ಪೇಜಾವರ ಶ್ರೀಗಳ ಚಿಕಿತ್ಸೆಗೆ ದೆಹಲಿಯ ಏಮ್ಸ್ ವೈದ್ಯರ ನೆರವು
ಉಡುಪಿ, ಡಿಸೆಂಬರ್ 23 : ಉಡುಪಿಯ ಪೇಜಾವರ ಶ್ರೀಗಳಿಗೆ ಚಿಕಿತ್ಸೆ ನೀಡಲು ದೆಹಲಿಯ ಏಮ್ಸ್‌ನ ವೈದ್ಯರ ತಂಡ ಸಹಾಯ ಮಾಡಲಿದೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಮಣಿಪಾಲದ ಕೆಎಂಸಿ ವೈದ್ಯರು ಹೇಳಿದ್ದಾರೆ.
ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಪೇಜಾವರ ಶ್ರೀಗಳು (89) ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಐಸಿಯುನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಯಲು ಏಮ್ಸ್‌ನ ವೈದ್ಯರ ತಂಡ ಆಗಮಿಸಿದೆ.
ಬೆಂಗಳೂರಿನ ಮಣಿಪಾಲ ಆಸ್ಪತ್ರೆ ವೈದ್ಯರು ಮತ್ತು ಏಮ್ಸ್‌ನ ವೈದ್ಯರು ಆಸ್ಪತ್ರೆಗೆ ಬಂದಿದ್ದಾರೆ. ಶ್ರೀಗಳ ಆರೋಗ್ಯ ಸ್ಥಿರವಾಗಿದೆ ಎಂದು ಕೆಎಂಸಿ ಆಸ್ಪತ್ರೆಯಿಂದ ಸೋಮವಾರ ಸಂಜೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಲಾಗಿದೆ.

ತೀವ್ರನಿಗಾ ಘಟಕದಲ್ಲಿಯೇ ಶ್ರೀಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ವೆಂಟಿಲೇಟರ್ ವ್ಯವಸ್ಥೆ ಮಾಡಲಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ಪೇಜಾವರ ಶ್ರೀಗಳು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಆಗ ಅವರಿಗೆ ಜ್ವರವಿತ್ತು. ಶುಕ್ರವಾರವೂ ಜ್ವರ ಕಡಿಮೆಯಾಗದ ಹಿನ್ನಲೆಯಲ್ಲಿ ಮಣಿಪಾಲದ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಶನಿವಾರ ಆಸ್ಪತ್ರೆಗೆ ಭೇಟಿ ನೀಡಿ ಶ್ರೀಗಳ ಆರೋಗ್ಯದ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದಿದ್ದರು. ಬಿಜೆಪಿಯ ಕೇಂದ್ರ ನಾಯಕರು ಸಹ ಶ್ರೀಗಳ ಆರೋಗ್ಯದ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ.












Click it and Unblock the Notifications