ಮಾ.4ರಂದು ಪೇಜಾವರ ಶ್ರೀಗಳಿಂದ 'ಮೊದಲ ತೊದಲು' ಕವಿತೆ ಬಿಡುಗಡೆ
ಉಡುಪಿ, ಫೆಬ್ರವರಿ. 28 : ಹೆತ್ತವರ ಪ್ರೀತಿಯಿಂದ ವಂಚಿತ ಈ ಹಡುಗಿ ಅಮ್ಮನ ಕನವರಿಸಿ ಬರೆದ ಕವಿತೆಗಳ 'ಮೊದಲ ತೊದಲು' ಪುಸ್ತಕ ಶ್ರೀಕೃಷ್ಣನ ಸನ್ನಿಧಿಯಲ್ಲಿ ಬಿಡುಗಡೆಗೆ ಸಿದ್ದವಾಗಿದೆ.
'ಮೊದಲ ತೊದಲು' ಕವನ ಸಂಕಲನವನ್ನು ಮಾರ್ಚ್ 4 ರಂದು ಮಧ್ಯಾಹ್ನ 1 ರಿಂದ 2 ಗಂಟೆ ಮಧ್ಯೆ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಬಿಡುಗಡೆ ಮಾಡಲಿದ್ದಾರೆ.[ಶ್ರೀಮಂತರು ಮನೆಯಲ್ಲಿ ನಾಯಿಗಳಂತೆ ಗೋವುಗಳನ್ನು ಸಾಕಿ - ಪೇಜಾವರ ಶ್ರೀ]
ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ಡಾ. ವನಿತಾ ತೊರವಿ ಮುಖ್ಯ ಅತಿಥಿಗಳಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಆರತಿ ಜೆ. ಮಡಿವಾಳ ಬರೆದ ಕವನ ಸಂಕಲನಕ್ಕೆ ಪೇಜಾವರ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದ್ದರೆ, ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಅವರೂ ಬೆನ್ನು ತಟ್ಟಿದ್ದಾರೆ.
ಮೂಲತಃ ಕಾರವಾರದ ಹಬ್ಬುವಾಡದ ಆರತಿ 10 ನೇ ತರಗತಿಯಿಂದ ಕವಿತೆ ಬರೆಯುವುದರಲ್ಲಿ ಆಸಕ್ತಿ ಬೆಳಸಿಕೊಂಡು ಬಂದಿದ್ದಾಳೆ. ಇವರ ಸಂಕಲನದಲ್ಲಿ 15 ಕವಿತೆ 2 ರೂಪಕಗಳಿವೆ.
ಉಡುಪಿ ಬಾಲಮಂದಿರದ ಗ್ರಂಥಾಲಯದಲ್ಲಿ 50ಕ್ಕೂ ಅಧಿಕ ಕೃತಿ ಓದಿರುವ ಆರತಿಗೆ ಕುವೆಂಪು ಸಾಹಿತ್ಯದ ಒಲವಿದೆ. ಆರತಿಯ ತಂದೆ ತಾಯಿ ಇಬ್ಬರೂ ತೀರಿಕೊಂಡಿದ್ದು, ಅಮ್ಮನ ಪ್ರೀತಿಯನ್ನು ಉಡುಪಿಯ ಬಾಲ ಮಂದಿರದಲ್ಲಿರುವ 12 ಶಿಕ್ಷಕಿಯರಲ್ಲಿ ಅಮ್ಮನ ಪ್ರೀತಿ ಕಾಣುತ್ತಿದ್ದಾಳೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಆರತಿ, ನನಗೆ ರಾಷ್ಟ್ರಪತಿ ಎ ಪಿ ಜೆ ಅಬ್ದುಲ್ ಕಲಾಂ ಅವರೇ ಪ್ರೇರಣೆ. ರಜೆ ಇದ್ದಾಗೆಲ್ಲಾ ಕವಿತೆ ಬರೆಯುತ್ತೇನೆ, ಆದರೆ, ನಾನು ಕವಿಯಲ್ಲ, ನನ್ನ ಬಾಲ್ಯದ ಬದುಕಿನ ಸಂಕಷ್ಟ ಅನುಭವವನ್ನೇ ಕವಿತೆಯಾಗಿ ಹೊಸೆದಿದ್ದೇನೆ.
ನರ್ಸಿಂಗ್ ಶಿಕ್ಷಣ ಪಡೆದು ರೋಗಿಗಳ, ದೇಶದ ಸೇವೆ ಮಾಡುವುದೇ ನನ್ನ ಕನಸು' ಎಂದು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾಳೆ.












Click it and Unblock the Notifications