ಚುನಾವಣಾ ರಸಪ್ರಶ್ನೆ; ವಿಜೇತರಿಗೆ ಆಕರ್ಷಕ ಬಹುಮಾನ
ಉಡುಪಿ, ಮೇ 02; ಕರ್ನಾಟಕ ವಿಧಾನಸಭೆ ಚುನಾವಣೆ ಮತದಾನಕ್ಕೆ 8 ದಿನ ಬಾಕಿ ಇದೆ. ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸಲು ಉಡುಪಿ ಜಿಲ್ಲಾ ಸ್ವೀಪ್ ಸಮಿತಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆಸಕ್ತರು ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ವಿಜೇತರು ಆಕರ್ಷಕ ಬಹುಮಾನಗಳನ್ನು ಪಡೆಯಬಹುದಾಗಿದೆ.
ಸ್ವೀಪ್ ಸಮಿತಿಯ ಕಾರ್ಯಕ್ರಮಗಳ ಮಾಹಿತಿಗೆಂದೇ ರೂಪಿಸಿರುವ ಇ-ಪತ್ರಿಕೆಯಲ್ಲಿ, ಚುನಾವಣೆಯ ಬಗ್ಗೆ ನಿಮಗೆಷ್ಟು ತಿಳಿದಿದೆ? ಎಂಬ ವಿಷಯದ ಬಗ್ಗೆ, ಪ್ರಜ್ಞಾವಂತರಿಗೊಂದು ಸವಾಲ್ ಎಂಬ ಕುತೂಹಲಕಾರಿ ಪಶ್ನೆಗಳನ್ನು ಒಳಗೊಂಡ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿದೆ.

ಸ್ಪರ್ಧೆಯಲ್ಲಿ ಪ್ರತಿದಿನ ಚುನಾವಣೆಗೆ ಸಂಬಂಧಿಸಿದ 5 ಪ್ರಶ್ನೆಗಳನ್ನು, ಬಹು ಆಯ್ಕೆಯ ಉತ್ತರಗಳನ್ನು ನೀಡಲಾಗುತ್ತದೆ. ಮರುದಿನ 5 ಹೊಸ ಪ್ರಶ್ನೆಗಳೊಂದಿಗೆ, ಹಿಂದಿನ ದಿನದ ಪ್ರಶ್ನೆಗಳಿಗೆ ಸರಿ ಉತ್ತರ ಪ್ರಕಟಿಸಲಾಗುತ್ತದೆ. ಆಯ್ದ ವಿಜೇತರನ್ನು ಪ್ರತಿ ಭಾನುವಾರದ ಇ- ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತದೆ.
ಹೇಗಿರಲಿವೆ ಪ್ರಶ್ನೆಗಳು; ಅವಿರೋಧವಾಗಿ ಆಯ್ಕೆಯಾದ ಏಕೈಕ ರಾಷ್ಟ್ರಪತಿ ಯಾರು, ರಾಷ್ಟ್ರಪತಿ ಚುನಾವಣೆಯಲ್ಲಿ ಯಾರು ಮತದಾನ ಮಾಡಲು ಅರ್ಹರಲ್ಲ, ಒಂದು ರಾಜ್ಯ ಹೊಂದಿರಬಹುದಾದ ಕನಿಷ್ಠ ವಿಧಾನಸಭಾ ಸದಸ್ಯರ ಸಂಖ್ಯೆ ಎಷ್ಟು, ಗರಿಷ್ಠ ವಿಧಾನಸಭಾ ಸದಸ್ಯರ ಸಂಖ್ಯೆ ಎಷ್ಟು, ಯಾವ ಕಾರಣಕ್ಕೆ ಕ್ರಿಟಿಕಲ್ ಮತಗಟ್ಟೆ ಎಂದು ಗುರುತಿಸಲಾಗುತ್ತದೆ ಹೀಗೆ ಪ್ರಶ್ನೆಗಳ ಮಾದರಿ ಇರುತ್ತದೆ.
ಒಂದು ಮತಗಟೆಯಲ್ಲಿ ಇರಬಹುದಾದ ಗರಿಷ್ಠ ಮತದಾರರು ಎಷ್ಟು, ಮತಯಂತ್ರದಲ್ಲಿನ ನಿಯಂತ್ರಣ ಕೋಶವು ಎಷ್ಟು ಅವಧಿಯವರೆಗೆ ಮತದಾನದ ಫಲಿತಾಂಶವನ್ನು ದಾಖಲಿಸಿಟ್ಟುಕೊಳ್ಳಬಹುದು, ಅಂಚೆ ಮತದಾನ ಎಂದರೆ ಏನು, ಒಬ್ಬ ಅಭ್ಯರ್ಥಿ ಒಂದು ಕ್ಷೇತ್ರದಲ್ಲಿ ಎಷ್ಟು ನಾಮಪತ್ರ ಸಲ್ಲಿಸಬಹುದು ಹೀಗೆ ಚುನಾವಣೆಗೆ ಸಂಬಂಧಿಸಿದ ಕುತೂಹಲಕಾರಿ ಪ್ರಶ್ನೆಗಳನ್ನು ಕೇಳುವ ಮೂಲಕ ಸಾರ್ವಜನಿಕರು ಚುನಾವಣೆ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ತಿಳಿಯಲು ಸಹಾಯ ಮಾಡಲಾಗುತ್ತಿದೆ.

ಆಕರ್ಷಕ ಬಹುಮಾನ; ಮತದಾನ ದಿನವಾದ ಮೇ 10ರ ವರೆಗೆ ನಡೆಯುವ ಈ ಸ್ಪರ್ಧೆಯಲ್ಲಿ ಪ್ರಸ್ತುತ ಪ್ರತಿದಿನ ಸುಮಾರು 500 ಕ್ಕೂ ಅಧಿಕ ಮಂದಿ ಭಾಗವಹಿಸಿ ತಮ್ಮ ಉತ್ತರಗಳನ್ನು ನೀಡುತ್ತಿದ್ದಾರೆ. ಪ್ರತಿದಿನದ ಕುತೂಹಲಕಾರಿ ಪ್ರಶ್ನೆಗಳು ಮತ್ತು ಉತ್ತರಗಳು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದು, ದಿನೇ ದಿನೇ ಭಾಗವಹಿಸುವ ಸ್ಪರ್ಧಿಗಳ ಸಂಖ್ಯೆ ಅಧಿಕವಾಗುತ್ತಿದೆ. ರಸಪ್ರಶ್ನೆಗಳ ಎಲ್ಲಾ ಕಂತುಗಳು ಮುಗಿದ ನಂತರ, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಎಲ್ಲಾ ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಗುತ್ತದೆ.
ಇ-ಪತ್ರಿಕೆಯನ್ನು ಪ್ರತಿದಿನ 2 ಲಕ್ಷಕ್ಕೂ ಅಧಿಕ ಮಂದಿಗೆ ತಲುಪಿಸಲಾಗುತ್ತಿದ್ದು, ಇ-ಪತ್ರಿಕೆಯಲ್ಲಿ ಮತದಾನ ಜಾಗೃತಿಗಾಗಿ ಆರಂಬಿಸಿರುವ ರಸಪ್ರಶ್ನೆ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಜನರು ಮೇ 10ರಂದು ನಡೆಯುವ ಮತದಾನದಲ್ಲಿ ತಪ್ಪದೇ ಭಾಗವಹಿಸಲು ಸಹ ಕರೆ ನೀಡಲಾಗುತ್ತಿದೆ.
ಜನರು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರತಿದಿನ ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಗೂಗಲ್ ಲಿಂಕ್ https://forms.gle/pCShAi46G1qEAfxA9 ನಲ್ಲಿ ಇರುವ ಫಾರ್ಮ್ ಅನ್ನು ಕ್ಲಿಕ್ ಮಾಡಿ, ತಮ್ಮ ಉತ್ತರಗಳನ್ನು, ಪೂರ್ಣ ಹೆಸರು, ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ ಉತ್ತರಿಸಬೇಕು.
ಮತದಾನಕ್ಕಾಗಿ ರಜೆ; ಮೇ 10ರಂದು ಕರ್ನಾಟಕ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿದೆ. ಮತದಾನ ಮಾಡಲು ಅನುಕೂಲವಾಗುವಂತೆ. ಚುನಾವಣೆ ನಡೆಯುವ ಕ್ಷೇತ್ರಗಳ ವ್ಯಾಪ್ತಿಯ ಎಲ್ಲಾ ಕಾರ್ಖಾನೆಗಳು, ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಮಾಲೀಕರು, 1951ರ ಪ್ರಜಾ ಪ್ರತಿನಿಧಿ ಕಾಯ್ದೆ, ಸೆಕ್ಷನ್ 135(ಬಿ)ರಡಿ ಹಾಗೂ ಕೈಗಾರಿಕಾ ಸಂಸ್ಥೆಗಳ ಕಾಯ್ದೆ-1963 ಕಲಂ 3(ಎ) ಅನ್ವಯ ಅರ್ಹ ಕಾರ್ಮಿಕರು ಮತದಾನ ಮಾಡಲು ಅನುಕೂಲವಾಗುವಂತೆ ವೇತನ ಸಹಿತ ರಜೆ ಘೋಷಣೆ ಮಾಡಲಾಗಿದೆ. ನಿಯಮ ಉಲ್ಲಂಘನೆ ಮಾಡಿದಲ್ಲಿ ಸಂಬಂಧಪಟ್ಟ ಸಂಸ್ಥೆಗಳ ವಿರುದ್ಧ ನಿಯಮಾನುಸಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.












Click it and Unblock the Notifications