ಕಣ್ಮರೆಯಾಗಿರುವ ಸುವರ್ಣ ತ್ರಿಭುಜ ಬೋಟ್ ಅಪಘಾತಕ್ಕೀಡಾಯಿತೇ?
ಉಡುಪಿ, ಜನವರಿ 14: ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ಹೋಗಿದ್ದ ಸುವರ್ಣ ತ್ರಿಭುಜ ಬೋಟ್ ಅಪಘಾತಕ್ಕೀಡಾಯಿತೇ? ಇಂತಹದೊಂದು ಅನುಮಾನ ಕಾಡಲಾರಂಭಿಸಿದೆ. ಅದಕ್ಕೆ ಪುಷ್ಠಿ ನೀಡುವಂತೆ ಹಡಗೊಂದರ ವಯರ್ ಲೆಸ್ ಮೆಸೇಜ್ ಅನುಮಾನ ಹುಟ್ಟುಹಾಕಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಮೀನುಗಾರಿಕೆಗೆ ಸುವರ್ಣ ತ್ರಿಭುಜ ಬೋಟ್ ನಲ್ಲಿ ತೆರಳಿದ್ದ ಮಲ್ಪೆಯ 7 ಮಂದಿ ಮೀನುಗಾರರು ನಾಪತ್ತೆಯಾಗಿ ಒಂದು ತಿಂಗಳು ಕಳೆದಿದೆ. ಆದರೆ ಇಲ್ಲಿಯವರೆಗೆ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಅಥವಾ ಕಣ್ಮರೆಯಾಗಿರುವ ಬೋಟ್ ಬಗ್ಗೆ ಸುಳಿವು ಕೂಡ ಸಿಕ್ಕಿಲ್ಲ. ಆದರೆ ನಾಪತ್ತೆಯಾಗಿರುವ ಬೋಟ್ ಹಾಗೂ ಅದರಲ್ಲಿದ್ದ ಮೀನುಗಾರರ ಶೋಧ ಕಾರ್ಯ ಮುಂದುವರೆದಿದೆ.
ಡಿಸೆಂಬರ್ 13 ರಂದು ಮಲ್ಪೆ ಬಂದರ್ ನಿಂದ ಹೊರಟಿದ್ದ ಸುವರ್ಣ ತ್ರಿಭುಜ ಬೋಟ್ ನ ಸಂಪರ್ಕ ಡಿಸೆಂಬರ್ 15 ರಂದು ಕಡಿತವಾಗಿತ್ತು. ಆನಂತರದಿಂದ ಈವರೆಗೆ ಬೋಟ್ ಮತ್ತು ಮೀನುಗಾರರ ಬಗ್ಗೆ ಸುಳಿವು ದೊರೆತಿಲ್ಲ.

ಈ ನಡುವೆ ಬೋಟ್ ಕಣ್ಮರೆಯಾದ ಪ್ರದೇಶದಲ್ಲಿ ಸಂಚರಿಸಿದ ಎಲ್ಲಾ ಹಡಗುಗಳ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಒಂದು ಮೂಲದ ಪ್ರಕಾರ ಆ ಭಾಗದಲ್ಲಿ ಹಾದು ಹೋದ ಹಡಗಿನ ಮೂಲಕ ಒಂದು ವಯರ್ ಲೆಸ್ ಮೆಸೇಜ್ ರವಾನಿಸಲಾಗಿತ್ತು. ಆ ಮೆಸೇಜಿನಲ್ಲಿ ಬೋಟು ಅಪಘಾತದ ಬಗ್ಗೆ ಪ್ರಸ್ತಾಪವಾಗಿತ್ತು ಎಂದು ಹೇಳಲಾಗಿದೆ.
ವಯರ್ ಲೆಸ್ ಮೆಸೆಜ್ ರವಾನಿಸಿದ ಆ ಹಡಗು ಯಾವುದು? ಯಾವ ಭಾಗದಲ್ಲಿ ಸಂಚರಿಸುತ್ತಿದ್ದಾಗ ಈ ವಯರ್ ಲೆಸ್ ಮೆಸೆಜ್ ರವಾನಿಸಲಾಗಿದೆ? ಅವರು ನೋಡಿದ ಬೋಟು ಅಪಘಾತದ ಯಾವುದು ಎಂಬುದನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದು, ಉಡುಪಿ ಪೊಲೀಸರು ಮಹಾರಾಷ್ಟ್ರದ ಮಾಲ್ವಾನಲ್ಲಿ ಬೀಡುಬಿಟ್ಟು ತನಿಖೆ ಮುಂದುವರಿಸಿದ್ದಾರೆ.
ಉಡುಪಿ ಎಸ್.ಪಿ ಮಾಲ್ವಾನ್ ಹಾಗೂ ಮಹಾರಾಷ್ಟ್ರದ ದೇವಘಡ ಎಸ್.ಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಲ್ಲಿನ ಮೀನುಗಾರ ಸಂಘಗಳಿಂದ ಸ್ಥಳೀಯ ಪೊಲೀಸ್ ಠಾಣೆಯ ಮೂಲಕ ಮಾಹಿತಿಯನ್ನು ಕೂಡ ಕಲೆ ಹಾಕುತ್ತಿದ್ದಾರೆ.












Click it and Unblock the Notifications