ಉಡುಪಿ: ಮುಸ್ಲಿಂ ವ್ಯಾಪಾರಿಯ ಚಪ್ಪಲಿ ಅಂಗಡಿಗೆ ಸಾಲಿಗ್ರಾಮ ಹೆಸರು; ಹಿಂಜಾವೇ ವಿರೋಧ
ಉಡುಪಿ, ಏಪ್ರಿಲ್ 2: ದೇವಸ್ಥಾನಗಳ ಜಾತ್ರೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಪ್ರವೇಶ ನಿಷೇಧ ವಿಚಾರ ಉಡುಪಿ ಜಿಲ್ಲೆಯಲ್ಲಿ ಮತ್ತೊಂದು ಮಗ್ಗುಲನ್ನು ಪಡೆದಿದೆ.
ಮುಸ್ಲಿಂ ವ್ಯಾಪಾರಿಯೊಬ್ಬ ತನ್ನ ಚಪ್ಪಲಿ ಅಂಗಡಿಗೆ ಧಾರ್ಮಿಕ ಮಹತ್ವದ ಊರಿನ ಹೆಸರು ಇಟ್ಟಿರುವುದನ್ನು ವಿರೋಧಿಸಿ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು, ವ್ಯಾಪಾರಿಯು ಆ ಹೆಸರನ್ನು ಅಂಗಡಿಯಿಂದ ತೆಗೆಯಬೇಕೆಂದು ಪಟ್ಟಣ ಪಂಚಾಯತ್‌ಗೆ ಮನವಿ ಮಾಡಿದ್ದಾರೆ.
ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಲಿಗ್ರಾಮದಲ್ಲಿ ಮುಸ್ಲಿಂ ವ್ಯಾಪಾರಿ ತನ್ನ ಚಪ್ಪಲಿ ಅಂಗಡಿಗೆ "ಸಾಲಿಗ್ರಾಮ ಫೂಟ್‌ವೇರ್' ಅಂತಾ ಹೆಸರಿಟ್ಟಿದ್ದು, ವ್ಯಾಪಾರಿ ಅಂಗಡಿಯ ಹೆಸರನ್ನು ಬದಲು ಮಾಡಬೇಕೆಂದು ಹಿಂದೂ ಜಾಗರಣ ವೇದಿಕೆ ಒತ್ತಾಯ ಮಾಡಿದೆ.

ಚಪ್ಪಲಿ ಅಂಗಡಿ ಹೆಸರಿನಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ. ಸಾಲಿಗ್ರಾಮ ಧಾರ್ಮಿಕ ಕ್ಷೇತ್ರಗಳು ಇರುವ ಊರು. ಧಾರ್ಮಿಕ ಮಹತ್ವದ ಊರಿನ ಹೆಸರನ್ನೇ ಚಪ್ಪಲಿ ಅಂಗಡಿಗೆ ಇಡುವುದು ಬೇಡ. ಹಿಜಾಬ್ ತೀರ್ಪು ವಿರೋಧಿಸಿ ಚಪ್ಪಲಿ ಅಂಗಡಿ ಮಾಲೀಕ ತನ್ನ ಅಂಗಡಿಯನ್ನೂ ಬಂದ್ ಮಾಡಿದ್ದಾನೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾದ ಹಿನ್ನಲೆಯಲ್ಲಿ ಚಪ್ಪಲಿ ಅಂಗಡಿ ಹೆಸರನ್ನು ಬದಲಾಯಿಸಬೇಕೆಂದು ಹಿಂದೂ ಜಾಗರಣ ವೇದಿಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಅಧಿಕಾರಿಗೆ ಮನವಿ ಮಾಡಿದ್ದಾರೆ.

ಪಟ್ಟಣ ಪಂಚಾಯತ್ ಅಧಿಕಾರಿಗಳಿಗೆ ಪತ್ರದಲ್ಲಿ, "ಸಾಲಿಗ್ರಾಮ ಪೇಟೆಯಲ್ಲಿರುವ ಚಪ್ಪಲಿ ಅಂಗಡಿ ಒಂದಕ್ಕೆ ಸಾಲಿಗ್ರಾಮ ಫೂಟ್‌ವೇರ್ ಎಂದು ಹೆಸರಿಟ್ಟು ವ್ಯವಹಾರ ನಡೆಸುತ್ತಿರುವ ಮುಸ್ಲಿಂ ಸಮುದಾಯದ ವ್ಯಕ್ತಿ ಹಿಜಾಬ್ ಕುರಿತು ಕೋರ್ಟ್ ಆದೇಶದ ವಿರುದ್ಧ ತನ್ನ ಅಂಗಡಿಯನ್ನು ಮುಚ್ಚಿರುವುದಲ್ಲದೇ ತನ್ನ ಸಮುದಾಯದ ಇತರರಿಗೂ ಒತ್ತಾಯ ಪೂರ್ವಕವಾಗಿ ಬಂದ್ ಮಾಡಿಸಿರುತ್ತಾನೆ".
"ಸಾಲಿಗ್ರಾಮ ಎನ್ನುವುದು ನಮ್ಮ ಪೂಜ್ಯನೀಯ ಕ್ಷೇತ್ರ. ಊರಿನ ಹೆಸರು ಮತ್ತು ಹಿಂದೂ ಧರ್ಮದ ಪೂಜನೀಯ ಕಲೆಯ ಹೆಸರು ಸಾಲಿಗ್ರಾಮ ಆಗಿರುವುದರಿಂದ ಈ ವ್ಯಕ್ತಿಯು ತನ್ನ ಅಂಗಡಿಯ ಹೆಸರನ್ನು ತಕ್ಷಣವೇ ಬದಲಾಯಿಸಬೇಕಾಗಿ ಆದೇಶ ನೀಡಲು ತಮ್ಮಲ್ಲಿ ಹಿಂದೂ ಜಾಗರಣ ವೇದಿಕೆ ಆಗ್ರಹಿಸುತ್ತದೆ," ಅಂತಾ ಪತ್ರದಲ್ಲಿ ಬರೆಯಲಾಗಿದೆ.

ಈ ಬಗ್ಗೆ ಮಾತನಾಡಿರುವ ಸಾಲಿಗ್ರಾಮ ಪಟ್ಟಣ ಪಂಚಾಯತ್ ಮಾಜಿ ಸದಸ್ಯ ಕರುಣಾಕರ ಪೂಜಾರಿ, ಸಾಲಿಗ್ರಾಮದಲ್ಲಿ ಗ್ರಾಮಸ್ಥರು ಆರಾಧಿಸುವ ಲಕ್ಷ್ಮೀ ಉಗ್ರ ನರಸಿಂಹ ದೇವರು ಮತ್ತು ಆಂಜನೇಯ ದೇವರು ಪ್ರಧಾನ ದೇವರಾಗಿದ್ದಾರೆ. ಸಾಲಿಗ್ರಾಮ ಹೆಸರಿಗೇ ಧಾರ್ಮಿಕ ನಂಬಿಕೆ ಇವೆ. ಸಾಲಿಗ್ರಾಮ ಹೆಸರನ್ನು ಅನ್ಯಧರ್ಮೀಯ ವ್ಯಕ್ತಿ ತನ್ನ ಚಪ್ಪಲಿ ಅಂಗಡಿಗೆ ಇಟ್ಟಿರುವುದು ಧಾರ್ಮಿಕ ನಂಬಿಕೆಗಳಿಗೆ ತೊಡಕಾಗಿದೆ.
ವ್ಯಾಪಾರಿಯ ಅಂಗಡಿ ತೆಗೆಯಬೇಕೆಂದು ಒತ್ತಾಯ ಮಾಡುತ್ತಿಲ್ಲ, ಆದರೆ ಹಿಂದೂ ಧಾರ್ಮಿಕ ನಂಬಿಕೆಗೆ ಧಕ್ಕೆಯಾಗಿರುವ ಹಿನ್ನಲೆಯಲ್ಲಿ ಪಂಚಾಯತ್ ಅಧಿಕಾರಿಗಳು ಕೂಡಲೇ ಹೆಸರು ತೆಗೆಯುವಂತೆ ಸೂಚಿಸಬೇಕೆಂದು ಒತ್ತಾಯಿಸಿದ್ದಾರೆ.












Click it and Unblock the Notifications