Hijab Verdict; ವಿದ್ಯಾರ್ಥಿಗಳಿಗೆ ಉಡುಪಿ ಶಾಸಕ ರಘುಪತಿ ಭಟ್ ಮನವಿ
ಉಡುಪಿ, ಮಾರ್ಚ್ 15; ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಆರಂಭವಾದ ಹಿಜಾಬ್ ವಿವಾದ ಬಳಿಕ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಸದ್ದು ಮಾಡಿತ್ತು. ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಆರು ವಿದ್ಯಾರ್ಥಿನಿಯರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದರು.
ಮಂಗಳವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಅವರಿದ್ದ ತ್ರಿ-ಸದಸ್ಯ ಪೀಠ ಹಿಜಾಬ್ ವಿವಾದದ ತೀರ್ಪು ಪ್ರಕಟಿಸಿದೆ.
ಹಿಜಾಬ್ ಧರಿಸುವುದು ಅಗತ್ಯ ಧಾರ್ಮಿಕ ಆಚರಣೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ. ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿತು.

ಉಡುಪಿಯ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಉಡುಪಿಯ ಬಿಜೆಪಿ ಶಾಸಕ ರಘುಪತಿ ಭಟ್ ಕರ್ನಾಟಕ ಹೈಕೋರ್ಟ್ ತೀರ್ಪಿನ ಕುರಿತು ಪ್ರತಿಕ್ರಿಯೆ ನೀಡಿದರು. ಹೈಕೋರ್ಟ್ ಮೆಟ್ಟಿಲೇರಿದ್ದ ಎಲ್ಲಾ ವಿದ್ಯಾರ್ಥಿನಿಯರಿಗೆ ಮನವಿಯೊಂದನ್ನು ಮಾಡಿದ್ದಾರೆ.
ಶಾಸಕ ರಘುಪತಿ ಭಟ್ ಮಾತನಾಡಿ, "ಹೈಕೋರ್ಟ್ ಮೆಟ್ಟಿಲೇರಿದ ವಿದ್ಯಾರ್ಥಿಗಳು ನಾಳೆಯಿಂದ ಎಂದಿನಂತೆ ಕಾಲೇಜಿಗೆ ಬನ್ನಿ. ಮತಾಂಧ ಶಕ್ತಿಗಳ ಮಾತಿಗೆ ನೀವೆಲ್ಲ ಬಲಿಯಾಗಬೇಡಿ. ಹೈಕೋರ್ಟ್ ಆದೇಶ ಪಾಲಿಸಿ ಕಾಲೇಜಿಗೆ ಬನ್ನಿ" ಎಂದು ಮನವಿ ಮಾಡಿದರು.
"ನೀವು ಕೋರ್ಟ್‌ಗೆ ಹೋಗಿದ್ದೀರಿ ಎಂದು ನಾವು ಯಾವುದೇ ಬೇಧಭಾವ ಮಾಡುವುದಿಲ್ಲ. ಹಿಜಾಬ್ ಗಲಾಟೆಯಿಂದ ನಿಮ್ಮ ಕ್ಲಾಸ್‌ಗಳು ಹಾಳಾಗಿವೆ. ನೀವು ಮಿಸ್ ಮಾಡಿಕೊಂಡಿರುವ ನೋಟ್ಸ್‌ಗಳನ್ನು ಮತ್ತೆ ನಿಮಗೆ ನೀಡಲಾಗುತ್ತದೆ. ಹೈಕೋರ್ಟ್‌ಗೆ ಹೋಗಿ ರಾಜ್ಯದ ತುಂಬಾ ವಿವಾದವಾಗಿದೆ. ಅದನ್ನು ದೇಶಾದ್ಯಂತ ವಿವಾದ ಮಾಡಬೇಡಿ" ಎಂದರು.
ಹಿಜಾಬ್‌ಗೆ ಅವಕಾಶವಿಲ್ಲ; ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿಯಲ್ಲಿ ಹಿಜಾಬ್ ಧರಿಸಲು ಅವಕಾಶ ಕೇಳಿದ್ದ ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗಿರಲಿಲ್ಲ. ಆಗ ರಘುಪತಿ ಭಟ್ ಮಾತನಾಡಿ, "ಸರ್ಕಾರ ನಿರ್ಧಾರ ಪ್ರಕಟಿಸುವ ತನಕ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದರು.
ಕಾಲೇಜು ಅಭಿವೃದ್ಧಿ ಸಮಿತಿ, ಪೋಷಕರು, ವಿದ್ಯಾರ್ಥಿನಿಯರು, ಉಪನ್ಯಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ್ದರು. "ಈ ಹಿಂದಿನಂತೆ ಕಾಲೇಜಿನ ಆವರಣದ ಒಳಗೆ ಹಿಜಾಬ್ ಧರಿಸಿಕೊಂಡು ಬಂದು, ತರಗತಿಯೊಳಗೆ ತೆರಳುವಾಗ ಹಿಜಾಬ್ ತೆಗೆದು ಭಾಗವಹಿಸಬೇಕು" ಎಂದು ತಿಳಿಸಿದ್ದರು.
ಇಂದು ಕರ್ನಾಟಕ ಹೈಕೋರ್ಟ್ ನೀಡಿರುವ ತೀರ್ಪಿನಲ್ಲಿಯೂ ಸಹ ಹಿಜಾನ್ ಅಗತ್ಯ ಧಾರ್ಮಿಕ ಆಚರಣೆ ಅಲ್ಲ. ಅಂತೆಯೇ ಹಿಜಾಬ್ ಅವಶ್ಯಕ ಆಚರಣೆ ಎಂಬ ಉಲ್ಲೇಖಕ್ಕೆ ಖುರಾನ್‌ನಲ್ಲಿ ಯಾವುದೇ ಆಧಾರವಿಲ್ಲ ಎಂದು ಹೇಳಿದೆ.
ವಸ್ತ್ರ ಸಂಹಿತೆ, ಸಮವಸ್ತ್ರದ ಕುರಿತು ಕರ್ನಾಟಕ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ. ಉಡುಪಿ ಕಾಲೇಜಿಗೆ ಯಾವುದೇ ನಿರ್ದೇಶನ ನೀಡುವ ಅಗತ್ಯವಿಲ್ಲ. ಹಿಜಾಬ್ ಕುರಿತು ಅರ್ಜಿಯ ವಿಚಾರಣೆ ವೇಳೆ ಕೆಲವು ಪ್ರಶ್ನೆಗಳನ್ನು ರಚಿಸಿದ್ದೇವೆ. ಅದಕ್ಕೆ ಉತ್ತರವನ್ನು ನೀಡಿದ್ದೇವೆ ಎಂದು ಕೋರ್ಟ್ ಹೇಳಿದೆ.
ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಕೋರಿದ್ದ ಅರ್ಜಿದಾರರು ಕರ್ನಾಟಕ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಕೆ ಮಾಡಲು ತೀರ್ಮಾನಿಸಿದ್ದಾರೆ. ಕರ್ನಾಟಕ ಹೈಕೋರ್ಟ್ ಹಿಜಾಬ್ ಕುರಿತು ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿದೆ.
ಈ ಕುರಿತಂತೆ ವಕ್ಫ್ ಬೋರ್ಡ್ ಅಧ್ಯಕ್ಷ ಮೌಲಾನ ಶಫಿ ಸಅದಿ ಪ್ರತಿಕ್ರಿಯೆ ನೀಡಿದ್ದು, ಹಿಜಾಬ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಸರ್ಕಾರದ ಕ್ರಮವನ್ನು ಎತ್ತಿಹಿಡಿದು ಹಿಜಾಬ್ ಧಾರಣೆ ಇಸ್ಲಾಂ ಧರ್ಮದ ಧಾರ್ಮಿಕ ಅತ್ಯಗತ್ಯ ಆಚರಣೆಯಲ್ಲ ಎಂದು ಹೈಕೋರ್ಟ್ ನೀಡಿರುವ ಆದೇಶವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.












Click it and Unblock the Notifications