ಉಡುಪಿಯಲ್ಲಿ ಪೇಜಾವರ ಶ್ರೀ - ಸಾಕ್ಷಿ ಮಹಾರಾಜ್ 'ರಾಮ ಮಂದಿರ' ಚರ್ಚೆ
ಉಡುಪಿ, ಜೂನ್ 27: ಸಂಸದ ಸಾಕ್ಷಿ ಮಹಾರಾಜ್ ಉಡುಪಿ ಕೃಷ್ಣಮಠಕ್ಕೆ ಭೇಟಿ ನೀಡಿ ರಾಮ ಮಂದಿರ ನಿರ್ಮಾಣದ ಕುರಿತು ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿಗಳ ಜತೆ ಚರ್ಚೆ ನಡೆಸಿದ್ದಾರೆ. ಆದರೆ, ಅವರು 'ಹಿಂದಿಯಲ್ಲಿ ಮಾತನಾಡಿದ್ದರಿಂದ ಸ್ಪಷ್ಟವಾಗಿ ಅರ್ಥವಾಗಿಲ್ಲ' ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.
ಇನ್ನು ಉಡುಪಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮುಹೂರ್ತ ನಿಗದಿ ಪಡಿಸಲಾಗುವುದು ಎಂಬ ಸಾಕ್ಷಿ ಮಹರಾಜ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, "ನಮ್ಮ ಮೂರನೇ ಪರ್ಯಾಯ ನಡೆದಾಗ ಉಡುಪಿಯಲ್ಲಿ 'ಧಾರ್ಮಿಕ ಸಂಸತ್ತು' ನಡೆದಿತ್ತು. ಈ ವೇಳೆ ಕೀಲಿ ಕೈ ಒಡೆದು ರಾಮ ಮಂದಿರ ಪ್ರವೇಶಿಸುವ ನಿರ್ಧಾರ ಮಾಡಲಾಗಿತ್ತು. ಆದರೆ ರಾಜೀವ್ ಗಾಂಧಿ ಮಂದಿರದ ಕೀಲಿ ಕೈ ತೆಗೆಸಿದ್ದರು.
ಎಲ್ಲರೂ ಅಂದು ರಾಮನ ದರ್ಶನ ಮಾಡಿದ್ದರು," ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು.

'ಈ ಬಾರಿಯ ಸಮಾವೇಶದಲ್ಲಿ ರಾಮಮಂದಿರಕ್ಕೆ ಮುಹೂರ್ತ ನಿಗದಿಯಾಗಬಹುದು ಎಂದು ಮಹಾರಾಜ್ ಹೇಳಿರಬಹುದು. ಆದರೆ, ಅವರು ಒಬ್ಬರೇ ನಿರ್ಣಯ ಕೊಡುವವರಲ್ಲ. ಸಮಿತಿಯಲ್ಲಿ
ಈ ಬಗ್ಗೆ ಮೊದಲು ತೀರ್ಮಾನ ಆಗಬೇಕು. ಯಾವುದೂ ಸ್ಪಷ್ಟವಾಗದೆ ನಾನು ಈ ಬಗ್ಗೆ ಈಗೇನೂ ಹೇಳಲಾರೆ," ಎಂದು ಪೇಜಾವರ ಶ್ರೀಗಳು ಸ್ಪಷ್ಟಪಡಿಸಿದ್ದಾರೆ.

"ರಾಮ ಮಂದಿರ ನಿರ್ಮಾಣದ ಬಗ್ಗೆ ಸಂವಿಧಾನ, ಕಾನೂನು , ರಾಜ್ಯಸಭೆ, ಲೋಕಸಭೆಯಲ್ಲಿ ತೀರ್ಮಾನವಾಗಬೇಕು . ನವೆಂಬರ್ ತಿಂಗಳಲ್ಲಿ ವಿಶ್ವ ಸಂತ ಸಮ್ಮೇಳನವನ್ನು ಉಡುಪಿಯಲ್ಲಿ ನಡೆಸುವ ಅಪೇಕ್ಷೆಯಿದೆ. ಇಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಚರ್ಚೆ ನಡೆಯಬಹುದು," ಎಂದು ಪೇಜಾವರ ಶ್ರೀಗಳು ಹೇಳಿದ್ದಾರೆ.












Click it and Unblock the Notifications