ಕಾರ್ಕಳ ಪರಶುರಾಮ ಮೂರ್ತಿ ನಕಲಿ: ಹೋರಾಟಕ್ಕೆ ಸ್ವಾಮೀಜಿಗಳು, ಸಂಘಟನೆಗಳ ಬೆಂಬಲ ಕೋರಿದ ಮಿಥುನ್ ರೈ
ಮಂಗಳೂರು, ನವೆಂಬರ್ 08: ವಿಶ್ವದಲ್ಲಿಯೇ ದೇವರ ನಕಲಿ ಪ್ರತಿಮೆ ಸೃಷ್ಟಿಸಿ ವಂಚನೆಗೈಯ್ಯಲು ಯಾರಿಂದಲೂ ಸಾಧ್ಯವಿಲ್ಲ. ಇದು ಬಿಜೆಪಿಯವರಿಂದ ಮಾತ್ರ ಸಾಧ್ಯ. ಕಾರ್ಕಳದ ನಕಲಿ ಪರಶುರಾಮನ ವಿಚಾರವನ್ನು ನಾನು ಇಲ್ಲಿಗೇ ನಿಲ್ಲಿಸೋಲ್ಲ. ಶುಕ್ರವಾರದಂದು ಎಲ್ಲಾ ಮಠಾಧೀಶರಲ್ಲಿಗೆ ಹೋಗಿ ಈ ಅಧರ್ಮದ ವಿರುದ್ಧ ಬೆಂಬಲ ಕೋರುತ್ತೇನೆ ಎಂದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿದರು.
ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಬಜರಂಗದಳ, ವಿಎಚ್ ಪಿ, ಹಿಂದೂ ಜಾಗರಣ ವೇದಿಕೆ ಇನ್ನಿತರ ಹಿಂದೂ ಸಂಘಟನೆಗಳು ಕೂಡಾ ಈ ಅನ್ಯಾಯದ ವಿರುದ್ಧ ದನಿಯೆತ್ತಬೇಕು. ಇಲ್ಲದಿದ್ದಲ್ಲಿ ಪರಶುರಾಮ ಸೃಷ್ಟಿಯ ಈ ತುಳುನಾಡಿಗೆ ತಟ್ಟಲಿದೆ. ಈ ಶಾಪದಿಂದ ವಿಮೋಚನೆಯಾಗಬೇಕಿದ್ದಲ್ಲಿ ಈ ಹೋರಾಟದಲ್ಲಿ ಭಾಗವಹಿಸಬೇಕಿದೆ ಎಂದರು.

ಇದಕ್ಕೆ ನೇರ ಹೊಣೆ ಬಿಜೆಪಿ ಪಕ್ಷ ಹಾಗೂ ಅಂದಿನ ಸಿಎಂ ಬಸವರಾಜ ಬೊಮ್ಮಾಯಿ. ಅವರ ಮೂಗಿನ ನೇರದಲ್ಲಿಯೇ ಈ ಅನ್ಯಾಯ ನಡೆದಿದೆ. ಆದ್ದರಿಂದ ಬಿಜೆಪಿಗರಿಗೆ ಪರಶುರಾಮನ ಶಾಪ ತಟ್ಟಲಿದೆ. ಯಾರೆಲ್ಲಾ ತಾನು ನಡೆಸುತ್ತಿರುವ ಪ್ರತಿಭಟನೆ, ಪರಶುರಾಮನ ಆಂದೋಲನದಲ್ಲಿ ಭಾಗವಹಿಸುದಿಲ್ಲವೋ ಅವರಿಗೂ ಶಾಪ ತಟ್ಟಲಿದೆ. ಗೋಮಾಳವನ್ನು ಪರಶುರಾಮ ಥೀಮ್ ಪಾರ್ಕ್ ಎಂದು ಮಾಡಿದ್ದಾರೋ ಒಂದೋ ಆ ಸ್ಥಳವನ್ನೇ ಸರಿಪಡಿಸಿ ಉತ್ತಮವಾದ ಪ್ರತಿಮೆಯನ್ನು ಸ್ಥಾಪಿಸಬೇಕು ಇಲ್ಲದಿದ್ದಲ್ಲಿ ಯಾವುದಾದರೊಂದು ಸ್ಥಳಕ್ಕೆ ಪರಶುರಾಮರ ಹೆಸರನ್ನಿಡಬೇಕು ಎಂದು ಹೇಳಿದರು.
ಜೊತೆಗೆ ಓಟ್ ಬ್ಯಾಂಕ್‌ಗಾಗಿ ಶಾಸಕ ಸುನಿಲ್ ಕುಮಾರ್ ಅವರು ಈ ಪರಶುರಾಮನ ನಕಲಿ ಪ್ರತಿಮೆಯನ್ನು ಸ್ಥಾಪಿಸಿದ್ದರು. ಇದೀಗ ಅವರನ್ನು ಶಾಸಕ ಸ್ಥಾನದಿಂದ ಅಮಾನತು ಮಾಡಬೇಕು. ಇದರಲ್ಲಿ ಶಾಮೀಲಾದ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇದಕ್ಕಾಗಿ ನೈಜ ಹಿಂದೂ ಆಗಿ ಹೋರಾಟ ಮಾಡ್ತೇನೆ. ಹಿಂದೂ ಸಂಘಟನೆಗಳಿಗೆ ಅನ್ಯಾಯ ವಿರುದ್ಧ ಧ್ವನಿ ಎತ್ತಿ, ಪೂರ್ಣಪ್ರಮಾಣದ ಪರಶುರಾಮನ ಮೂರ್ತಿ ನಿರ್ಮಾಣ ಮಾಡಲು ಪ್ರಯತ್ನ ಮಾಡೋಣ, ಹೋರಾಟಕ್ಕೆ ಕೈಜೋಡಿಸಿ ಎಂದು ಮಿಥುನ್ ರೈ ಮನವಿ ಮಾಡಿದರು.
ಕಾರ್ಕಳದಲ್ಲಿ ನಕಲಿ ಪರಶುರಾಮ ಮೂರ್ತಿ ಸ್ಥಾಪನೆ ವಿಚಾರದಲ್ಲಿ ಹಿಂದುತ್ವ ಹೆಸರಲ್ಲಿ ಶಾಸಕ ಸುನಿಲ್ ಕುಮಾರ್ ಮೋಸ ಮಾಡಿದ್ದಾರೆ. ಒಟ್ಟು 11.5 ಕೋಟಿ ವೆಚ್ಚದಲ್ಲಿ ಪರಶುರಾಮ ಥೀಮ್ ಪಾರ್ಕ್ ಮಾಡಿದ್ದಾರೆ. ಆದರೆ ಬಿಜೆಪಿ ಸರ್ಕಾರದಲ್ಲಿಯೇ ಕಂದಾಯ ಅಧಿಕಾರಿಗಳು ಅನುಮತಿ ನೀಡಿರಲಿಲ್ಲ. ಗೋಮಾಳ ಜಾಗ ಆಗಿರುವುದರಿಂದ ಅನುಮತಿ ನೀಡಲಾಗದು ಎಂದು ಕಂದಾಯ ಇಲಾಖೆ ಕಾರ್ಯದರ್ಶಿ ಹೇಳಿದ್ದರು.

ಹಾಗಿದ್ದರೂ ಸುನಿಲ್ ಕುಮಾರ್ ತರಾತುರಿಯಲ್ಲಿ ಕಾಮಗಾರಿ ನಡೆಸಿದ್ದಾರೆ. ಅನಧಿಕೃತ ಎಂದು ತಿಳಿದಿದ್ದರೂ ಅಧಿಕಾರಿಗಳಿಗೆ ಒತ್ತಡ ಹೇರಿ ಕೆಲಸ ಮಾಡಿಸಿದ್ದರು. ನಕಲಿ ಪ್ರತಿಮೆ ಮಾಡಿರುವುದು ಹಿಂದುಗಳಿಗೆ, ಇಡೀ ದೇಶಕ್ಕೆ ಮಾಡಿದ ಅವಮಾನ. ಅಕ್ರಮ ಎಂದು ಗೊತ್ತಿದ್ದರೂ ಮುಖ್ಯಮಂತ್ರಿ ಬೊಮ್ಮಾಯಿ ಬಂದು ಉದ್ಘಾಟನೆ ಮಾಡಿದ್ದರು.
ಒಂದು ವೇಳೆ ಕಾಂಗ್ರೆಸ್ ಸರ್ಕಾರದಲ್ಲಿ ಹೀಗಾಗುತ್ತಿದ್ದರೆ ಇಡೀ ಜಿಲ್ಲೆಗೆ ಬೆಂಕಿ ಹಾಕುತ್ತಿದ್ದರು. ಹಿಂದು ಸಂಘಟನೆಗಳು ಈಗ ಯಾಕೆ ಮಾತಾಡುತ್ತಿಲ್ಲ, ಪರಶುರಾಮನಿಗೆ ಅಪಮಾನ ಆಗಿಲ್ಲವೇ? ಇವತ್ತು ಅರ್ಧ ಪ್ರತಿಮೆ ಇದೆ, ಅರ್ಧ ನಕಲಿ ಅನ್ನೋದು ಸಾಬೀತಾಗಿದೆ. ಫೈಬರ್ ಮಿಕ್ಸ್ ಪ್ರತಿಮೆ ಬಗ್ಗೆ ಪ್ರಶ್ನೆ ಮಾಡದೇ ಇದ್ದರೆ ಪರಶುರಾಮನ ಶಾಪ ತಟ್ಟಲಿದೆ. ನೈಜ ಹಿಂದುತ್ವ ಇದ್ದರೆ ಶಾಸಕ ಸುನಿಲ್ ಕುಮಾರ್ ಅವರನ್ನು ವಜಾಗೊಳಿಸಿ ಎಂದು ಆಗ್ರಹಿಸಿದರು.
ಬಿಜೆಪಿಯಿಂದ ಸುನಿಲ್ ಅವರನ್ನು ಅಮಾನತು ಮಾಡಿ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತುಗೊಳಿಸಿ. ಬಜರಂಗದಳ ಸೇರಿ ಎಲ್ಲ ಹಿಂದು ಸಂಘಟನೆಗಳು, ಮಠಾಧೀಶರು ಧ್ವನಿ ಎತ್ತಬೇಕು. ನಾವು ಎಲ್ಲ ಮಠಾಧೀಶರ ಬಳಿ ಹೋಗಿ ಧ್ವನಿ ಎತ್ತಲು, ನಮ್ಮ ಹೋರಾಟಕ್ಕೆ ಬೆಂಬಲ ಕೋರುತ್ತೇವೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಉನ್ನತ ಮಟ್ಟದ ತನಿಖೆ ನಡೆಸಲಿದ್ದಾರೆ. ಭ್ರಷ್ಟಾಚಾರ ಎಸಗಿದ ಸುನಿಲ್ ಕುಮಾರ್ ವಿರುದ್ಧ ಲೋಕಾಯುಕ್ತ ತನಿಖೆ ಆಗಬೇಕು ಎಂದು ಮಿಥುನ್ ರೈ ಆಗ್ರಹಿಸಿದರು.












Click it and Unblock the Notifications