭದಲ್ಲಿ ಅದಮಾರು ಮಠಕ್ಕೆ ನೀಡಿದ್ದ ತಮ್ಮ ಪಟ್ಟದ ದೇವರನ್ನು ವಾಪಸು ನೀಡಲು ಉಳಿದ ಮಠಾಧೀಶರು ನಿರಾಕರಿಸಿದ್ದರು.

ಆಗಿನಿಂದ ಈ ಜಟಾಪಟಿ ನಡೆಯುತ್ತಿದೆ. ಇದೀಗ ಕ್ರಿಮಿನಲ್ ಕೇಸ್ ದಾಖಲಿಸಲು ಶೀರೂರು ಸ್ವಾಮೀಜಿ ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ. ನಂಬಿಕಸ್ತರೆಂದು ನೀಡಿದ ವಸ್ತುವನ್ನು ವಾಪಸು ನೀಡದಿರುವುದು ದರೋಡೆಗೆ ಸಮ ಎಂದಿರುವ ಶೀರೂರು ಸ್ವಾಮೀಜಿ, ಪೇಜಾವರ ಸ್ವಾಮೀಜಿ ಸಹಿತ ತನ್ನನ್ನು ವಿರೋಧಿಸುತ್ತಿರುವ ಇತರ ಮಠಾಧೀಶರ ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದ್ದಾರೆ.
ಶಿಷ್ಯ ಸ್ವೀಕಾರ ಮಾಡುವುದು ನನ್ನ ತೀರ್ಮಾನಕ್ಕೆ ಬಿಟ್ಟ ವಿಚಾರ. ಪಟ್ಟದ ದೇವರನ್ನು ವಾಪಸು ನೀಡದೆ ಇತರ ಮಠಾಧೀಶರು ದ್ರೋಹ ಮಾಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.












Click it and Unblock the Notifications