Train: ಕುಂದಾಪುರದ ರೈಲ್ವೆ ಪ್ರಯಾಣಿಕರಿಗೆ ಗುಡ್‌ನ್ಯೂಸ್
ಕುಂದಾಪುರ, ಮಾರ್ಚ್ 15: ಕೊಂಕಣ ರೈಲ್ವೆಯ ಬಗ್ಗೆ ಕುಂದಾಪುರದ ಸ್ಥಳೀಯರಲ್ಲಿ ಸ್ವಲ್ಪಮಟ್ಟಿನ ಅಸಮಾಧಾನ ಇದ್ದೇ ಇದೆ. ಸಂಚಾರ ನಡೆಸುವ ರೈಲುಗಳ ಸಂಖ್ಯೆ ತೀರಾ ಕಡಿಮೆ. ಬಹಳ ಬೇಡಿಕೆ ಇರುವ ಬೆಂಗಳೂರಿಗೆ ರೈಲಿನಲ್ಲಿ ಪ್ರಯಾಣಿಸಬೇಕು ಎಂದರೆ ಕನಿಷ್ಠ ಒಂದೂವರೆ ತಿಂಗಳ ಮುಂಚಿತವಾಗಿಯಾದರೂ ಟಿಕೆಟ್ ಕಾಯ್ದಿರಿಸಬೇಕು. ಅಲ್ಲದೇ ಅದೇ ಮಾರ್ಗವಾಗಿ ಸಂಚರಿಸುವ ಹಲವು ರೈಲುಗಳು ಈ ನಿಲ್ದಾಣದಲ್ಲಿ ನಿಲುಗಡೆಯಾಗುವುದಿಲ್ಲ. ಹೀಗೆ ಹತ್ತಾರು ಕಾರಣಗಳಿಂದ ಕೊಂಕಣ ರೈಲ್ವೆಯ ಬಗ್ಗೆ ಸ್ಥಳೀಯರಲ್ಲಿ ಅಸಮಾಧಾನವಿದ್ದು, ಇದೀಗ ಒಂದು ಬೇಡಿಕೆಗೆ ಕೇಂದ್ರ ರೈಲ್ವೆ ಇಲಾಖೆ ಅಸ್ತು ಎಂದಿದೆ.
ಕೊಂಕಣ ರೈಲ್ವೆ ಮಾರ್ಗದಲ್ಲಿ ಹೊರ ರಾಜ್ಯಗಳಿಗೆ ಸಂಚರಿಸುವ ಹಲವು ರೈಲುಗಳು ಕುಂದಾಪುರ ಹಾಗೂ ಕುಮಟಾ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಯಾಗುತ್ತಿರಲಿಲ್ಲ. ಇದರಿಂದ ಹತ್ತಿರವೇ ರೈಲ್ವೆ ನಿಲ್ದಾಣವಿದ್ದರೂ ಸಹ ಪ್ರಯಾಣಿಕರು ಉಡುಪಿಯಂತಹ ದೂರದ ನಿಲ್ದಾಣಕ್ಕೆ ತೆರಳಬೇಕಿತ್ತು. ಈ ಹಿನ್ನೆಲೆಯಲ್ಲಿ ರೈಲ್ವೆ ಪ್ರಯಾಣಿಕರ ಹೋರಾಟ ಸಮಿತಿ ಅನೇಕ ವರ್ಷಗಳಿಂದ ಬೇಡಿಕೆ ಸಲ್ಲಿಸುತ್ತಲೇ ಇತ್ತು.

ಹಲವು ವರ್ಷಗಳ ಈ ಒತ್ತಾಯಕ್ಕೆ ಇದೀಗ ಕೊಂಕಣ ರೈಲ್ವೆ ಅನುಮತಿ ನೀಡಿದ್ದು, ಈ ಮಾರ್ಗದಲ್ಲಿ ಸಂಚರಿಸುವ ಆರು ರೈಲುಗಳಿಗೆ ಕುಂದಾಪುರ ಮತ್ತು ಕುಮಟಾ ನಿಲ್ದಾಣಗಳಲ್ಲಿ ಪ್ರಾಯೋಗಿಕ ನಿಲುಗಡೆಗೆ ಅನುಕೂಲ ಮಾಡಿಕೊಟ್ಟಿದೆ. ಈ ಪೈಕಿ ಕುಂದಾಪುರದಲ್ಲಿ ನಾಲ್ಕು ರೈಲುಗಳು ನಿಲುಗಡೆಯಾಗಲಿವೆ. ಇಂದಿನಿಂದ ಅಂದರೆ ಮಾರ್ಚ್ 15 ಶನಿವಾರದಿಂದ ಪ್ರಾಯೋಗಿಕ ನಿಲುಗಡೆ ಆರಂಭವಾಗಲಿದೆ.
ರೈಲುಗಳ ವಿವರ ಈ ಕೆಳಗಿನಂತಿದೆ
ತಿರುವನಂತಪುರಂ ಸೆಂಟ್ರಲ್ ಹಝ್ರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್(22653). ಈ ರೈಲು ಮಾರ್ಚ್ 15ರಂದು ಮಧ್ಯಾಹ್ನ 2.06ಕ್ಕೆ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ 2.08ಕ್ಕೆ ನಿಲ್ದಾಣದಿಂದ ತೆರಳಲಿದೆ.

ಹಝ್ರತ್ ನಿಝಾಮುದ್ದೀನ್ ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್(22656). ಈ ರೈಲು ಮಾರ್ಚ್ 15ರಂದು ಮಧ್ಯಾಹ್ನ 1.28 ಕುಂದಾಪುರ ನಿಲ್ದಾಣಕ್ಕೆ ಆಗಮಿಸಿ 1.30ಕ್ಕೆ ನಿಲ್ದಾಣದಿಂದ ತೆರಳಲಿದೆ.
ಹಝ್ರತ್ ನಿಝಾಮುದ್ದೀನ್ ತಿರುವನಂತಪುರಂ ಸೆಂಟ್ರಲ್ ಎಕ್ಸ್‌ಪ್ರೆಸ್(22654). ಈ ರೈಲು ಮಾರ್ಚ್ 18ರಂದು ಮಧ್ಯಾಹ್ನ 1.28ಕ್ಕೆ ಕುಂದಾಪುರದ ನಿಲ್ದಾಣಕ್ಕೆ ಆಗಮಿಸಿ 1.30ಕ್ಕೆ ನಿಲ್ದಾಣದಿಂದ ತೆರಳಲಿದೆ.
ಎರ್ನಾಕುಲಂ ಜಂಕ್ಷನ್ ಹಝ್ರತ್ ನಿಝಾಮುದ್ದೀನ್ ಎಕ್ಸ್‌ಪ್ರೆಸ್(22655). ಈ ರೈಲು ಮಾರ್ಚ್ 19ರಂದು ಮಧ್ಯಾಹ್ನ 2.06ಕ್ಕೆ ಕುಂದಾಪುರ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ 2.08ಕ್ಕೆ ಈ ನಿಲ್ದಾಣದಿಂದ ತೆರಳಲಿದೆ. ಪ್ರಯಾಣಿಕರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಭಾರತೀಯ ರೈಲ್ವೆ ಅಧಿಕೃತ ವೆಬ್‌ಸೈಟ್ ಹಾಗೂ ಎನ್‌ಟಿಇಎಸ್ ಆ್ಯಪ್ ಮೂಲಕ ಪಡೆದುಕೊಳ್ಳಬಹುದಾಗಿದೆ.












Click it and Unblock the Notifications