ವಿಮರ್ಶಕ ದುಂಡಪ್ಪಗೆ ಇನಾಮ್ ದಾರ್ ಪ್ರಶಸ್ತಿ ಪ್ರದಾನ
ಉಡುಪಿ, ಮಾರ್ಚ್ 4 : ಖ್ಯಾತ ವಿಮರ್ಶಕ ಎಚ್. ದುಂಡಪ್ಪ ಅವರಿಗೆ ಪ್ರತಿಷ್ಠಿತ 'ವಿ.ಎಂ.ಇನಾಂದಾರ್ ವಿಮರ್ಶಾ ಪ್ರಶಸ್ತಿ' ಯನ್ನು ಶನಿವಾರ ಪ್ರದಾನ ಮಾಡಲಾಯಿತು.
ಉಡುಪಿ ಮಹಾತ್ಮಗಾಂಧಿ ಮೆಮೋರಿಯಲ್ ಕಾಲೇಜಿನ ವತಿಯಿಂದ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಆಯೋಜಿಸಲಾದ ಮುದ್ದಣ ಸಾಹಿತ್ಯೋತ್ಸವದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಈ ವೇಳೆ 'ಸಾಹಿತ್ಯ ಮತ್ತು ವಿಮರ್ಶೆ' ವಿಷಯದ ಕುರಿತು ಮಾತನಾಡಿದ ಅವರು, ' ಸಾಹಿತ್ಯ ಕೃತಿಯನ್ನು ಓದಿ ಅರ್ಥೈಸುವುದೇ ವಿಮರ್ಶೆ. ಸಾಹಿತ್ಯ ಎಂಬುದು ಜೀವನ. ಅದರಲ್ಲಿರುವ ತಪ್ಪು ಸರಿಯನ್ನು ತಿಳಿದುಕೊಳ್ಳುವುದು ಕೂಡ ವಿಮರ್ಶೆ. ವಿಮರ್ಶಕರು ಜ್ಞಾನದ ಕಡೆ ಹೆಚ್ಚು ಗಮನ ಕೊಡುತ್ತಾರೆ ಎಂದು ಹೇಳಿದರು.
ಇದೇ ವೇಳೆ ಮುಖ್ಯ ಅತಿಥಿ, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ' ನಂದಳಿಕೆ ಮುದ್ದಣ ಹೆಜ್ಜೆ ಗುರುತು -31' ಭಾವಚಿತ್ರಗಳನ್ನು ಅನಾವರಣ ಗೊಳಿಸಿದರು.
ಮಣಿಪಾಲ ವಿವಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಸಂಯೋಜನಾಧಿಕಾರಿ ಪ್ರೊ.ವರದೇಶ ಹಿರೇಗಂಗೆ ಪ್ರಶಸ್ತಿ ಹಾಗೂ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಮಂಗಳೂರು ಮುದ್ದಣ ಪ್ರಕಾಶನದ ಗೌರವ ನಿರ್ದೇಶಕ ನಂದಳಿಕೆ ಬಾಲಚಂದ್ರರಾವ್ ಉಪಸ್ಥಿತರಿದ್ದರು. ಅಧ್ಯಕ್ಷತೆ ಯನ್ನು ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ವಹಿಸಿದ್ದರು.
ಕನ್ನಡ ವಿಭಾಗದ ಮುಖ್ಯಸ್ಥ ಡಾ.ಪುತ್ತಿ ವಸಂತಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ವಿದ್ಯಾರ್ಥಿಗಳಿಂದ ಭಾವಗಾಯನ ನಡೆಯಿತು. ಉಪನ್ಯಾಸಕ ಶಮಂತ್ ಕುಮಾರ್ ಪ್ರಶಸ್ತಿ ಪತ್ರ ವಾಚಿಸಿ, ವಂದಿಸಿದರು. ಉಪನ್ಯಾಸಕಿ ಸುಪ್ರೀತಾ ಡಿ.ಎಸ್. ಕಾರ್ಯಕ್ರಮ ನಿರೂಪಿಸಿದರು.












Click it and Unblock the Notifications