ಉಡುಪಿಯಲ್ಲಿ ಮೂವತ್ತು ವರ್ಷಗಳಲ್ಲೇ ಕಂಡೂ ಕೇಳರಿಯದ ಮತ್ಸ್ಯಕ್ಷಾಮ
ಉಡುಪಿ,
ಫೆಬ್ರವರಿ 20: ಕರಾವಳಿಯಲ್ಲಿ ಮತ್ಸ್ಯ ಕ್ಷಾಮ ತಲೆದೋರಿದೆ. ಕಡಲಿಗೆ ಇಳಿದು ಮೀನು ಬೇಟೆ ಮಾಡಬೇಕಾದ ಬೋಟುಗಳು ವರ್ಷದ ಆರಂಭದಲ್ಲೇ ಬಂದರುಗಳಲ್ಲಿ ಲಂಗರು ಹಾಕಿವೆ. ಸರಿಯಾಗಿ ಮೀನು ಪೂರೈಕೆಯಾಗದೆ ಮೀನು ದರ ಕೂಡ ಗಗನಕ್ಕೇರಿದೆ. ಮೀನಿನ ಬರದಿಂದಾಗಿ ಮೀನುಗಾರಿಕೆ ಉದ್ಯಮದಲ್ಲಿ ನೂರಾರು ಕೋಟಿ ರೂಪಾಯಿ ನಷ್ಟವಾಗಿದೆ. id="toptextpromo"> id='are-slot-1' class='oiad oi-axt oiadv'>ಸಾಮಾನ್ಯವಾಗಿ
ವರ್ಷದ ಒಂದೆರಡು ತಿಂಗಳು ಮೀನಿನ ಅಭಾವ ಅಥವಾ ಲಭ್ಯತೆಯಲ್ಲಿ ಏರುಪೇರು ಸಹಜ. ಆದರೆ ಈ ಬಾರಿಯ ಮತ್ಸ್ಯ ಕ್ಷಾಮ ಕಳೆದ ಮೂವತ್ತು ವರ್ಷಗಳಲ್ಲೇ ಕಂಡಿರಲಿಲ್ಲ ಎನ್ನುತ್ತಾರೆ ಮಲ್ಪೆಯ ಮೀನುಗಾರರು. id='are-slot-2' class='oiad oi-axt oiadv'>
ಏಳೆಂಟು ತಿಂಗಳಷ್ಟೆ ಮೀನುಗಾರಿಕಾ ಋತು
ಮೀನುಗಾರಿಕಾ ಋತುವಿನಲ್ಲಿ ಏಳೆಂಟು ತಿಂಗಳಷ್ಟೇ ಸಿಗುತ್ತದೆ. ಉಳಿದ ಅವಧಿ ಮಳೆಗಾಲ. ಈ ಋತುವಿನಲ್ಲಿ ಈಗಾಗಲೇ ಐದು ತಿಂಗಳು ಕಳೆದಿವೆ. ಮೀನುಗಾರಿಕಾ ಋತು ಮುಗಿಯಲು ಮೂರು ತಿಂಗಳಷ್ಟೆ ಬಾಕಿಯಿದೆ. ಕಳೆದ ಐದು ತಿಂಗಳಲ್ಲಿ ಅವಿಭಜಿತ ಜಿಲ್ಲೆಗಳಲ್ಲಿ ಮತ್ಸ್ಯೋದ್ಯಮ ಸಂಪೂರ್ಣ ನೆಲಕಚ್ಚಿದೆ. ಡಿಸೆಂಬರ್ ಅಂತ್ಯದವರೆಗಿನ ಲೆಕ್ಕಾಚಾರ ಗಮನಿಸಿದರೆ ಋತುವಿನ ಅಂತ್ಯಕ್ಕೆ ವರ್ಷದ ಗುರಿ ತಲುಪುವುದೇ ಅನುಮಾನವಾಗಿದೆ.

ಕಳೆದ ಬಾರಿ 900 ಕೋಟಿ ವ್ಯವಹಾರ
2019ರ ಏಪ್ರಿಲ್ ನಿಂದ ಡಿಸೆಂಬರ್ ವರೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.35,734 ಮೆಟ್ರಿಕ್ ಟನ್ ಮೀನು ಹಿಡಿಯಲಾಗಿದ್ದು, 1510 ಕೋಟಿ ರೂಪಾಯಿ ವ್ಯವಹಾರವಾಗಿದೆ. ಉಡುಪಿಯಲ್ಲಿ 86,265 ಮೆಟ್ರಿಕ್ ಟನ್ ಮೀನು ಲಭಿಸಿದ್ದು, ಸುಮಾರು 900 ಕೋಟಿ ರೂಪಾಯಿ ವ್ಯವಹಾರವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ, ಅವಿಭಜಿತ ಜಿಲ್ಲೆಗಳಲ್ಲಿ 756 ಕೋಟಿ ರೂಪಾಯಿ ವಹಿವಾಟಿನ ವ್ಯತ್ಯಾಸ ಕಂಡುಬರುತ್ತಿದೆ. ನಷ್ಟದ ಪ್ರಮಾಣ ಅಂದಾಜಿಸಲು ಈ ಅಂಕಿ ಅಂಶವೇ ಸಾಕು.

ಅವೈಜ್ಞಾನಿಕ ಮೀನುಗಾರಿಕೆಯೂ ಕಾರಣ?
ದಿನನಿತ್ಯ ಕರಾವಳಿಯಿಂದ ಮಹಾರಾಷ್ಟ್ರದ ಕಡೆಗೆ ಸಾವಿರಾರು ಬೋಟುಗಳು ಮೀನುಗಾರಿಕೆಗೆ ತೆರಳುತ್ತವೆ. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದ ಬೋಟುಗಳು ಕಡಲಿಗಿಳಿಯಲು ಸಾಧ್ಯವೇ ಆಗಿಲ್ಲ. ಆಳಸಮುದ್ರ ಮೀನುಗಾರಿಕೆ ಸಂಪೂರ್ಣ ನಷ್ಟ ಅನುಭವಿಸಿದೆ. ಇನ್ನು ಮೀನಿನ ಬರಕ್ಕೆ ಅವೈಜ್ಞಾನಿಕವಾಗಿ ಮೀನು ಹಿಡಿಯುವುದೂ ಒಂದು ಕಾರಣ. ಬೆಳಕಿನ ಮೀನುಗಾರಿಕೆ ನಡೆಸುತ್ತಿರುವುದು ಮೀನುಗಳ ಸಂತತಿಯನ್ನೇ ನಾಶ ಮಾಡಿ ಹಾಕಿದೆ. ಇದರ ಪರಿಣಾಮ ಐಸ್ ಮಾರಾಟಗಾರರು, ಲಾರಿ ಮಾಲೀಕರು, ಸಾಮಾನ್ಯ ವಾಪಾರಸ್ಥರು, ಆಟೋ ಚಾಲಕರು, ಸಾವಿರಾರು ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ.

ಲಕ್ಷಾಂತರ ಜನರಿಗೆ ಅನ್ನ ನೀಡುವ ಉದ್ಯಮ
ಮೀನುಗಾರಿಕೆ ಉದ್ಯಮ ನೇರ ಮತ್ತು ಪರೋಕ್ಷವಾಗಿ ಕರಾವಳಿಯಲ್ಲಿ ಲಕ್ಷಾಂತರ ಜನರಿಗೆ ಅನ್ನ ನೀಡುವ ಉದ್ಯಮ. ಆದರೆ ಕಂಡೂ ಕೇಳರಿಯದ ಮೀನಿನ ಅಭಾವ ಈ ಋತುವಿನಲ್ಲಿ ತಲೆದೋರಿದ್ದು, ಮೀನುಗಾರರು ಚಿಂತಾಕ್ರಾಂತರಾಗಿದ್ದಾರೆ. ಇನ್ನೊಂದೆಡೆ ಮಾರುಕಟ್ಟೆಯಲ್ಲಿ ಮೀನು ಕಡಿಮೆಯಾದ್ದರಿಂದ ದುಬಾರಿ ಬೆಲೆಯೂ ಆಗಿದೆ. ಹೀಗಾಗಿ ಮೀನುಪ್ರಿಯ ಕರಾವಳಿಗರೂ ಈ ಬಾರಿ ಮೀನು ತಿನ್ನುವ ಭಾಗ್ಯದಿಂದ ವಂಚಿತರಾಗಿದ್ದಾರೆ.












Click it and Unblock the Notifications