Summer Death: ಉಡುಪಿಯಲ್ಲಿ ಬಿರು ಬಿಸಿಲಿಗೆ ಕುಸಿದು ಬಿದ್ದು ಯುವಕ ಸಾವು
ಉಡುಪಿ, ಮೇ 01: ಉಡುಪಿ ಜಿಲ್ಲೆಯಲ್ಲಿ ಬಿಲಿಸಿನ ತಾಪಮಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಬಿರು ಬಿಸಿಲಿಗೆ ಕುಸಿದು ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದಲ್ಲಿ ನಡೆದಿದೆ. ಬದಿಯಪ್ಪ ( 37) ಬಿಸಿಲಿನ ತಾಪಕ್ಕೆ ಬಲಿಯಾದ ಯುವಕ.
ವಾತಾವರಣದಲ್ಲಿ ಉಂಟಾಗಿರುವ ತಾಪಮಾನದ ಏರಿಕೆಯಿಂದ ಬಿಸಿಲು ಸಹಿಸಲಾರದೇ ಬದಿಯಪ್ಪ ಉಡುಪಿ ನಗರದ ಸಿಟಿ ಬಸ್ ನಿಲ್ದಾಣದ ಬಳಿ ಕುಸಿದು ಬಿದ್ದಿದ್ದಾರೆ. ಈ ರೀತಿ ಬಿದ್ದಿರುವ ವ್ಯಕ್ತಿಯನ್ನು ಕಂಡ ಸ್ಥಳೀಯರೊಬ್ಬರು ಉಡುಪಿ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ನಿತ್ಯಾನಂದ ಒಳಕಾಡು ಅವರಿಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ನಿತ್ಯಾನಂದ ಒಳಕಾಡು ಅವರು ಸ್ಥಳಕ್ಕೆ ದೌಡಾಯಿಸಿ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಕೂಡಲೇ ಬದಿಯಪ್ಪನನ್ನು ಆಸ್ಪತ್ರೆರೆ ಕರೆದೊಯ್ಯಲಾಯಿತು. ಆದರೆ ಬಿಸಿಲಿನ ತೀವ್ರತೆಯಿಂದ ಕುಸಿದಿದ್ದ ಬದಿಯಪ್ಪ ಆಸ್ಪತ್ರೆಗೆ ದಾಖಲಿಸುವ ಮೊದಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅತಿಯಾದ ಬಿಸಿಲಿಗೆ ವೃದ್ಧೆ ಬಲಿ
ಅತಿಯಾದ ಬಿಸಿಲಿಗೆ ವೃದ್ಧೆ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕುರಕುಂದಿ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಹಣಮಂತಿ (60) ಮೃತ ಕಾರ್ಮಿಕ ವೃದ್ಧೆ. ಹಣಮಂತಿ ಉದ್ಯೋಗ ಖಾತ್ರಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರು. ಏಪ್ರಿಲ್ 29 ಸೋಮವಾರವೂ ಕೂಲಿ ಕೆಲಸಕ್ಕೆ ಹೋಗಿದ್ದರು. ಈ ವೇಳೆ ಬಿಸಿಲಿನಲ್ಲೇ ಕೆಲಸ ಮಾಡುತ್ತಿದ್ದರು. ಈ ವೇಳೆ ಅಧಿಕ ಬಿಸಿಲಿನಿಂದಾಗಿ ಸ್ಥಳದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.












Click it and Unblock the Notifications