ಶೀರೂರು ಶ್ರೀ ಸಾವು : ಈ ವಾರ ಎಫ್ಎಸ್ಎಲ್ ವರದಿ?
ಉಡುಪಿ, ಆಗಸ್ಟ್.20: ಶೀರೂರು ಶ್ರೀ ನಿಗೂಢ ಸಾವಿಗೆ ಸಂಬಂಧಿಸಿದಂತೆ ಬಹುದಿನಗಳಿಂದ ಕಾಯುತ್ತಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಈ ವಾರ ಬರಲಿದೆ. ಶೀರೂರು ಮಠದ ಲಕ್ಷ್ಮೀವರ ತೀರ್ಥರು ಸಾವನ್ನಪ್ಪಿ ಒಂದು ತಿಂಗಳೇ ಕಳೆದಿದೆ.
ಪ್ರಾಥಮಿಕ ಮರಣೋತ್ತರ ಪರೀಕ್ಷೆಯ ವರದಿ ಈಗಾಗಲೇ ಕೈಸೇರಿದ್ದು ,ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ. ಇನ್ನೆರಡು ಮೂರು ದಿನಗಳಲ್ಲಿ ಎಫ್ ಎಸ್ ಎಲ್ ವರದಿ ಪೊಲೀಸರ ಕೈ ಸೇರುವ ನಿರೀಕ್ಷೆ ಇದೆ. ಬಳಿಕವಷ್ಟೇ ಶೀರೂರು ಸಾವಿನ ನಿಖರ ಕಾರಣ ಬಹಿರಂಗಗೊಳ್ಳಲಿದೆ.
ಇದೆಲ್ಲವೂ ಅಂದುಕೊಂಡಂತೆಯೇ ಆದರೆ ಶೀರೂರು ಶ್ರೀ ಆರಾಧನೆ ಸಹಿತ ವಿವಿಧ ಹೋಮಗಳು ಸೋದೆ ಶ್ರೀಗಳ ನೇತೃತ್ವದಲ್ಲಿ ನಡೆಯಲಿದೆ. ಹಾಗೆಯೇ ಕಳೆದ ಒಂದು ತಿಂಗಳಿನಿಂದ ಸ್ಥಗಿತಗೊಂಡಿದ್ದ ಶೀರೂರು ಮೂಲಮಠದ ರಂಗ ಪೂಜೆಯೂ ಸಾರ್ವಜನಿಕರ ಭಾಗವಹಿಸುವಿಕೆಯೊಂದಿಗೆ ನಡೆಯಲಿದೆ.

ಸಾವಿನ ಬಳಿಕ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ಮೂಲಮಠ ಪ್ರವೇಶ ನಿರ್ಬಂಧಿಸಲಾಗಿತ್ತು. ಒಟ್ಟಾರೆ ಶೀರೂರು ಮಠದ ಶ್ರೀಗಳ ಸಾವಿನ ಹಿಂದಿರುವ ಹಲವು ಅನುಮಾನಗಳಿಗೆ ಎಫ್ ಎಸ್ ಎಲ್ ವರದಿ ಉತ್ತರ ನೀಡುವುದರೊಂದಿಗೆ ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯವೂ ಸಿಗಲಿದೆ.












Click it and Unblock the Notifications