ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ವಿಧಿವಶ
ಉಡುಪಿ, ಜನವರಿ 08 : ಹಿರಿಯ ಪತ್ರಕರ್ತ ರವಿರಾಜ್ ವಳಲಂಬೆ ವಿಧಿವಶರಾಗಿದ್ದಾರೆ. ಈ ಟಿವಿ, ಸುವರ್ಣ ನ್ಯೂಸ್ ವಾಹಿನಿಯಲ್ಲಿ ಅವರು ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು.
ಹೃದಯಾಘಾತದಿಂದಾಗಿ ರವಿರಾಜ್ ವಳಲಂಬೆ ಮೃತಪಟ್ಟಿದ್ದಾರೆ. ಉಡುಪಿಯ ಕಿನ್ನಿಮುಲ್ಕಿಯಲ್ಲಿರುವ ನಿವಾಸದಲ್ಲಿ ಮಂಗಳವಾರ ರಾತ್ರಿ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು.
ಎದೆ ನೋವು ಕಾಣಿಸಿಕೊಂಡ ತಕ್ಷಣ ರವಿರಾಜ್ ವಳಲಂಬೆ ನಗರದ ಮಿಷನ್ ಕಾಂಪೌಂಡ್‌ನಲ್ಲಿರುವ ಲೋಂಬಾರ್ಡ್ ಆಸ್ಪತ್ರೆಗೆ ಸ್ನೇಹಿತನ ಜೊತೆ ತೆರಳಿದ್ದರು.

ಎದೆ ನೋವು ಹೆಚ್ಚಾದ ಕಾರಣ ಆದರ್ಶ ಆಸ್ಪತ್ರೆಯ ವೈದ್ಯರಾದ ಡಾ. ಚಂದ್ರಶೇಖರ್‌ಗೆ ಅವರೇ ಕಡೆ ಮಾಡಿ ಬರುತ್ತಿರುವುದಾಗಿ ಹೇಳಿದ್ದರು. ಬಳಿಕ ಕಾರಿನೊಳಗೆ ಬಂದು ಕುಳಿತವರು ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ರವಿರಾಜ್ ವಳಲಂಬೆ ಅವರು ಪತ್ನಿ, ಅವಳಿ-ಜವಳಿ ಪುತ್ರಿಯರನ್ನು ಅಗಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವಳಲಂಬೆಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಉಡುಪಿಯಲ್ಲಿ ಈ ಟಿವಿ ವರದಿಗಾರರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ ರವಿರಾಜ್ ವಳಲಂಬೆ ಬಳಿಕ ಸುವರ್ಣ ನ್ಯೂಸ್ ಸೇರಿದ್ದರು. ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ್ದರು.
ಪ್ರಸ್ತುತ ಉಡುಪಿಯಲ್ಲಿ ಪ್ರೈಮ್ ಟಿವಿ ಎಂಬ ಖಾಸಗಿ ವಾಹಿನಿಯ ನಿರ್ದೇಶರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ರವಿರಾಜ್ ವಳಲಂಬೆ ನಿಧನಕ್ಕೆ ಗಣ್ಯರು, ಸ್ನೇಹಿತರು ಸಂತಾಪ ಸೂಚಿಸಿದ್ದಾರೆ.











Click it and Unblock the Notifications