Daiva Kola: ಅಬ್ಬರಿಸುವ ಕರಾವಳಿಯ ಪಿಲಿಕೋಲದ ಬಗ್ಗೆ ನಿಮಗೆಷ್ಟು ಗೊತ್ತು?
ಉಡುಪಿ, ಮೇ 07: ಕರಾವಳಿ ಜನರ ಆಚರಣೆಗಳು ಬಲು ವಿಶಿಷ್ಟ ಮತ್ತು ವಿಭಿನ್ನ ಅದರಲ್ಲೂ ಕೋಲದಲ್ಲಿ ಸಾಕಷ್ಟು ಆಚರಣೆಗಳಿವೆ. ಕಾಂತಾರ ಚಿತ್ರ ತೆರೆ ಮೇಲೆ ಬಂದ ಬಳಿಕ ಕರಾವಳಿಗರ ಆಚರಣೆ ವಿಚಾರವಾಗಿ ರಾಜ್ಯದ ಜನರಿಗೆ ಸಾಕಷ್ಟು ಕುತೂಹಲವಿದೆ ಎಂದರೆ ತಪ್ಪಾಗಲಾರದು. ಇಂತಹ ಕುತೂಹಲಕ್ಕೆ ಉತ್ತರ ಎನ್ನುವಂತೆ ಇರುವ ಆಚರಣೆ ಎಂದರೆ ಅದು ಪಿಲಿಕೋಲ. ಇತ್ತೀಚಿಗೆ ಜಿಲ್ಲೆಯಲ್ಲಿ ನಡೆದ ಪಿಲಿಕೋಲ ಸಾಕಷ್ಟು ಜನಾಕರ್ಷಣೆಗೆ ಕಾರಣವಾಗಿದೆ.
ಕರಾವಳಿ ಜಿಲ್ಲೆ ಉಡುಪಿಯಲ್ಲಿ ನಡೆಯುವ ದೈವ ದೇವರುಗಳ ಆಚರಣೆ ವಿಚಾರವನ್ನು ಜಗತ್ತಿನ ಮುಂದೆ ತೆರೆದಿಟ್ಟಿದ್ದು ಕಾಂತಾರ ಚಿತ್ರ. ಕಾಂತಾರ ಚಿತ್ರದಲ್ಲಿ ಕೇವಲ ಕರಾವಳಿಯ ಒಂದು ಅಂಶದ ಆಚರಣೆಯನ್ನು ಅಷ್ಟೇ ಮಾತ್ರ ತೋರಿಸಲಾಗಿದೆ. ಇನ್ನು ಸಾಕಷ್ಟು ವಿಭಿನ್ನ ಮತ್ತು ವಿಶಿಷ್ಟವಾದ ಆಚರಣೆಗಳು ಕರಾವಳಿಯಲ್ಲಿದೆ ಎಂದರೆ ನೀವು ನಂಬಲೇಬೇಕು.

ಕೋಲ ಎಂದಾಕ್ಷಣ ತೆಂಗಿನ ಸಿರಿಯನ್ನು ಕಟ್ಟಿ ಕುಣಿಯುವ ದೈವ ನರ್ತಕನ ದೃಶ್ಯ ನಿಮ್ಮ ಕಣ್ಣ ಮುಂದೆ ಬರುತ್ತದೆ. ಆದರೆ ಈ ಕೋಲದಲ್ಲೂ ಸಾಕಷ್ಟು ವಿಶಿಷ್ಟ ಪ್ರಕಾರಗಳಿವೆ. ಅದರಲ್ಲೂ ಪಿಲಿಕೋಲ ತನ್ನ ವಿಶಿಷ್ಟ ಮತ್ತು ವಿಭಿನ್ನ ಆಚರಣೆಯ ಮೂಲಕ ಕುತೂಹಲಕಾರಿಯಾಗಿ ಉಳಿದುಕೊಂಡಿರುವ ಕೋಲ.
ಪಿಲಿ ಎಂದರೆ ಕನ್ನಡ ಭಾಷೆಯಲ್ಲಿ ಹುಲಿ ಎಂದರ್ಥ, ಈ ಹುಲಿಯ ವೇಷದಾರಿ ಅಥವಾ ದೈವ ನರ್ತಕ ನರ್ತಿಸುವ ಕೋಲವನ್ನು ಪಿಲಿಕೋಲ ಎಂದು ಕರೆಯುತ್ತಾರೆ. ಕರಾವಳಿಯ ಸಪ್ತ ಜಾತ್ರೆಗಳಲ್ಲಿ ಒಂದಾಗಿರುವ ಕಾಪು ಶ್ರೀ ಬ್ರಹ್ಮ ಮುಗ್ಗೇರ್ಕಳ-ಪಿಲಿಚಂಡಿ ದೈವಸ್ಥಾನದಲ್ಲಿ ದ್ವೈ ವಾರ್ಷಿಕವಾಗಿ ನಡೆಯುವ ಪಿಲಿ ಕೋಲವು ವಿಶೇಷ ಜನಾಕರ್ಷಣೆಯೊಂದಿಗೆ ಸಂಪನ್ನಗೊಂಡಿದೆ.

ಇಲ್ಲಿ ದೈವ ನರ್ತಕ ಹುಲಿಯ ವೇಷ ಧರಿಸಿ ನರ್ತಿಸುವುದು ವಿಶೇಷ . 2 ಗಂಟೆಯ ಬಣ್ಣಗಾರಿಕೆಯ ಬಳಿಕ ಅಬ್ಬರದೊಂದಿಗೆ ಪಂಜರದೊಳಗಿಂದ ಹೊರಗೆ ಬಂದ ಹುಲಿಚಂಡಿ ದೈವವು ಬ್ರಹ್ಮರ ಗುಂಡಕ್ಕೆ ಮೂರು ಸುತ್ತು ಬಂದು, ಮಾರಿಯಮ್ಮ ಗುಡಿಯ ಮುಂಭಾಗದಲ್ಲಿ ನೆಡಲಾಗಿದ್ದ ಬಂಟ ಕಂಬವನ್ನೇರಿ ಜೀವಂತ ಕೋಳಿಯನ್ನು ಬಲಿಯಾಗಿ ಸ್ವೀಕರಿಸಿ ಮುಂದೆ ಗ್ರಾಮ ಭೇಟಿಗೆ ತೆರಳುವುದು ಸಂಪ್ರದಾಯವಾಗಿದೆ.
ಈ ಬಾರಿಯ ನಗರ ಪ್ರದಕ್ಷಿಣೆ ಮತ್ತು ಗ್ರಾಮ ಸಂಚಾರದ ವೇಳೆ ಪಿಲಿ ಭೂತವು ಓರ್ವನನ್ನು ಸ್ಪರ್ಶಿಸಿದ್ದು ಸ್ಪರ್ಷದ ಬಳಿಕ ದೈವಸ್ಥಾನಕ್ಕೆ ಓಡಿ ಬಂದು ಪೂರ್ವ ಸಂಪ್ರದಾಯದ ಪದ್ಧತಿಗಳನ್ನು ನೆರವೇರಿಸಲಾಯಿತು. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಮತ್ತು ಮುಂಬಯಿ ಸೇರಿದಂತೆ ದೇಶ-ವಿದೇಶಗಳಿಂದ ಬಂದಿರುವ ಸಹಸ್ರಾರು ಸಂಖ್ಯೆಯ ಭಕ್ತರು ಮತ್ತು ಜಾನಪದಾಸಕ್ತರು ಪಿಲಿ ಕೋಲಕ್ಕೆ ಸಾಕ್ಷಿಯಾದರು.

ಒಟ್ಟಾರೆಯಾಗಿ ರಾಜ್ಯದ ಉಳಿದ ಭಾಗಗಳಿಗೆ ಹೋಲಿಸಿದರೆ ಕರಾವಳಿ ಆಚರಣೆಗಳು ವಿಶಿಷ್ಟ ಮತ್ತು ವಿಭಿನ್ನ ಎನ್ನುವುದಕ್ಕೆ ಪಿಲಿಕೋಲ ಸಾಕ್ಷಿ. ಈ ಭಾಗದಲ್ಲಿ ಆಧುನಿಕತೆ ಎಷ್ಟೇ ಮುಂದುವರೆದಿದ್ದರೂ ಕೂಡ ಇಂದಿಗೂ ಕರಾವಳಿಗರು ತಮ್ಮ ದೈವ ದೇವರುಗಳ ಆಚರಣೆಯಲ್ಲಿ ಸದಾ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ ಎನ್ನುವುದಕ್ಕೆ ಪಿಲಿಕೋಲ ಸಾಕ್ಷಿಯಾಗಿದೆ.












Click it and Unblock the Notifications