ಉಡುಪಿ; ಜುಲೈ 28ರ ತನಕ ಯೆಲ್ಲೋ ಅಲರ್ಟ್, ಜಿಲ್ಲಾಡಳಿತದ ಸೂಚನೆ
ಉಡುಪಿ, ಜುಲೈ 24; ಕರ್ನಾಟಕದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಜಿಲ್ಲಾಡಳಿತ ನೀಡಿರುವ ಹೇಳಿಕೆಯಂತೆ ಜುಲೈ 28ರ ತನಕ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಮಳೆ ಹಿನ್ನಲೆಯಲ್ಲಿ ಜಿಲ್ಲಾಡಳಿತ ಕೆಲವು ಸೂಚನೆಗಳನ್ನು ಸಹ ನೀಡಿದೆ.
ಜುಲೈ 23ರ ಜಿಲ್ಲಾಡಳಿತ ಪ್ರಕಟಣೆ ಪ್ರಕಾರ ಜುಲೈ 24 ಮತ್ತು 25ರಂದು ಜಿಲ್ಲೆಗೆ ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ 26, 27 ಮತ್ತು 28ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಜುಲೈ 29ರಂದು ಹಗುರ/ ಸಾಧಾರಣ ಮಳೆಯಾಗಲಿದೆ.

ಭಾರೀ ಮಳೆ ಹಿನ್ನಲೆಯಲ್ಲಿ ಉಡುಪಿ ಜಿಲ್ಲಾಡಳಿತ ಸೋಮವಾರ ಶಾಲೆಗಳಿಗೆ ರಜೆ ನೀಡಿದೆ. ಆದರೆ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಇಂಜಿನಿಯರಿಂಗ್, ಐಟಿಐಗಳಿಗೆ ರಜೆಯನ್ನು ಘೋಷಣೆ ಮಾಡಿಲ್ಲ.
ಜಿಲ್ಲಾಡಳಿತದ ಸೂಚನೆಗಳು; ಉಡುಪಿ ಜಿಲ್ಲಾಡಳಿತ ವಿಪತ್ತು ನಿರ್ವಹಣಾ 2005 ಕಾಯ್ದೆ ಕಲಂ 26, 30 ಮತ್ತು 34ರಡಿ) ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಕುರಿತು ಅಧಿಕೃತ ಜ್ಞಾಪನಾ ಪತ್ರವನ್ನು ಸಹ ಹೊರಡಿಸಿದೆ.
ಕಾಲೇಜುಗಳಲ್ಲಿ ಪಾಠ ಪ್ರವಚನಗಳನ್ನು ನಡೆಸುವಾಗ ಹಲವು ಅಂಶಗಳನ್ನು ಪರಿಗಣಿಸುವಂತೆ ಕಾಲೇಜುಗಳ ಮುಖ್ಯಸ್ಥರಿಗೆ ಹಾಗೂ ಸಂಬಂಧ ಪಟ್ಟವರಿಗೆ ಸಾಮಾನ್ಯ ಸೂಚನೆಯನ್ನು ನೀಡಲಾಗಿದೆ. ವಿದ್ಯಾರ್ಥಿಗಳ ಹಾಜರಾತಿಯನ್ನು ಕಡ್ಡಾಯ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಕಾಲೇಜು ಮುಖ್ಯಸ್ಥರು ವಿದ್ಯಾರ್ಥಿಗಳು ಕಾಲೇಜಿಗೆ ಆಗಮಿಸುವಾಗ ಹಾಗೂ ಮನೆಗೆ ತೆರಳುವ ಸಂದರ್ಭದಲ್ಲಿ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ತಲುವುವ ಬಗ್ಗೆ ಗಮನವಹಿಸುವುದು.
ಕಠಿಣವಾದ ದಾರಿ ಎಂದರೆ ತೋಡು ಹಳ್ಳಗಳನ್ನು ದಾಟಿ ಬರುವ ಸಂದರ್ಭಗಳು ಇರುವಂತಹ ವಿದ್ಯಾರ್ಥಿಗಳಿಗೆ ಮನೆಯಲ್ಲಿಯೇ ಸುರಕ್ಷಿತವಾಗಿ ಇರುವಂತೆ ಸೂಚಿಸಲು ತಿಳಿಸಲಾಗಿದೆ.
ದುರ್ಬಲ/ ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಕಾಲೇಜುಗಳ ಮುಖ್ಯಸ್ಥರು ಕಾಲೇಜು ಕಟ್ಟಡಗಳ ಸುಸ್ಥಿತಿಯ ಬಗ್ಗೆ ಗಮನಹರಿಸುವುದು ಹಾಗೂ ಯಾವುದೇ ಅವಘಡಗಳು ಉಂಟಾಗದಂತೆ ಸೂಕ್ತ ಕ್ರಮವಹಿಸುವುದು ಎಂದು ಸೂಚಿಸಿದೆ.
ಈಗ ಮಳೆಗಾಗಿ, ಮಂಜಾಗರೂಕತಾ ಕ್ರಮವಾಗಿ ರಜೆಯನ್ನು ನೀಡಿ ಉಂಟಾಗಿರುವ ಕಲಿಕಾ ಸಮಯವನ್ನು ಶನಿವಾರ ಮಧ್ಯಾಹ್ನ ಅಥವಾ ಭಾನುವಾರಗಳಂದು ಹೆಚ್ಚುವರಿ ತರಗತಿಗಳನ್ನು ನಡೆಸಿ ನಷ್ಟವನ್ನು ಸರಿದೂಗಿಸುವಂತೆ ತಿಳಿಸಿದೆ.
ವಿದ್ಯಾರ್ಥಿಗಳ ಪೋಷಕರು/ ಕಾಲೇಜು ಮುಖ್ಯಸ್ಥರು, ವಿದ್ಯಾರ್ಥಿಗಳು ನೀರು ಇರುವ ತಗ್ಗು ಪುದೇಶ, ಕೆರೆ, ನದಿ ತೀರ ಸಮುದ್ರತೀರಕ್ಕೆ ಹೋಗದಂತೆ ಜಾಗ್ರತೆ ವಹಿಸುವುದು.
ವಿದ್ಯಾರ್ಥಿಗಳು ಕಾಲೇಜುಗಳಿಗೆ ಹೋಗುವ ವಾಹನಗಳ ಸುರಕ್ಷತೆಯನ್ನು ನೋಡಿಕೊಳ್ಳುವುದು. ಕಾಲೇಜುಗಳಲ್ಲಿ ಪ್ರಾಕೃತಿಕ ವಿಕೋಪ ನಿಭಾಯಿಸುವ ಬಗ್ಗೆ, ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡುವುದು ಎಂದು ಹೇಳಿದೆ.
ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಈ ಕೆಳಕಂಡ ದೂರವಾಣಿಯನ್ನು ಸಂಪರ್ಕಿಸುವುದು. ತುರ್ತು ಸೇವೆಗೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂಂ 1077/ 0820-2574802.
ಕೊಚ್ಚಿ ಹೋದ ಯುವಕ; ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದ್ದು, ಪ್ರವಾಸಿಗರು ಸಹ ಎಚ್ಚರ ವಹಿಸಬೇಕಿದೆ. ಬೈಂದೂರು ತಾಲ್ಲೂಕಿನ ಕೊಲ್ಲೂರು ಬಳಿಯ ಅರಶಿನಗುಂಡಿ ಜಲಪಾತ ವೀಕ್ಷಣೆಗೆ ಬಂದಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಯುವಕ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ. ಶವಕ್ಕಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ.
ಮಳೆಯ ಕಾರಣ ನದಿ, ಹಳ್ಳ, ಕೊಳ್ಳಗಳು ಜಲಾವೃತವಾಗಿವೆ. ನದಿಗಳು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿವೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಜನರು ಎಚ್ಚರದಿಂದ ಇರುವಂತೆ ಮನವಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಳೆಯ ನಡುವೆಯೂ ಕೃಷಿ ಚಟುವಟಿಕೆಗಳು ಬಿರುಸಾಗಿವೆ. ಜಿಲ್ಲಾ ಪಂಚಾಯಿತಿ ಸಿಇಒ ಪ್ರಸನ್ನ ಗದ್ದೆ ಉಳುವೆ ಮಾಡಿ ಗಮನ ಸೆಳೆದರು. ಕುಂದಾಪುರ ತಾಲೂಕಿನ ಅಂಪಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಡಾಳಿಯಲ್ಲಿ 12 ಎಕರೆ ಹಡಿಲು ಭೂಮಿಯಲ್ಲಿ ಭತ್ತದ ಕೃಷಿ ನಾಟಿ ಕಾರ್ಯದಲ್ಲಿ ಸಿಇಒ ಭಾಗವಹಿಸಿದ್ದರು. ಮಳೆಯ ನಡುವೆಯೇ ಗದ್ದೆಗೆ ಇಳಿದ ಅವರು ಕೋಣಗಳ ಮೂಲಕ ಉಳುಮೆ ಮಾಡಿದರು.












Click it and Unblock the Notifications