ಉಡುಪಿ ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಜ್ಜು
ಉಡುಪಿ, ಆಗಸ್ಟ್.05: ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳ ಒಟ್ಟು 97 ವಾರ್ಡ್ ಗಳಿಗೆ ಮೀಸಲಾತಿ ಪ್ರಕಟಗೊಂಡ ಬೆನ್ನಲ್ಲೇ, ಚುನಾವಣೆ ಘೋಷಣೆಯಾಗುತ್ತಿದ್ದಂತೆ ಪ್ರಮುಖ ರಾಜಕೀಯ ಪಕ್ಷಗಳು ಹಾಗೂ ಆಕಾಂಕ್ಷಿ ಅಭ್ಯರ್ಥಿಗಳು ತಡಬಡಾಯಿಸಿಕೊಂಡು ಎದ್ದು ಚುನಾವಣೆಗೆ ಸಜ್ಜಾಗುತ್ತಿದ್ದಾರೆ.
ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷ ಈ ಚುನಾವಣೆಗೆ ಸಣ್ಣ ಮಟ್ಟದ ತಯಾರಿಗೆ ಸಿದ್ಧತೆ ನಡೆಸುತ್ತಿದ್ದಂತೆಯೇ, ಪಕ್ಷ ಹಾಗೂ ಆಕಾಂಕ್ಷಿಗಳ ನಿರೀಕ್ಷೆಗೂ ಮೊದಲೇ ಚುನಾವಣೆ ಪ್ರಕಟಣೆ ಹೊರಬಿದ್ದಿದೆ. ಇನ್ನೊಂದು ತಿಂಗಳೊಳಗೆ ಚುನಾವಣಾ ಪ್ರಕ್ರಿಯೆ ಮುಗಿದು, ಹೊಸ ಅಭ್ಯರ್ಥಿಗಳ ಆಯ್ಕೆಗೆ ಮುಹೂರ್ತ ನಿಗದಿ ಆಗಿರುವುದರಿಂದ ಇವರೆಲ್ಲರೂ ಚುನಾವಣೆಗೆ ಸಜ್ಜಾಗಿ ಮತದಾರರ ಮುಂದೆ ನಿಲ್ಲಬೇಕಾದ ಅನಿವಾರ್ಯತೆ ಎದುರಾಗಿದೆ.
ಮುಂಬರುವ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯೂ ಎಲ್ಲ ಪ್ರಮುಖ ಪಕ್ಷಗಳಿಗೂ ಅಗ್ನಿ ಪರೀಕ್ಷೆಯ ಕಣವಾಗಿದೆ. ಕಮ್ಯುನಿಸ್ಟ್ ಪಕ್ಷ ಕುಂದಾಪುರದಲ್ಲಿ ಕೆಲವು ಸ್ಥಾನಗಳನ್ನು ಪಡೆಯುವ ಸಾಧ್ಯತೆ ಇದ್ದರೂ, ಉಳಿದೆಡೆಗಳಲ್ಲಿ ಅವುಗಳ ಸಾಮರ್ಥ್ಯ ಇನ್ನು ಸಾಬೀತಾಗಿಲ್ಲ.
ಕರಾವಳಿಯಲ್ಲಿ ಈವರೆಗೆ ಲೆಕ್ಕಕ್ಕಿಲ್ಲದಂತಿದ್ದ ಜೆಡಿಎಸ್, ರಾಜ್ಯ ರಾಜಕೀಯದ ಬದಲಾದ ಸನ್ನಿವೇಶದಲ್ಲಿ ಮೈಕೊಡವಿಕೊಂಡು ಎದ್ದು ಕುಳಿತಿದೆ.

ಬಿಜೆಪಿ ಜಯ
ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ 2013 ರಲ್ಲಿ ನಡೆದ ಚುನಾವಣೆಯಲ್ಲಿ ಉಡುಪಿ ಮತ್ತು ಕಾರ್ಕಳದಲ್ಲಿ ಕಾಂಗ್ರೆಸ್ ಮೇಲುಗೈ ಪಡೆದಿದ್ದರೆ , ಕುಂದಾಪುರ ಹಾಗೂ ಸಾಲಿಗ್ರಾಮಗಳಲ್ಲಿ ಬಿಜೆಪಿ ಜಯ ಗಳಿಸಿತ್ತು.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ರಾಜ್ಯದಲ್ಲಿ ಜಯಭೇರಿ ಬಾರಿಸಿದ ಬೆನ್ನಲ್ಲೇ ನಡೆದ 2013ರ ಚುನಾವಣೆಯಲ್ಲಿ ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ 45 ವರ್ಷಗಳಲ್ಲಿ ಮೊದಲ ಬಾರಿ ಬಿಜೆಪಿಯನ್ನು ಹಿಮ್ಮೆಟ್ಟಿಸಿ ಪೂರ್ಣ ಬಹುಮತದೊಂದಿಗೆ ಅಧಿಕಾರಕೇರಿತ್ತು.

2013 ರ ಫಲಿತಾಂಶ
ಕಳೆದ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ 32ರಲ್ಲಿ 22 ಸ್ಥಾನಗಳನ್ನು ಗೆದ್ದುಕೊಂಡಿತ್ತು. 12 ಸ್ಥಾನಗಳು ಬಿಜೆಪಿಯ ಪಾಲಾಗಿದ್ದವು. ಒಂದು ಸ್ಥಾನ ಸ್ವತಂತ್ರ ಅಭ್ಯರ್ಥಿ ಪಾಲಾಗಿದ್ದು, ಆತ ಆ ಬಳಿಕ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಕಾರ್ಕಳ ಟಿಎಂಸಿಯ 23 ಸ್ಥಾನಗಳಲ್ಲಿ ಕಾಂಗ್ರೆಸ್ 12 ಹಾಗೂ ಬಿಜೆಪಿ 11 ಸ್ಥಾನ ಪಡೆದಿತ್ತು.
ಆದರೆ, ಕುಂದಾಪುರ ಪುರಸಭೆಯ 23 ವಾರ್ಡ್ ಗಳಲ್ಲಿ ಬಿಜೆಪಿ 12ನ್ನು ತನ್ನದಾಗಿಸಿಕೊಂಡಿದ್ದರೆ, ಕಾಂಗ್ರೆಸ್ 9 ಹಾಗೂ ಸಿಪಿಎಂ 2 ಸ್ಥಾನಗಳನ್ನು ಪಡೆದಿದ್ದವು. ಸಾಲಿಗ್ರಾಮ ಪಟ್ಟಣ ಪಂಚಾಯತ್ ನ 14 ಸ್ಥಾನಗಳಲ್ಲಿ ಬಿಜೆಪಿ 7 ಹಾಗೂ ಕಾಂಗ್ರೆಸ್ 7 ಸ್ಥಾನಗಳನ್ನು ಪಡೆದು ಸಮಬಲ ಕಾಯ್ದುಕೊಂಡಿದ್ದರು.

ಕಾಂಗ್ರೆಸ್ ಗೆ ಅಗ್ನಿಪರೀಕ್ಷೆ
2013 ಕ್ಕೆ ಹೋಲಿಸಿದರೆ, ಎರಡು ತಿಂಗಳ ಹಿಂದೆ ನಡೆದ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸ್ಪಷ್ಟ ಬಹುಮತ ಪಡೆಯಲು ವಿಫಲವಾಗಿ ಜೆಡಿಎಸ್ ನೊಂದಿಗೆ ಪಾರ್ಟ್ನರ್ ಆಗಿ ಆಡಳಿತ ನಡೆಸುತ್ತಿದೆ. ಉಡುಪಿಯ ಐದೂ ವಿಧಾನಸಭಾ ಸ್ಥಾನಗಳು ಬಿಜೆಪಿಯ ಪಾಲಾಗಿವೆ.
ಹೀಗಾಗಿ ಈ ಬಾರಿ ಉಡುಪಿ ನಗರಸಭೆಯಲ್ಲಿ ಕಾಂಗ್ರೆಸ್ ನಿಜವಾದ ಅಗ್ನಿಪರೀಕ್ಷೆಯನ್ನು ಎದುರಿಸುತ್ತಿದೆ. ಎಲ್ಲ 35 ವಾರ್ಡ್ ಗಳನ್ನು ಗೆಲ್ಲಬೇಕೆಂಬ ಸಂಕಲ್ಪದೊಂದಿಗೆ ಚುನಾವಣೆಗೆ ಸಜ್ಜಾಗಿರುವ ಬಿಜೆಪಿ, ವಿಧಾನಸಭಾ ಚುನಾವಣೆಯಲ್ಲಿ 35 ವಾರ್ಡ್ ಗಳ ಪೈಕಿ 30 ವಾರ್ಡ್ ಗಳಲ್ಲಿ ಸಂಪೂರ್ಣ ಮೇಲುಗೈ ಪಡೆದಿರುವುದು ಅದರ ಗೆಲುವಿನ ನಿರೀಕ್ಷೆಗೆ ರೆಕ್ಕೆಪುಕ್ಕವನ್ನು ಮೂಡಿಸಿದೆ.
ವಿಧಾನಸಭಾ ಚುನಾವಣೆಯಲ್ಲಿ ಕಳೆದುಕೊಂಡ ಸ್ಥಾನವನ್ನು ಉಳಿಸಿಕೊಳ್ಳುತ್ತೇವೆ ಎಂದು ಕಾಂಗ್ರೆಸ್ ವಿಶ್ವಾಸ ವ್ಯಕ್ತಪಡಿಸಿದೆ.

ಮುಖಂಡರು ಏನ್ ಹೇಳ್ತಾರೆ?
"ಈ ಬಾರಿ ಉಡುಪಿ ನಗರಸಭೆ ಮಾತ್ರವಲ್ಲ, ಕುಂದಾಪುರ, ಕಾರ್ಕಳದಲ್ಲೂ ಪಕ್ಷದ ಪರವಾಗಿ ಉತ್ತಮ ಫಲಿತಾಂಶ ಬರುವ ನಿರೀಕ್ಷೆ ಇದೆ" ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಜನಾರ್ದನ ತೋನ್ಸೆ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳುವಂತೆ "ನಗರ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾವು ಸಜ್ಜಾಗಿದ್ದೇವೆ. ಎರಡು ತಿಂಗಳಿನಿಂದ ಪೂರ್ವ ತಯಾರಿ ನಡೆಸಿದ್ದೇವೆ. ಈ ಬಾರಿ ಸಂಪೂರ್ಣವಾಗಿ ಬಿಜೆಪಿ ಪಾಲಾಗುವ ನಿರೀಕ್ಷೆ ನಮಗಿದೆ" .
ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ ಈ ಕುರಿತು ಮಾತನಾಡಿ, ಹಿಂದೆ ನಡೆದ ಸೋಲುಗಳನ್ನು ಗೆಲುವಿನ ಹಾದಿಯೆಂದು ಈ ಬಾರಿ ಪೂರ್ಣವಾಗಿ ಸಜ್ಜಾಗಿದ್ದೇವೆ. ಜಿಲ್ಲೆಯ ನಾಲ್ಕು ಕೇಂದ್ರಗಳಲ್ಲಿಯೂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಗೆಲುವಿನ ನಿರೀಕ್ಷೆ ಇದೆ.












Click it and Unblock the Notifications