ಉಡುಪಿ ಹಿಜಾಬ್ ವಿವಾದ; ಸಭೆಯ ನಿರ್ಧಾರಕ್ಕೆ ಕ್ಯಾರೇ ಅನ್ನದ ವಿದ್ಯಾರ್ಥಿನಿಯರು
ಉಡುಪಿ, ಫೆಬ್ರವರಿ 1: ಉಡುಪಿ ಸರ್ಕಾರಿ ಕಾಲೇಜಿನ ಹಿಜಾಬ್ ವಿವಾದ ಮತ್ತಷ್ಟು ಜಟಿಲಗೊಳ್ಳುತ್ತಿದೆ. ಸೋಮವಾರ ನಡೆದ ಸಭೆಯಲ್ಲಿ ಹಿಜಾಬ್ ಧರಿಸಿ ಕ್ಲಾಸ್ ಕೇಳುದಕ್ಕೆ ಪಟ್ಟು ಹಿಡಿಯೋದಾದರೆ, ಕಾಲೇಜು ಆವರಣದ ಒಳಗೆ ಬರಕೂಡದು ಅಂತ ತೀರ್ಮಾನ ಆಗಿತ್ತು. ಆದರೆ ಮಂಗಳವಾರ ಪಟ್ಟುಬಿಡದ ವಿದ್ಯಾರ್ಥಿನಿಯರು ಕಾಲೇಜು ಆವರಣ ಒಳಗೆ ಬಂದು ಪ್ರತಿಭಟನೆ ಮುಂದುವರಿಸಿದ್ದಾರೆ. ಈ ನಡುವೆ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ಗೆ ಅವಕಾಶ ಬೇಕು ಅಂತ ಹೈಕೋರ್ಟ್‌ನಲ್ಲೂ ರಿಟ್ ಸಲ್ಲಿಸಿದ್ದಾರೆ. ವಿವಾದ ಸದ್ಯ ಕನ್ನಡಿಯೊಳಗಿನ ಕಗ್ಗಂಟಾಗಿದೆ.
ಉಡುಪಿಯ ಸರ್ಕಾರಿ ಪಿಯು ಕಾಲೇಜಿನ ಹಿಜಾಬ್ ವಿವಾದ ಕಳೆದೊಂದು ತಿಂಗಳಿಂದ ಬಾರೀ ಸುದ್ದು ಮಾಡುತ್ತಿದೆ. ಸೋಮವಾರ ಸ್ಥಳೀಯ ಶಾಸಕ, ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಘುಪತಿ ಭಟ್ ನೇತೃತ್ವದಲ್ಲಿ, ಬ್ಯಾರಿ ಸಾಹಿತ್ಯ ಅಕಾಡೆಮಿ, ಪ್ರತಿಭಟನಾನಿರತ ವಿದ್ಯಾರ್ಥಿನಿಯರು ಹಾಗೂ ಪ್ರತಿಭಟನಾ ನಿರತ ವಿದ್ಯಾರ್ಥಿನಿಯರ ಪೋಷಕರನ್ನು ಜೊತೆ ಸೇರಿಸಿ ಸಭೆ ನಡೆಸಲಾಗಿತ್ತು.
ಸಭೆಯಲ್ಲಿ ಪೋಷಕರಿಗೆ ತಿಳಿ ಹೇಳಿ, ಯಾವುದೇ ಕಾರಣಕ್ಕೂ ಹಿಜಾಬ್ ಧರಿಸಿ ಕ್ಲಾಸ್ ಕೇಳುದಕ್ಕೆ ಅವಕಾಶ ಇಲ್ಲ. ಅದಕ್ಕೂ ಒಪ್ಪದಿದ್ದರೆ ಆನ್‌ಲೈನ್ ಕ್ಲಾಸ್‌ಗೆ ಅವಕಾಶ ನೀಡಲಾಗುವುದು. ಅದಕ್ಕೂ ಒಪ್ಪದಿದ್ದಲ್ಲಿ ಹಿಜಾಬ್ ಧರಿಸಿ ಕಾಲೇಜ್ ಆವರಣಕ್ಕೆ ಬರಬಾರದು ಅಂತ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು.

ಸಭೆಯಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಯರು ನಾಳೆ ನಮ್ಮ ತೀರ್ಮಾನ ಕೈಗೊಳ್ಳುತ್ತೇವೆ ಅಂತ ಹೇಳಿದ್ದರು. ಆದರೆ ಮಂಗಳವಾರ ಮತ್ತದೇ ರಾಗ ಅದೇ ಹಾಡು ಎಂಬ ಪರಿಸ್ಥಿತಿ ನಿರ್ಮಾಣ ಆಗಿದೆ. ಹಿಜಾಬ್ ಧರಿಸಿ ಆವರಣದ ಒಳಗೆ ಬರಕೂಡದು ಅಂದರೂ, ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಬಂದು ಪ್ರತಿಭಟನೆ ಮುಂದುವರಿಸಿದ್ದಾರೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು, ಹಿಜಾಬ್ ಧರಿಸಿಯೇ ಪಾಠ ಕೇಳುತ್ತೇವೆವ ಅಂತ ಪಟ್ಟುಹಿಡಿದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪ್ರತಿಭಟನಾ ನಿರತ ವಿದ್ಯಾರ್ಥಿನಿ ಆಲಿಯಾ, ನಾವು ನಿನ್ನೆಯೇ ನಮ್ಮ ನಿರ್ಧಾರ ಪ್ರಕಟಿಸಿದ್ದೇವೆ. ನಮ್ಮ ಹೆತ್ತವರೂ ಹಿಜಾಬ್ ಧರಿಸಿಯೇ ಕಾಲೇಜುಗೆ ಕಳುಹಿಸುತ್ತೇವೆ ಅಂತಾ ಹೇಳಿದ್ದಾರೆ. ಶಾಸಕ ರಘಪತಿ ಭಟ್‌ಗೆ ಕಾಲೇಜು ಕಾಂಪೌಂಡ್ ಒಳಗೆ ಬರಬೇಡಿ ಅಂತಾ ಹೇಳುವುದಕ್ಕೆ ಯಾವುದೇ ಹಕ್ಕಿಲ್ಲ.. ನಾವು ನಮ್ಮ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಕೇಳಿದ್ದೇವೆ. ನಾವು ಯಾವುದೇ ಅಪರಾಧ ಮಾಡಿಲ್ಲ ಎಂದು ಹೇಳಿದ್ದಾರೆ.

ಇನ್ನು ಹಿಜಾಬ್ ವಿವಾದ ಹೆಚ್ಚಾಗುತ್ತಿದ್ದಂತೆ ಕಾಲೇಜ್ ಆವರಣದ ಒಳಗೆ ಪೊಲೀಸ್ ಭದ್ರತೆ ಬಿಗಿಗೊಳಿಸಲಾಗಿದೆ. ಇಷ್ಟೇ ಅಲ್ಲದೇ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಪಾಠ ಕೇಳುವುದಕ್ಕೆ ಅವಕಾಶ ನೀಡಬೇಕು ಅಂತ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಿದ್ದಾರೆ.
ಹಿಜಾಬ್ ವಿವಾದ ಕುರಿತು ಹೈಕೋರ್ಟ್ ಮೆಟ್ಟಿಲೇರಿದ ಬಾಲಕಿಯರ ಪದವಿಪೂರ್ವ ಕಾಲೇಜು ವಿದ್ಯಾರ್ಥಿನಿ ರೇಶಮ್ ಫಾರೂಕ್, ಸಂವಿಧಾನದ 14 ಹಾಗೂ 25ನೇ ವಿಧಿಯನ್ವಯ ಹಿಜಾಬ್ ಮೂಲಭೂತ ಹಕ್ಕು ಎಂದು ಘೋಷಿಸುವಂತೆ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ವಿದ್ಯಾರ್ಥಿನಿ ಪರ ವಕೀಲ ಶತಬೀಶ್ ಶಿವಣ್ಣ, ಅರ್ನವ್ ಎ ಬಾಗಲವಾಡಿ ಹಾಗೂ ಅಭಿಷೇಕ್ ಜನಾರ್ಧನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಹಾಗೂ ಕಾಲೇಜು ಆಡಳಿತ ಹಸ್ತಕ್ಷೇಪ ಮಾಡದಂತೆ ರಿಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ಕಾಲೇಜಿಗೆ ಮಧ್ಯಂತರ ಆದೇಶ ನೀಡುವಂತೆ ನ್ಯಾಯಾಲಯಕ್ಕೆ ವಕೀಲರು ಮನವಿ ಮಾಡಿದ್ದಾರೆ.
ಒಟ್ಟಿನಲ್ಲಿ ಸೋಮವಾರ ಹಿಜಾಬ್ ವಿವಾದ ತಣ್ಣಗಾಯ್ತು ಅಂತ ನಿಟ್ಟುಸಿರು ಬಿಡುವ ಮುನ್ನ ಮತ್ತೆ ಹಿಜಾಬ್ ವಿವಾದ ತಲೆ ಎತ್ತಿದೆ. ಮುಸ್ಲಿಂ ವಿದ್ಯಾರ್ಥಿನಿಯರ ಪ್ರತಿಭಟನೆ, ಒಳಗೆ ಪಾಠ ಕೇಳುತ್ತಿರುವ ವಿದ್ಯಾರ್ಥಿಗಳ ಮೇಲೆ ಕೆಟ್ಟ ಪರಿಣಾಮ ಬೀಳದೇ ಇರಲಿ ಅನ್ನುವುದು ಸದ್ಯಕ್ಕೆ ಸಾರ್ವಜನಿಕರ ಮನದಾಶಯವಾಗಿದೆ.












Click it and Unblock the Notifications