ಒಂದೇ ತಿಂಗಳಲ್ಲಿ ಕೊಲ್ಲೂರಿನಲ್ಲಿ 1 ಕೋಟಿ ಹುಂಡಿ ಕಾಣಿಕೆ ಸಂಗ್ರಹ
ಉಡುಪಿ, ಅಕ್ಟೋಬರ್ 27 : ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ದೇವಾಲಯದಲ್ಲಿ ಒಂದೇ ತಿಂಗಳಿನಲ್ಲಿ 1 ಕೋಟಿ ರೂ. ಹುಂಡಿ ಕಾಣಿಕೆ ಸಂಗ್ರಹವಾಗಿದೆ. ಒಂದು ತಿಂಗಳಿನಲ್ಲಿ ಇಷ್ಟು ಮೊತ್ತದ ಕಾಣಿಕೆ ಸಂಗ್ರಹವಾಗಿರುವುದು ಇದೇ ಮೊದಲು.
ಕೊಲ್ಲೂರು ಶ್ರೀ ಮೂಕಾಂಬಿಕ ದೇವಾಲಯಕ್ಕೆ ಕರ್ನಾಟಕ ಮಾತ್ರವಲ್ಲದೇ ತಮಿಳುನಾಡು, ಕೇರಳ ರಾಜ್ಯದಿಂದಲೂ ಭಕ್ತರು ಆಗಮಿಸುತ್ತಾರೆ. ಅಕ್ಟೋಬರ್ 24ರ ತನಕ ದೇವಾಲಯದಲ್ಲಿ 1,10,66,278 ರೂ. ಹುಂಡಿ ಕಾಣಿಗೆ ಸಂಗ್ರಹವಾಗಿದೆ.

ಇದೇ ಮೊದಲ ಬಾರಿಗೆ ಒಂದು ತಿಂಗಳಿನಲ್ಲಿ ಇಷ್ಟು ಮೊತ್ತದ ಹುಂಡಿ ಕಾಣಿಕೆ ಸಂಗ್ರಹವಾಗಿದೆ ಎನ್ನುತ್ತಾರೆ ದೇವಸ್ಥಾನದ ಆಡಳಿತ ಮಂಡಳಿ ಅಧಿಕಾರಿಗಳು. ಹಣದ ಜೊತೆಗೆ 870 ಗ್ರಾಂ ಚಿನ್ನ, 3.2 ಕೆಜಿ ಬೆಳ್ಳಿಯೂ ಹುಂಡಿಯಲ್ಲಿ ಸಿಕ್ಕಿದೆ.
2014ರ ಮೇ ತಿಂಗಳಿನಲ್ಲಿ ಹುಂಡಿ ಎಣಿಕೆ ಮಾಡಿದಾಗ 1.07 ಕೋಟಿ ಸಂಗ್ರಹವಾಗಿತ್ತು. 2013ರಲ್ಲಿ ಮೇ ತಿಂಗಳಿನಲ್ಲಿ 84 ಲಕ್ಷ ರೂ. ಸಂಗ್ರಹವಾಗಿತ್ತು. 2017ರ ಅಕ್ಟೋಬರ್ 24ರ ತನಕ ಸಂಗ್ರಹವಾಗಿರುವ ಕಾಣಿಕೆ ಇದುವರೆಗಿನ ಅತ್ಯಧಿಕ ಸಂಗ್ರಹವಾಗಿದೆ.
ದೇವಾಲಯದ ವಾರ್ಷಿಕ ಆದಾಯವೂ ಹೆಚ್ಚಾಗುತ್ತಿದೆ. 2008-09ರಲ್ಲಿ 16 ಕೋಟಿ ಇದ್ದ ದೇವಾಲಯದ ವಾರ್ಷಿಕ ಆದಾಯ, 2013-14ರಲ್ಲಿ 26.95 ಕೋಟಿಗೆ ಏರಿಕೆ ಯಾಗಿದೆ. ದೀಪಾವಳಿ, ದಸರಾ ರಜೆಗಳ ಸಮಯದಲ್ಲಿ ಲಕ್ಷಾಂತರ ಭಕ್ತರು ದೇವಾಲಯಕ್ಕೆ ಭೇಟಿ ನೀಡಿದ್ದು ಹುಂಡಿ ಕಾಣಿಕೆ ಹೆಚ್ಚಾಗಿ ಸಂಗ್ರಹವಾಗಿದೆ.
ದೇವಸ್ಥಾನದಲ್ಲಿ ನಡೆಸುವ ವಿಶೇಷ ಪೂಜೆಗಳಿಗೆ ವಿಧಿಸುವ ಶುಲ್ಕಗಳನ್ನು ಹುಂಡಿಯ ಹಣದ ಜೊತೆ ಬ್ಯಾಂಕ್‌ನಲ್ಲಿ ಜಮಾ ಮಾಡಲಾಗುತ್ತದೆ. ದೇವಸ್ಥಾನದ ಅಭಿವೃದ್ಧಿ ಕಾರ್ಯಗಳಿಗೆ ಅವುಗಳನ್ನು ಬಳಸಲಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.












Click it and Unblock the Notifications