ಉಡುಪಿ: ಅಪಘಾತದಲ್ಲಿ ಮೆದುಳು ನಿಶ್ಕ್ರಿಯ: ವಿದ್ಯಾರ್ಥಿ ಸಾವಿನಲ್ಲೂ ಸಾರ್ಥಕತೆ
ಉಡುಪಿ: ಅಪಘಾತದಲ್ಲಿ ಮೆದುಳು ನಿಶ್ಕ್ರಿಯಗೊಂಡ ಮಣಿಪಾಲ ಎಂಐಟಿ ಕಾಲೇಜಿನ ವಿದ್ಯಾರ್ಥಿಯ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಪೋಷಕರು ಮಗನ ಸಾವಿನ ನೋವಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಮಣಿಪಾಲ ಇನ್ಸ್‌ಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಯಾಗಿರುವ ಆಂಧ್ರಪ್ರದೇಶ ಮೂಲದ ವೆಮುಲಾ ಸುದರ್ಶನ್ ಚೌದರಿ ಅಕ್ಟೋಬರ್ 10ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ವೆಮುಲಾ ಸುದರ್ಶನ್ ಚೌದರಿ ಅವರ ತಲೆಗೆ ಗಂಭೀರ ಗಾಯಗಳಾಗಿದ್ದು, ಅಪಘಾತದ ಭೀಕರತೆಗೆ ಸುದರ್ಶನ್ ಚೌದರಿ ಅವರ ಮೆದುಳು ನಿಶ್ಕ್ರಿಯಗೊಂಡಿದೆ. ಮಣಿಪಾಲ ಆಸ್ಪತ್ರೆ ವೈದ್ಯರು ಈ ವಿಚಾರವನ್ನು ವೆಮುಲಾ ಸುದರ್ಶನ್ ಚೌದರಿ ಕುಟುಂಬಸ್ಥರಿಗೆ ತಿಳಿಸಿದ್ದಾರೆ. ಮಗನ ಆರೋಗ್ಯದ ಸ್ಥಿತಿಯ ಬಗ್ಗೆ ಅರಿತ ಸುದರ್ಶನ್ ಚೌದರಿ ತಂದೆ ವೆಮುಲಾ ಅಲೇಖ ಪ್ರಸಾದ್ ಮಗ ಅಂಗಾಗ ದಾನಕ್ಕೆ ನಿರ್ಧರಿಸಿದ್ದು, ಆಸ್ಪತ್ರೆಯ ವೈದ್ಯರಿಗೆ ಈ ವಿಚಾರ ತಿಳಿಸಿದ್ದಾರೆ.

ವೆಮುಲಾ ಅಲೇಖ ಪ್ರಸಾದ್ ಅವರ ನಿರ್ಧಾರಕ್ಕೆ ಆಸ್ಪತ್ರೆ ವೈದ್ಯರು ಒಪ್ಪಿಗೆ ಸೂಚಿಸಿದ್ದು, ಮಾನವ ಅಂಗ ಕಸಿ ಕಾಯ್ದೆ ಅನುಸಾರ ವೆಮುಲಾ ಸುದರ್ಶನ್ ಚೌದರಿ ಅವರ ದೇಹವನ್ನು 6 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಪರಿಶೀಲಿಸಲಾಯಿತು. ಬಳಿಕ ವೈದ್ಯರು ಅಂಗಾಂಗ ದಾನಕ್ಕೆ ಸಿದ್ಧತೆ ನಡೆಸಿದ್ದಾರೆ.
ವೆಮುಲಾ ಸುದರ್ಶನ್ ಚೌದರಿ ಅವರ ಅಂಗಾಂಗ ದಾನ ಮಾಡಲಾಗಿದ್ದು, ಮಂಗಳೂರಿನ ಕೆಎಂಸಿ ಆಸ್ಪತ್ರೆಗೆ ಯಕೃತ್, ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ಶ್ವಾಸಕೋಶ, ಮಂಗಳೂರಿನ ಎಜೆ ಆಸ್ಪತ್ರೆಗೆ ಮೂತ್ರಪಿಂಡ, ಮಣಿಪಾಲ ಕಸ್ತೂರಬಾ ಆಸ್ಪತ್ರೆಗೆ ಕಾರ್ನಿಯ, ಕಣ್ಣುಗುಡ್ಡೆ, ಮೂತ್ರಪಿಂಡ ಹಾಗೂ ಚರ್ಮವನ್ನು ರವಾನಿಸಲಾಗಿದೆ.
ಮಗನ ಸಾವಿನ ನೋವಿನಲ್ಲಿರುವ ವೆಮುಲಾ ಅಲೇಖ ಪ್ರಸಾದ್ ಮಗನ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಮಗನ ಅಂಗಾಂಗ ದಾನಗಳ ಬಗ್ಗೆ ಮಾತನಾಡಿದ್ದು, ಅಂಗಾಂಗ ದಾನವು ಮಹತ್ ಕಾರ್ಯವಾಗಿದ್ದು, ನನ್ನ ಮಗ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾನೆ ಎಂದಿದ್ದಾರೆ.
ಈ ಬಗ್ಗೆ ಡಾ. ಅವಿನಾಶ್ ಶೆಟ್ಟಿ ಮಾತನಾಡಿದ್ದು, "ಅಂಗಾಂಗ ದಾನ ಎನ್ನುವುದು ಜೀವ ಉಳಿಸುವ ಮಹಾನ್ ಕಾರ್ಯ. ಮಗನ ಸಾವಿನ ದುಃಖದಲ್ಲೂ ಅಂಗಾಗ ದಾನ ಮಾಡಿರುವ ವೆಮುಲಾ ಅಲೇಖ ಪ್ರಸಾದ್ ಅವರ ಕುಟುಂಬಸ್ಥರಿಗೆ ಧನ್ಯವಾದ ಅರ್ಪಿಸುತ್ತೇನೆ. ಒಂದು ಒಳ್ಳೆಯ ವಿಚಾರವೆಂದರೆ. ದಿನದಿಂದ ದಿನಕ್ಕೆ ಅಂಗಾಂಗ ದಾನದ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಹೆಚ್ಚಾಗುತ್ತಿದೆ," ಎಂದರು.
ಉಡುಪಿ ಹಾಗೂ ದಕ್ಷಿಣ ಕನ್ನಡ ಪೊಲೀಸ್ ಇಲಾಖೆ ಸಿಬ್ಬಂದಿ ವೆಮುಲಾ ಸುದರ್ಶನ್ ಚೌದರಿ ಅವರ ಅಂಗಾಂಗಗಳನ್ನು ಸೂಕ್ತ ಆಸ್ಪತ್ರೆಗೆ ರವಾನಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವೆಮುಲಾ ಸುದರ್ಶನ್ ಚೌದರಿ ಅವರ ಕುಟುಂಬಸ್ಥರ ಕಾರ್ಯಕ್ಕೆ ಮಣಿಪಾಲ ಆಸ್ಪತ್ರೆ ವೈದ್ಯರು, ಸಿಬ್ಬಂದಿ ಹಾಗೂ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications