ಉಡುಪಿ ಜಿಲ್ಲೆಯಲ್ಲಿ ಮನೆ ಕಟ್ಟಲು ಮಳೆ ನೀರು ಕೊಯ್ಲು ಕಡ್ಡಾಯ
ಉಡುಪಿ, ಜುಲೈ 11: ಉಡುಪಿ ಜಿಲ್ಲೆಯ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ ನಿರ್ಮಾಣ ಸಂದರ್ಭ ಮಳೆ ನೀರು ಮರುಪೂರಣ ಯೋಜನೆ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಗಿದೆ. ಇಲ್ಲದಿದ್ದರೆ, ನಿರ್ಮಾಣ ಪೂರ್ಣಗೊಂಡಿದೆ ಎಂದು ನೀಡಲಾಗುವ ಪ್ರಮಾಣಪತ್ರ (ಕಂಪ್ಲೀಷನ್ ಸರ್ಟಿಫಿಕೇಟ್) ಸಿಗುವುದಿಲ್ಲ ಎಂದು ತಿಳಿದುಬಂದಿದೆ.
ಭಾರತ ಸರ್ಕಾರವು ಜಲಭದ್ರತೆಗಾಗಿ ಜಲಶಕ್ತಿ ಅಭಿಯಾನ ಎಂಬ ಕಾರ್ಯಕ್ರಮವನ್ನು ರಾಜ್ಯ ಸರ್ಕಾರದ ಸಹಯೋಗದಲ್ಲಿ ಹಮ್ಮಿಕೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಜಲ ಸಂರಕ್ಷಣೆ ಆಂದೋಲನವನ್ನು ಪರಿಣಾಮಕಾರಿಯಾಗಿ ಕೈಗೊಳ್ಳಲು ನಿನ್ನೆ ಸಂಜೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರ ಅಧ್ಯಕ್ಷತೆಯಲ್ಲಿ ತೀರ್ಮಾನಿಸಲಾಯಿತು.
ಈಗಾಗಲೇ ಪ್ರಗತಿಯಲ್ಲಿರುವ ಮನೆಗಳು, ಕಾಮಗಾರಿ ಪೂರ್ಣಗೊಳ್ಳುವ ಮೊದಲು ಮಳೆ ನೀರು ಕೊಯ್ಲು ಯೋಜನೆಯನ್ನು ಕೈಗೊಳ್ಳಬೇಕು. ಹೊಸದಾಗಿ ನಿರ್ಮಾಣ ಗೊಳ್ಳಲಿರುವ ಮನೆಗಳ ಮೂಲ ಯೋಜನೆಯಲ್ಲಿಯೇ ಮಳೆ ನೀರು ಕೊಯ್ಲು ಯೋಜನೆಯೂ ಸೇರಿರಬೇಕು. ಇಲ್ಲದಿದ್ದರೆ ಅಂತಹ ಮನೆ ನಿರ್ಮಾಣಕ್ಕೆ ಲೈಸೆನ್ಸ್ ನೀಡದಂತೆ ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಹಾಗೂ ಗ್ರಾಮ ಪಂಚಾಯತ್ ಗಳಿಗೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೂಚಿಸಿದರು.

ತೆರೆದ ಬಾವಿ, ಕೊಳವೆ ಬಾವಿ ಅಥವಾ ಪ್ರತ್ಯೇಕ ಇಂಗು ಗುಂಡಿ ಕೊರೆದು ಮಳೆ ನೀರು ಶೇಖರಣೆಗೆ ಯೋಜನೆ ಹಾಕಿಕೊಳ್ಳಬೇಕು. ಇತ್ತೀಚಿನ ಬೇಸಿಗೆಯಲ್ಲಿ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗಿದ್ದು, ಈ ಹಿನ್ನೆಲೆಯಲ್ಲಿ ಮಳೆ ನೀರು ಕೊಯ್ಲು ಕಡ್ಡಾಯಗೊಳಿಸಲಾಗುವುದು ಎಂದು ಅವರು ಹೇಳಿದರು.












Click it and Unblock the Notifications