ಇಡೀ ಕುಟುಂಬವನ್ನೇ ಬಲಿ ಪಡೆಯಿತು ಖಿನ್ನತೆ, ಮುಂಗೋಪ
ಉಡುಪಿ, ನವೆಂಬರ್ 28: ತನ್ನ ಪತ್ನಿ ಮತ್ತು ಮಕ್ಕಳನ್ನು ಬರ್ಬರವಾಗಿ ಕೊಂದು ವ್ಯಕ್ತಿಯೊಬ್ಬರು ತಾವೂ ಆತ್ಮಹತ್ಯೆಗೆ ಶರಣಾದ ಘಟನೆ ನಿನ್ನೆ ರಾತ್ರಿಯಷ್ಟೇ ಉಡುಪಿಯಲ್ಲಿ ನಡೆದಿತ್ತು. ಈ ಕುರಿತು ಪೊಲೀಸರು ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದು, ಕೊಲೆ ಮಾಡಿದ ವ್ಯಕ್ತಿಯು ಖಿನ್ನತೆಯಿಂದ ಬಳಲುತ್ತಿದ್ದು, ಆತನಿಗಿದ್ದ ಮುಂಗೋಪವೇ ಇಡೀ ಕುಟುಂಬವನ್ನು ಬಲಿ ಪಡೆದಿದೆ ಎಂದು ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದ ಗೋಳಿಯಂಗಡಿ ಎಂಬಲ್ಲಿ ಈ ಘಟನೆ ನಡೆದಿತ್ತು. ನಿನ್ನೆ ರಾತ್ರಿ ಈ ಪ್ರಕರಣ ಬೆಳಕಿಗೆ ಬಂದಿದ್ದು, ಸೂರ್ಯ ನಾರಾಯಣ ಅಲ್ಸೆ (52) ಎಂಬಾತ ತನ್ನ ಹೆಂಡತಿ ಮಾನಸ (38) ಮತ್ತು ಗಂಡು ಮಕ್ಕಳಾದ ಸುಧೀಂದ್ರ (14), ಸುದೇಶ (9) ಎಂಬುವವರನ್ನು ಆಯುಧದಿಂದ ಇರಿದು ಕೊಲೆ ಮಾಡಿ ತಾನು ಕೂಡ ಅದೇ ಕೋಣೆಯೊಳಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ.
ಸೂರ್ಯನಾರಾಯಣ ಅವರ ಕಿರಿಯ ಸಹೋದರ ಪ್ರಕಾಶ್ ಅಲ್ಸೆ ಶಂಕರನಾರಾಯಣ ಠಾಣೆಯಲ್ಲಿ ಈ ಕುರಿತು ದೂರನ್ನೂ ದಾಖಲಿಸಿದ್ದಾರೆ. ಇದೀಗ ಪೊಲೀಸರು ಮಾಹಿತಿ ಕಲೆ ಹಾಕಿದ್ದು, ಸಾಕಷ್ಟು ಅನುಕೂಲಸ್ಥನಾಗಿದ್ದ ಸೂರ್ಯನಾರಾಯಣ ತನ್ನ ಇಡೀ ಕುಟುಂಬವನ್ನು ಆಹುತಿ ತೆಗೆದುಕೊಂಡದ್ದು ಖಿನ್ನತೆಯ ಕಾರಣದಿಂದ ಎಂದು ತಿಳಿಸಿದ್ದಾರೆ.

"ಮೃತ ಸೂರ್ಯ ನಾರಾಯಣ ಅಲ್ಸೆ ಕಳೆದ 5 ವರ್ಷಗಳಿಂದ ಮಾನಸಿಕ ಅಸ್ವಸ್ಥನಾಗಿದ್ದು, ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈತ ಹಠ ಸ್ವಭಾವ ಮತ್ತು ಮುಂಗೋಪ ಸ್ವಭಾವದವನಾಗಿದ್ದ. ಇದೇ ಕಾರಣಕ್ಕೆ ಈ ಕೃತ್ಯ ಎಸಗಿದ್ದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ" ಎಂದು ಎಸ್ಪಿ ನಿಶಾ ಜೇಮ್ಸ್ ಹೇಳಿದ್ದಾರೆ.












Click it and Unblock the Notifications