ಉಡುಪಿಯಲ್ಲಿ ಶಂಕರಪುರ ಮಲ್ಲಿಗೆಗೆ ಡಿಮ್ಯಾಂಡಪ್ಪೊ ಡಿಮ್ಯಾಂಡು
ಉಡುಪಿ, ಆಗಸ್ಟ್.24: ಕೆಲವು ತಿಂಗಳುಗಳ ಹಿಂದೆಯಷ್ಟೇ ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದ ಶಂಕರಪುರ ಮಲ್ಲಿಗೆಗೆ ಶ್ರಾವಣ ಮಾಸ ಆರಂಭವಾದ ಮೇಲೆ ಬೇಡಿಕೆ ಹೆಚ್ಚಿದೆ. ನಾಗರ ಪಂಚಮಿಯೊಂದಿಗೆ ಸಾಲು ಸಾಲು ಹಬ್ಬಗಳು ಬರುತ್ತಿದ್ದು, ಶಂಕರಪುರ ಮಲ್ಲಿಗೆಗೆ ಬೇಡಿಕೆ ಕುದುರಿದೆ.
ಮಂಗಳವಾರದಿಂದ ಮಲ್ಲಿಗೆ ಅಟ್ಟಿಗೆ ದರ 820 ರೂ., ಜಾಜಿಗೆ 420 ರೂ. ಇತ್ತು.(4 ಚೆಂಡು-ಒಂದು ಅಟ್ಟಿ). ಇಂದು ವರಮಹಾಲಕ್ಷ್ಮೀ ಹಬ್ಬವಾದ್ದರಿಂದ ಮಲ್ಲಿಗೆ ದರ 950 ರೂ. ಆಗಿದೆ. ಪಾತಾಳಕ್ಕೆ ಕುಸಿದಿದ್ದ ಶಂಕರಪುರ ಮಲ್ಲಿಗೆ ದರ ಮೂರನೇ ವಾರದಲ್ಲಿ ಗಗನಕ್ಕೇರಿತ್ತು. ಸಾಧಾರಣ ಬೇಡಿಕೆಯಿಂದಾಗಿ ಜುಲೈ ತಿಂಗಳಲ್ಲಿ ಸ್ಥಿರತೆ ಕಾಯ್ದುಕೊಂಡಿತ್ತು.
ಈ ಮಲ್ಲಿಗೆಗೆ ಬೇಡಿಕೆ ಹೆಚ್ಚಲು ಕಾರಣವೂ ಇದೆ. ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ಮೊಗ್ಗು ಹಾಳಾಗಿವೆ. ಬುಡದಲ್ಲಿ ಪಾಚಿ ಬೆಳೆದು ಬಿಸಿಲಿನ ತಾಪವಿಲ್ಲದೆ ಗಿಡ ಚಿಗುರೊಡೆಯುವುದಿಲ್ಲ. ಬಿಸಿಲು ಇಲ್ಲದಿದ್ದರೆ ಮಲ್ಲಿಗೆ ಹೂವಿನ ಮೊಗ್ಗುಗಳು ಕೊಳೆತು ಹಾಳಾಗಿ ಇಳುವರಿ ಕಡಿಮೆಯಾಗುತ್ತದೆ.

ಜಗತೆ ಗಿಡಕ್ಕೆ ಬರುವ ಕೀಟ ಮತ್ತು ರೋಗಭಾದೆಯಿಂದ ಗಿಡಗಳು ನಾಶವಾಗುತ್ತವೆ. ಬೆಳೆ ಕಡಿಮೆಯಾದ್ದರಿಂದ ಮಾರುಕಟ್ಟೆಗೆ ಬರುವ ಹೂವಿನ ಪ್ರಮಾಣವೂ ಕಡಿಮೆಯಾಗಿದೆ. ಅಲ್ಲದೆ ಶುಭ ಸಮಾರಂಭಗಳು ಪ್ರಾರಂಭವಾದ್ದರಿಂದ ಬೇಡಿಕೆ ಹೆಚ್ಚಾಗಿ ಮಲ್ಲಿಗೆ ದರ ಏರಲು ಕಾರಣವಾಗಿದೆ.
ಮಲ್ಕಿಂಗ್ ಶೀಟ್ ವರದಾನ
ಶಂಕರಪುರ ಮಲ್ಲಿಗೆ ಬೆಳೆಗೆ ಮಳೆಗಾಲದಲ್ಲಿ ಮಲ್ಕಿಂಗ್ ಶೀಟ್ ಅಳವಡಿಸಿ ಕಳೆ ಮತ್ತು ಕೀಟ ಭಾದೆಯಿಂದ ರಕ್ಷಿಸಿ ಉತ್ತಮ ಬೆಳೆ ತೆಗೆಯುವ ಪ್ರಯತ್ನದಲ್ಲಿ ಕಾಪು ತಾಲೂಕಿನ, ಶಿರ್ವ ಗ್ರಾಮದ ರಾಜ್ಯ ಪ್ರಶಸ್ತಿ ವಿಜೇತ, ಪ್ರಗತಿಪರ ಕೃಷಿಕ ಕಲ್ಲೊಟ್ಟು ರಾಘವೇಂದ್ರ ನಾಯಕ್ ಸಫಲತೆ ಕಂಡಿದ್ದಾರೆ.

ಭಾರೀ ಮಳೆಯ ನಡುವೆಯೂ ಅವರು ದಿನಕ್ಕೆ ಆರು ಚೆಂಡು ಹೂವಿನ ಇಳುವರಿ ತೆಗೆಯುತ್ತಾರೆ. ರಕ್ಷಣೆ ಹೊದಿಕೆ ಅಳವಡಿಸುವುದರಿಂದ ಮಳೆಗಾಲದಲ್ಲಿ ಬರುವ ಕೀಟ ಬಾಧೆ, ಶಿಲೀಂದ್ರ ಬಾಧೆ ಮತ್ತು ಕಳೆಗಳಿಂದ ಮಲ್ಲಿಗೆ ಗಿಡಗಳನ್ನು ರಕ್ಷಿಸಲು ಸಹಕಾರಿಯಾಗಿದೆ. ಮೊಗ್ಗು ಹಾಳಾಗದೆ ಉತ್ತಮ ಗುಣಮಟ್ಟದ ಮಲ್ಲಿಗೆ ಸಿಗುತ್ತದೆ ಎಂದು ಮಲ್ಲಿಗೆ ಕೃಷಿಕರು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications