ನೌಕಾಪಡೆಯೇ 7 ಮಂದಿ ಮೀನುಗಾರರನ್ನು ಕೊಂದಿದೆ:ಪ್ರಮೋದ್ ಮಧ್ವರಾಜ್
ಉಡುಪಿ, ಮೇ 03: ಡಿಸೆಂಬರ್ 13 ರಂದು ಉಡುಪಿಯ ಮಲ್ಪೆ ಬಂದರಿನಿಂದ ತೆರಳಿ ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಅವಶೇಷಗಳು ಪತ್ತೆಯಾಗಿವೆ. ಈ ಹಿನ್ನೆಲೆಯಲ್ಲಿ ಬೋಟ್ ನಲ್ಲಿದ್ದ ಏಳು ಮೀನುಗಾರರು ಮೃತಪಟ್ಟಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಈ ಹಿಂದೆ ನೌಕಾಪಡೆಯವರೇ ಮೀನುಗಾರರನ್ನು ಸಾಯಿಸಿದ್ದಾರೆ ಎನ್ನುವ ಆರೋಪವನ್ನು ಪುನರ್ ಉಚ್ಚರಿಸಿದ್ದಾರೆ.
ಉಡುಪಿಯ ಕಾಪುನಲ್ಲಿರುವ ಸಾಯಿ ರಾಧಾ ಹೆಲ್ತ್ ರೆಸಾರ್ಟ್ ನಲ್ಲಿ ಸಿಎಂ ಜೊತೆ ಈ ಕುರಿತು ಮಾತುಕತೆ ನಡೆಸಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು. ಭಾರತೀಯ ನೌಕಾ ಪಡೆಯೇ ಏಳು ಮೀನುಗಾರರನ್ನು ಕೊಂದಿದೆ. ಅಂದು ಇದನ್ನೇ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸತ್ಯಾಂಶ ಹೊರ ಬರಲು ನ್ಯಾಯಾಂಗ ತನಿಖೆಯಾಗಬೇಕು.ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಅವರು ಈಗಾಗಲೇ ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದು, 7 ಮೃತ ಮೀನುಗಾರರ ಕುಟುಂಬಕ್ಕೆ ಕನಿಷ್ಟ 10 ಲಕ್ಷ ಪರಿಹಾರ ನೀಡಬೇಕು ಎಂದು ಹೇಳಿದರು.
ಬಿಜೆಪಿಯವರು ನಾಪತ್ತೆ ಆದ ಮೀನುಗಾರರ ಹೆಣದ ಮೇಲೂ ರಾಜಕೀಯ ಮಾಡುತ್ತಿದ್ದಾರೆ. ಭಾರತೀಯ ನೌಕಾಪಡೆಯನ್ನು ಈ ಪ್ರಕರಣದಲ್ಲಿ ಜವಬ್ದಾರಿಯನ್ನಾಗಿಸಿ ಸೂಕ್ತ ತನಿಖೆ ಮಾಡಬೇಕು ಎಂದು ಪ್ರಮೋದ್ ಮಧ್ವರಾಜ್ ಆಗ್ರಹಿಸಿದರು.












Click it and Unblock the Notifications