ಬೈಕ್ ಸವಾರನಿಗೆ ಗಂಭೀರ ಗಾಯ; ಪೊಲೀಸರ ವಿರುದ್ಧ ತಿರುಗಿಬಿದ್ದ ಜನ
ಉಡುಪಿ, ಅಕ್ಟೋಬರ್ 26: ಬೈಕ್ ನಿಲ್ಲಿಸದೇ ಹೋಗುತ್ತಿದ್ದವನನ್ನು ಪೊಲೀಸರೊಬ್ಬರು ತಡೆಯಲು ಯತ್ನಿಸಿದ ಸಂದರ್ಭ ಸವಾರ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ತೆಕ್ಕಟ್ಟೆ ರಾಘವೇಂದ್ರ ಮಠದ ಮುಂಭಾಗ ನಡೆದಿದೆ.
ಘಟನೆಯಲ್ಲಿ ಬೈಕ್ ಸವಾರ ಕೊರವಡಿ ನಿವಾಸಿ ಉಲ್ಲಾಸ್ (27) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೈಕ್ ಸವಾರ ತೆಕ್ಕಟ್ಟೆಯಿಂದ ಕೊರವಡಿಗೆ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ತೆಕ್ಕಟ್ಟೆ ರಾಘವೇಂದ್ರ ಮಠದ ಹತ್ತಿರ ಹೈವೇ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದು, ಉಲ್ಲಾಸ್ ಗೂನಿಲ್ಲಿಸುವಂತೆ ಸೂಚಿಸಲಾಗಿದೆ. ಆದರೆ ನಿಲ್ಲಿಸದೇ ಇದ್ದ ಕಾರಣ ಪೊಲೀಸ್ ಸಿಬ್ಬಂದಿ ಬೈಕ್ ನ ಹ್ಯಾಂಡಲ್ ಅನ್ನು ಎಳೆದಿದ್ದಾರೆ ಎಂದು ಜನರು ಆರೋಪಿಸಿದ್ದಾರೆ.
ಆಯತಪ್ಪಿ ನೆಲಕ್ಕೆ ಬಿದ್ದ ಉಲ್ಲಾಸ್ ತಲೆಗೆ ಗಂಭೀರವಾಗಿ ಗಾಯವಾಗಿದೆ. ಬೈಕ್ ಹ್ಯಾಂಡಲ್ ಎಳೆದಾಗ ಕಾಲಿನ ಮೇಲೆ ಬೈಕ್ ಬಿದ್ದು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ.

ಪೊಲೀಸರ ಈ ಅಜಾಗರೂಕ ವರ್ತನೆ ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಸ್ಥಳಕ್ಕೆ ಡಿವೈಎಸ್ ಪಿ ಜೈ ಶಂಕರ್ ಆಗಮಿಸಿ ಪರಿಶೀಲನೆ ನಡೆಸಿ ಪ್ರತಿಭಟನಾ ನಿರತರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೋಟ ಪೊಲೀಸ್ ಸ್ಥಳಕ್ಕೆ ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications