ಉಡುಪಿ: ನ.30ರಿಂದ ಹಳೆ ಪಾದರಕ್ಷೆಗಳ ಸಂಗ್ರಹ 'ನಡಿಗೆ’ ಅಭಿಯಾನ: ಏನಿದರ ಉಪಯೋಗ..?
ಉಡುಪಿ, ನವೆಂಬರ್ 28: ಉಡುಪಿ ಜಿಲ್ಲೆಯ ಎಂಜಿಎಂ ಕಾಲೇಜಿನ ಆವರಣದಲ್ಲಿ 'ನಡಿಗೆ' ಎನ್ನುವ ವಿನೂತನ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಹಳೆಯ ಪಾದರಕ್ಷೆಗಳ ಬೃಹತ್ ಸಂಗ್ರಹವಾದ ಈ ಅಭಿಯಾನವು ನವೆಂಬರ್ 30ರಿಂದ ಡಿಸೆಂಬರ್ 2ರವರೆಗೆ ಹಮ್ಮಿಕೊಳ್ಳಲಾಗಿದ್ದು, ಸಾರ್ವಜನಿಕರು ಪಾದರಕ್ಷೆಗಳನ್ನು ದಾನ ರೂಪದಲ್ಲಿ ನೀಡಬಹುದಾಗಿದೆ.
ಈ ಬಗ್ಗೆ ಅಭಿಯಾನದ ಆಯೋಜಕರಿಂದ ಪ್ರಕಟಣೆ ಹೊರಡಿಸಲಾಗಿದ್ದು, ಪಾದರಕ್ಷೆಗಳನ್ನು ನೀಡಯವವರು ಈ ಮಾಹಿತಿಗಳನ್ನು ತಿಳಿದುಕೊಳ್ಳಬೇಕಾಗಿದೆ. ನವೆಂಬರ್ 30 ರಿಂದ ಡಿಸೆಂಬರ್ 2 ರವರೆಗೆ ಉಡುಪಿಯ ಎಂಜಿಎಂ ಕಾಲೇಜಿನ ಆವರಣದಲ್ಲಿ ಹಳೆಯ ಪಾದರಕ್ಷೆಗಳ ಬೃಹತ್ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಎಲ್ಲಾ ಸಾರ್ವಜನಿಕರು ತಾವು ಬಳಸಿದ ಪಾದರಕ್ಷೆಗಳನ್ನು ನೀಡಬಹುದಾಗಿದೆ.

ಹೀಲ್ಸ್ ಹಾಗೂ 10 ವರ್ಷದವರೆಗಿನ ಮಕ್ಕಳ ಪಾದರಕ್ಷೆಗಳನ್ನು ಈ ಅಭಿಯಾನದಲ್ಲಿ ಸ್ವೀಕರಿಸಲು ಅವಕಾಶವಿರುವುದಿಲ್ಲ. ಉಳಿದಂತೆ ಶೂಗಳು, ಸ್ಲಿಪರ್‌ಗಳು, ರಬ್ಬರ್ ಶೂಗಳು ಚಪ್ಪಲಿಗಳನ್ನು ನೀಡಬಹುದಾಗಿದೆ. ಪಾದರಕ್ಷೆಗಳನ್ನು ನೀಡಬಯಸುವ ಸಾರ್ವಜನಿಕರುಉಡುಪಿ ಜಿಲ್ಲೆಯ ಎಂಜಿಎಂ ಕಾಲೇಜಿಗೆ ಆಗಮಿಸಿ ನೀಡಬಹುದಾಗಿದೆ.
ಸಂಗ್ರಹವಾದ ಅಷ್ಟೂ ಪಾದರಕ್ಷೆಗಳನ್ನು ಮುಂಬೈ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಗ್ರೀನ್‌ಸೋಲ್ (Greensol) ಸಂಸ್ಥೆಗೆ ಕಚ್ಛಾ ವಸ್ತುಗಳ ರೂಪದಲ್ಲಿ ನೀಡಲಿದ್ದು, ಗ್ರೀನ್‌ಸೋಲ್ ಫೌಂಡೇಶನ್ ಈ ಪಾದರಕ್ಷೆಗಳಿಂದ ಹೊಸ ಪಾದರಕ್ಷೆಗಳನ್ನು ತಯಾರಿಸಿ ದೇಶದಾದ್ಯಂತ ಇರುವ ಅಶಕ್ತರಿಗೆ, ಪಾದರಕ್ಷೆರಹಿತರಿಗೆ ಉಚಿತವಾಗಿ ನೀಡುತ್ತಾರೆ. ಪರಿಸರಕ್ಕೆ ಪೂರಕವಾಗಿರುವ ಈ ಚಟುವಟಿಕೆಯನ್ನು ಗ್ರೀನ್‌ಸೋಲ್ ಸಂಸ್ಥೆ 2017ರಿಂದ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ. ಈ ವರೆಗೆ ಈ ಸಂಸ್ಥೆ 6 ಲಕ್ಷಕ್ಕೂ ಅಧಿಕ ಜನರಿಗೆ ಉಚಿತ ಪಾದರಕ್ಷೆಗಳನ್ನು ನೀಡಿದೆ.

'ನಡಿಗೆ' ಶೀರ್ಷಿಕೆಯಲ್ಲಿ ಮೂರು ದಿನಗಳ ಕಾಲ ಪಾದರಕ್ಷೆ ಸಂಗ್ರಹ ಅಭಿಯಾನ ನಡೆಯುತ್ತದೆ. ಒಂದಿಡೀ ಸಮುದಾಯ ಭಾಗವಹಿಸುವ ಈ ಕಲ್ಪನೆಯ ಅಭಿಯಾನ ಕರಾವಳಿ ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಆಯೋಜಿಸಲಾಗಿದೆ. ಡಿಸೆಂಬರ್ 3 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಗ್ರೀನ್‌ಸೋಲ್ ಫೌಂಡೇಶನ್ ಸಂಸ್ಥಾಪಕರಾದ ರಮೇಶ್ ಧಾಮಿ ಮತ್ತು ಶ್ರಿಯಾನ್ಸ್ ಭಂಡಾರಿ ಭಾಗವಹಿಸಲಿದ್ದಾರೆ.
ಡಿಸೆಂಬರ್ 3 ರಂದು ಸಾರ್ವಜನಿಕರು ಮತ್ತು ಮಾಧ್ಯಮದ ಸಮ್ಮುಖದಲ್ಲಿ ಉಡುಪಿ ಭಾಗದ ಆಯ್ದ 75 ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಗ್ರೀನ್‌ಸೋಲ್ ಫೌಂಡೇಶನ್ ವತಿಯಿಂದ ಹಳೆಯ ಬಟ್ಟೆಗಳಿಂದ ತಯಾರಿಸಿದ ಬ್ಯಾಗ್, ಳಿತುಕೊಳ್ಳಲು ಬಳಸುವ ಮ್ಯಾಟ್ ಮತ್ತು ಹಳೆಯ ಪಾದರಕ್ಷೆಗಳಿಂದ ಹೊಸದಾಗಿ ತಯಾರಿಸಿದ ಪಾದರಕ್ಷೆಗಳನ್ನು ವಿತರಿಸುವ ಕಾರ್ಯಕ್ರಮ ಕೂಡ ನಡೆಯಲಿದೆ.
ಕಾರ್ಯಕ್ರಮ ಮುಗಿದ ಒಂದು ತಿಂಗಳ ಅವಧಿಯೊಳಗೆ ಉಡುಪಿ ಭಾಗದ ಇನ್ನಷ್ಟು ಅಶಕ್ತ ವಿದ್ಯಾರ್ಥಿಗಳಿಗೆ ಬ್ಯಾಗ್, ಮ್ಯಾಟ್ ಮತ್ತು ಪಾದರಕ್ಷೆಗಳನ್ನು ವಿತರಿಸುತ್ತೇವೆ. ಹೀಗಾಗಿ ಈ ಯೋಜನೆಗೆ ಈಗಾಗಲೇ ಹಲವು ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಂದ ಸಹಕಾರ ದೊರೆಯುವ ಭರವಸೆ ಸಿಕ್ಕಿದೆ ಎಂದು ಆಯೋಜಕರರು ಖುಷಿ ವ್ಯಕ್ತಪಡಿಸಿದ್ದಾರೆ.












Click it and Unblock the Notifications