Kantara: ಕಾಂತಾರ ಫಸ್ಟ್‌ಲುಕ್ ರಿಲೀಸ್: ಆನೆಗುಡ್ಡೆ ವಿನಾಯಕನಿಗೆ ಚಿತ್ರತಂಡದ ವಿಶೇಷ ಪೂಜೆ
ಉಡುಪಿ, ನವೆಂಬರ್ 27: ಕಾಂತಾರ ಯಶಸ್ಸನಿನ ಬೆನ್ನಲ್ಲೇ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸುತ್ತಿರುವ ಕಾಂತಾರ ಚಾಪ್ಟರ್ 1 ಫಸ್ಟ್ ಲುಕ್ ರಿಲಿಸ್ ಆಗಿದೆ. ಶಿವನ ಅವತಾರದ ಮತ್ತೊಂದು ರೂಪವಾಗಿ ರಿಷಬ್ ಭಯಂಕರ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಹೊಂಬಾಳೆ ಫಿಲ್ಮಸ್ ಲಾಂಛನದಲ್ಲಿ ಮೂಡಿ ಬರಲಿರುವ ಚಿತ್ರದ ಫಸ್ಟ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದು, ಕಾಂತಾರ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಕಾಂತಾರ ಚಾಪ್ಟರ್ 1 ಚಿತ್ರದ ಮಹೂರ್ತ ಹಾಗೂ ಫಸ್ಟ್ ಲುಕ್ ರಿಲೀಸ್ ಹಿನ್ನೆಲೆಯಲ್ಲಿ ಚಿತ್ರತಂಡದಿಂದ ಕುಂದಾಪುರ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ.

ಚಿತ್ರತಂಡ ಇಡೀ ದೇಗುಲವನ್ನು ಹೂವಿನಿಂದ ಸಿಂಗರಿಸಿದ್ದು, ಕುಂಭಾಶಿ ಆನೆಗುಡ್ಡೆ ವಿನಾಯಕ ದೇವಸ್ಥಾನದಲ್ಲಿ ಹೊಂಬಾಳೆ ಮತ್ತು ಕಾಂತಾರಾ ಎಂದು ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿದೆ. ಇನ್ನು ವಿನಾಯಕನಿಗೆ ಕಾಂತಾರ ಅಧ್ಯಾಯ 1 ಚಿತ್ರತಂಡ ಮೂಡುಗಣಪತಿ ಸೇವೆ, ತ್ರಿಕಾಲ ಸೇವೆ ಹಾಗೂ ಅನ್ನದಾನ ಸೇವೆಯನ್ನು ನೀಡಿದೆ.
ಚಿತ್ರದ ಬಗ್ಗೆ ಹಾಗೂ ನಿರ್ಮಾಪಕರ ಬಗ್ಗೆ ನಟ ರಿಷಬ್ ಶೆಟ್ಟಿ ಮಾತನಾಡಿದ್ದು, ನಿರ್ಮಾಪಕ ವಿಜಯ್ ಕಿರಗೊಂದೂರು ದೊಡ್ಡ ಶಕ್ತಿ. ಇಡೀ ದೇಶದಲ್ಲಿ ಅವರು ಒಂದು ಪವರ್ ಹೌಸ್. ಕಾಂತರಾ ಈ ಮಟ್ಟಕ್ಕೆ ಹೋಗಲು ಅವರ ಬೆಂಬಲ ಬಹಳ ದೊಡ್ಡದು. ಕಾಂತಾರ ಚಿತ್ರಕ್ಕೆ ಅವರು ಸಂಪೂರ್ಣವಾಗಿ ಬೆಂಬಲ ಕೊಟ್ಟಿದ್ದಾರೆ. ಇಡೀ ಚಿತ್ರಕ್ಕೆ ಅವರು ದೊಡ್ಡ ಶಕ್ತಿ ತುಂಬಿದ್ದಾರೆ ಎಂದರು.
ಒಂದು ಚಿತ್ರಕ್ಕೆ ನಾವು ಇಂತಿಷ್ಟು ಬಜೆಟ್ ನಿರ್ಧಾರ ಮಾಡಿರುತ್ತೇವೆ. ಅದು ಮುಂದೆ ಎಲ್ಲೋ ಹೋಗಿ ತಲುಪುತ್ತದೆ . ಕಾಂತಾರ ಮೊದಲ ಅಧ್ಯಾಯ ಕಥೆ ಅಪೇಕ್ಷೆ ಮಾಡುತ್ತದೆ ಅದಕ್ಕೆ ನಿರ್ಮಾಪಕರು ಪೂರ್ಣ ಸಹಕಾರ ಕೊಟ್ಟಿದ್ದಾರೆ. ನಮ್ಮ ನಡುವೆ ಒಳ್ಳೆಯ ಭಾಂದವ್ಯ ಸೃಷ್ಟಿಯಾಗಿದೆ. ಅಜನೀಶ್ ಗೋಯಲ್ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ತಾಂತ್ರಿಕವಾಗಿ ಯಾವುದೇ ಬದಲಾವಣೆಗಳನ್ನು ನಾವು ಮಾಡಿಕೊಂಡಿಲ್ಲ. ಕೆಲ ಹೊಸ ಕಲಾವಿದರು ಬರುತ್ತಾರೆ. ಮುಂದಿನ ತಿಂಗಳು ಶೂಟಿಂಗ್ ಮಾಡುವ ಆಲೋಚನೆ ಇದೆ. ಚಿತ್ರದ ಸ್ಕ್ರಿಪ್ಟ್ ವರ್ಕ್ ಕಂಪ್ಲೀಟ್ ಆಗಿದೆ ಎಂದು ಹೇಳಿದರು.

ಕಾಂತಾರದ ಅಧ್ಯಾಯ 1 ಶೂಟಿಂಗ್ ಶುರು ಮಾಡಲಿದ್ದೇವೆ. ಕಾಂತಾರವನ್ನು ಎಲ್ಲರೂ ಯಶಸ್ವಿ ಮಾಡಿದ್ದೀರಿ. ಕಾಂತಾರ ಪಯಣ ಈ ಮೂಲಕ ಮುಂದುವರೆಯಲಿದೆ. ಹಿಂದೆ ಏನು ನಡೆಯಿತು ಎಂದು ಹೇಳಲು ಹೊರಟಿದ್ದೇವೆ. ತುಂಬಾ ದೊಡ್ಡ ಯಶಸ್ಸನ್ನು ಕೊಟ್ಟಿದಿರಿ ನಮ್ಮ ಜವಾಬ್ದಾರಿ ಹೆಚ್ಚಿದೆ. ಇನ್ನು ಅದ್ಭುತವಾದ ಕೆಲಸ ಮಾಡುವ ಪ್ರಯತ್ನದಲ್ಲಿ ನಮ್ಮ ತಂಡ ಇದೆ ಎಂದರು.
ನನಗೆ ಆನೆಗುಡ್ಡೆ ಎಂದರೆ ತುಂಬಾ ಭಕ್ತಿ. ವಿಜಯ್ ಕಿರಂಗದೂರು ಅವರು ಕೂಡ ಇಲ್ಲಿಗೆ ನಿರಂತರ ಬರುತ್ತಾರೆ. ನಿರ್ಮಾಪಕರು ಬೆಂಗಳೂರಿನಿಂದ ಯಾವತ್ತೂ ಆನೆಗುಡ್ಡೆಗೆ ಬಂದು ನಮಸ್ಕರಿಸಿ ಹೋಗುತ್ತಾರೆ. ಹಾಗಾಗಿ ಕಳೆದ ಬಾರಿಯೂ ಕೂಡ ಇಲ್ಲೇ ಮುಹೂರ್ತ ಮಾಡಿದ್ದೇವು. ಆನೆಗುಡ್ಡೆ ಗಣಪತಿ ದೇವರ ಆಶೀರ್ವಾದ ತೆಗೆದುಕೊಂಡು ಕೆಲಸ ಶುರು ಮಾಡುತ್ತೇವೆ. ಮುಂದಿನ ತಿಂಗಳು ಶೂಟಿಂಗ್ ಶುರು ಮಾಡುತ್ತೇವೆ ಎಂದು ಹೇಳಿದರು.
ದೇವಸ್ಥಾನದಲ್ಲಿ ಮುಹೂರ್ತದ ವಿಚಾರ ಮಾಧ್ಯಮಗಳಿಗೆ ತಿಳಿಸಿರಲಿಲ್ಲ. ಜನರಿಗೆ ಅನಾನುಕೂಲವಾಗಬಾರದು ಎಂಬ ಕಾರಣಕ್ಕೆ ತಿಳಿಸಿರಲಿಲ್ಲ. ಸಿಂಪಲ್ ಆಗಿ ಪೂಜೆ ಮಾಡಿ ಹೋಗೋಣ ಎಂದು ಬಂದಿದ್ದೆವು. ಜನರ ರೆಸ್ಪಾನ್ಸ್ ನೋಡಿ ತುಂಬಾ ಖುಷಿಯಾಗುತ್ತಿದೆ. ಕಥೆಯ ಬಗ್ಗೆ ಏನು ಹೇಳಲ್ಲ ಮಾತಿಗಿಂತ ಕೆಲಸ ಮುಖ್ಯ. ಒಂದು ಸಣ್ಣ ಕ್ಲಿಮ್ಸ್ ಬಿಟ್ಟಿದ್ದೇವೆ ಪೋಸ್ಟರ್ ಬಿಡುಗಡೆ ಮಾಡಿದ್ದೇವೆ. ಹೋಗ್ತಾ ಹೋಗ್ತಾ ಸಿನಿಮಾನೇ ಮಾತಾಡುತ್ತದೆ.
ಕರಾವಳಿ ಭಾಗಕ್ಕೆ ಸಂಬಂಧಪಟ್ಟ ಸಿನಿಮಾ. ಹಾಗಾಗಿ ಇಲ್ಲೇ ಲೊಕೇಶನ್ ಬಳಸಿಕೊಳ್ಳುತ್ತೇವೆ. ಸದ್ಯಕ್ಕೆ ನನ್ನನ್ನು ನಾನು ಕಾಸ್ಟ್ ಮಾಡಿಕೊಂಡಿದ್ದೇನೆ. ಕನ್ನಡದ ಕಲಾವಿದರಿಗೆ ಮೊದಲನೇ ಕಾಂತಾರದಲ್ಲೂ ಅವಕಾಶ ನೀಡಿದ್ದೆ ಈಗಲೂ ಅವಕಾಶ ನೀಡುತ್ತೇನೆ. ಈ ಬಾರಿ ಮತ್ತಷ್ಟು ಹೊಸ ಸ್ಥಳೀಯ ಮುಖಗಳಿಗೆ ಅವಕಾಶ ನೀಡುತ್ತೇವೆ. ಕರಾವಳಿ ಸೇರಿದಂತೆ ಕರ್ನಾಟಕದ ಬೇರೆ ಬೇರೆ ಭಾಗಗಳಿಂದ ಕಲಾವಿದರನ್ನು ಬಳಸಿಕೊಳ್ಳುತ್ತೇವೆ. ರಂಗಭೂಮಿ ಹಿನ್ನೆಲೆಯವರಿಗೂ ಅವಕಾಶ ನೀಡುತ್ತೇವೆ ಎಂದು ಹೇಳಿದರು.












Click it and Unblock the Notifications