Get Updates
Get notified of breaking news, exclusive insights, and must-see stories!

ಹಿಜಾಬ್‌ vs ಕೇಸರಿ ಶಲ್ಯ: ಮತೀಯ ರಾಜಕೀಯಕ್ಕೆ ವಿದ್ಯಾರ್ಥಿಗಳೇ ಪ್ರಯೋಗ ಶಿಶುಗಳು

ಮಂಗಳೂರು, ಫೆಬ್ರವರಿ 03: ಒಂದು ಕಾಲದಲ್ಲಿ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡವು ಕೋಮು ಸೌಹಾರ್ದದ ನೆಲೆ ಬೀಡಾಗಿತ್ತು. ಆದರೆ ಈಗ ಧರ್ಮಗಳ ನಡುವೆ ಕೋಮು ಸಂಘರ್ಷವನ್ನು ಹಬ್ಬಿಸುವ ಪ್ರಯೋಗ ಶಾಲೆಯಂತಾಗಿದೆ. ಈ ಹಿಂದೆ ಚರ್ಚ್, ಮಸೀದಿ, ದೇವಾಲಯ ವಿಚಾರದಲ್ಲಿ ದಕ್ಷಿಣ ಕನ್ನಡ, ಉಡುಪಿಯಲ್ಲಿ ಹಲವಾರು ಕೋಮು ಸಂಘರ್ಷಗಳು ನಡೆದಿದೆ. ಈಗ ಶಾಲಾ-ಕಾಲೇಜುಗಳಲ್ಲಿ ಸಮವಸ್ತ್ರದ ವಿಚಾರದಲ್ಲಿ ಕೋಮು ವಿಭಜನೆ ನಡೆಯುತ್ತಿದೆ.

ಕಳೆದ ಮೂವತ್ತಕ್ಕೂ ಅಧಿಕ ವರ್ಷಗಳಿಂದ ಉಡುಪಿಯ ಪದವಿಪೂರ್ವ ಮಹಿಳಾ ಕಾಲೇಜಿನಲ್ಲಿ ಸರ್ವ ಧರ್ಮದ ವಿದ್ಯಾರ್ಥಿನಿಯರು ಸಮವಸ್ತ್ರವನ್ನು ಧರಿಸಿ ತರಗತಿಗೆ ಹಾಜರಾಗುತ್ತಿದ್ದರು. ಹಿಜಾಬ್‌ ಧರಿಸಿ ಬರುವವರು ತರಗತಿ ಪ್ರವೇಶ ಮಾಡಿದ ಮೇಲೆ ಹಿಜಾಬ್‌ ತೆಗೆದಿರಿಸಿ, ಪಾಠ ಕೇಳುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ ಹಿಜಾಬ್‌ ಎಂಬ ವಿವಾದವೊಂದು ಎದ್ದಿದೆ. ಒಂದೆಡೆ ಹಿಜಾಬ್‌ ನಮ್ಮ ಧಾರ್ಮಿಕ ಹಕ್ಕು ಎಂದು ವಿದ್ಯಾರ್ಥಿನಿಯರು ಹೇಳಿದರೆ, ಇನ್ನೊಂದೆಡೆ ಹಿಜಾಬ್‌ ಹಾಕಿ ಕಾಲೇಜಿನ ಕಾಂಪೌಡ್‌ ಒಳಗೆ ಬರುವುದಕ್ಕೆ ಅವಕಾಶ ಇಲ್ಲ ಎಂದು ಉಡುಪಿ ಕಾಲೇಜಿನ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಾಲೇಜಿಗೆ ಬಂದ ಬಳಿಕ ಹಿಜಾಬ್‌ ತೆಗೆದು ಕಾಲೇಜಿನ ಸಮವಸ್ತ್ರದಲ್ಲೇ ತರಗತಿಗೆ ಹಾಜರಾಗಬೇಕು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದ್ದಾರೆ.

ಇನ್ನು ಇದನ್ನು ವಿರೋಧ ಮಾಡಿ ವಿದ್ಯಾರ್ಥಿನಿಯರು ಕಾಲೇಜಿನ ಆವರಣ ಒಳಗೆ ಬಂದು ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ಈ ಮಧ್ಯೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್‌ಗೆ ಅವಕಾಶ ಬೇಕು ಎಂದು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆ ಮಾಡಲಾಗಿದೆ. ಸದ್ಯ ಹಿಜಾಬ್‌ ವಿವಾದ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ನಡುವೆ ಕಾಲೇಜುಗಳಲ್ಲಿ ಹಿಜಾಬ್‌ ವಿರುದ್ಧವಾಗಿ ಕೇಸರಿ ಶಲ್ಯ ಧರಿಸುವುದು ಕೂಡಾ ಆರಂಭವಾಗಿದೆ. ಒಂದೆಡೆ ಬಲಪಂಥೀಯ ಕೋಮುವಾದಿ ಗುಂಪು ಹಾಗೂ ಇನ್ನೊಂದೆಡೆ ಮತೀಯವಾದಿ ಗುಂಪು ಈ ವಿಚಾರವನ್ನು ಹಿಡಿದುಕೊಂಡು ಎಳೆದಾಡುವ ಮೂಲಕ ಶೈಕ್ಷಣಿಕ ಕೇಂದ್ರವನ್ನು ಕೋಮುವಾದದ ಪ್ರಯೋಗ ಶಾಲೆಯನ್ನಾಗಿಸುತ್ತಿದೆ.

ಈ ನಡುವೆ ವಿದ್ಯಾರ್ಥಿಗಳ ನಿಜವಾದ ಸಮಸ್ಯೆಗಳು, ಪ್ರಶ್ನೆಗಳು ವಿದ್ಯಾರ್ಥಿಗಳಿಗೆ ಅರ್ಥವಾಗದಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ವಿದ್ಯಾರ್ಥಿ ಸಂಘಟನೆ ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಹೇಳಿದೆ. ಇನ್ನೊಂದೆಡೆ ವಿದ್ಯಾರ್ಥಿಗಳು ಧರ್ಮದ ಗುರುತು, ಸಂಪ್ರದಾಯಗಳಿಗಾಗಿ ತರಗತಿಯ ಒಳಗಡೆ ಪರಸ್ಪರ ಕಿತ್ತಾಡುವುದು ಖೇದಕರ ಎಂದು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಶನ್‌ (ಡಿವೈಎಫ್‌ಐ) ತಿಳಿಸಿದೆ. ಈ ಮಧ್ಯೆ ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌, ಯಾರೇ ಆದರೂ ಶಾಲೆಯ ನಿಯಮವನ್ನು ಪಾಲಿಸಬೇಕು ಎಂದು ಹೇಳಿದ್ದಾರೆ.

"ಕೋಮುವಾದಿಗಳ ಉದ್ದೇಶ ವಿದ್ಯಾರ್ಥಿಗಳು ಅರಿಯಬೇಕು"

"ವಿದ್ಯಾರ್ಥಿಗಳು ಧರ್ಮದ ಗುರುತು, ಸಂಪ್ರದಾಯಗಳಿಗಾಗಿ ತರಗತಿಯ ಒಳಗಡೆ ಪರಸ್ಪರ ಕಿತ್ತಾಡುವುದು ಖೇದಕರ. ಜೊತೆಯಾಗಿ ಓದುವುದು ಪರಸ್ಪರರ ಸಂಪ್ರದಾಯಗಳನ್ನು ಅರಿತುಕೊಳ್ಳಲು, ಸಹಬಾಳ್ವೆ ರೂಢಿಸಿಕೊಳ್ಳಲು ಸಹಕಾರಿ ಆಗಬೇಕಿತ್ತು. ಆದರೆ ಇಲ್ಲಿ ಅದಕ್ಕೆ ತದ್ವಿರುದ್ದವಾಗಿ ತರಗತಿಯ ಒಳಗಡೆ ಧರ್ಮದ ಗುಂಪುಗಳಾಗಿ ಒಡೆದುಹೋಗುತ್ತಿರುವುದು ಕಾಣುತ್ತಿದ್ದೇವೆ. ಸ್ಕಾರ್ಪ್ ಧರಿಸುವುದು, ಧರಿಸದೆ ಇರುವುದು ಒಂದು ವಿಷಯವೇ ಆಗಬಾರದಿತ್ತು. ಶಿಕ್ಷಣ ಪಡೆಯುವುದೇ ಆದ್ಯತೆ ಆಗಬೇಕಿತ್ತು. ಸಮವಸ್ತ್ರ ಪದ್ದತಿ ಶಿಕ್ಷಣ ಪಡೆಯಲು ಪೂರಕವಾಗಬೇಕೆ ಹೊರತು ತಡೆಯಾಗಬಾರದು. ಈಗ ಎದ್ದಿರುವ ಹಿಜಾಬ್ ವಿವಾದ ಸ್ಪಷ್ಟವಾದ ರಾಜಕೀಯ ಅಜೆಂಡಾ ಹೊಂದಿದೆ. ಉಡುಪಿಯ ಬಾಲಕಿಯರ ಕಾಲೇಜಿನಲ್ಲಿ ಈವರಗೆ ಸ್ಕಾರ್ಪ್ ಧರಿಸುವ ಅವಕಾಶ ಇರಲಿಲ್ಲ. ಏಕಾಏಕಿ ಅಲ್ಲಿ ಹಿಜಾಬ್ ಗಾಗಿ ಹೋರಾಟ, ಸಂಘರ್ಷದ ಅಗತ್ಯ ಇರಲಿಲ್ಲ. ಆದರೆ ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಸ್ಕಾರ್ಪ್ ಧರಿಸಲು ಇಲ್ಲಿಯವರಗೆ ಅವಕಾಶ ಇತ್ತು. ಈಗ ಏಕಾಏಕಿ ಕೆಲವು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ಹಾಕಿಸಿ ಕಳುಹಿಸಿದ್ದು ಯಾರು? ಅದನ್ನೇ ಮುಂದಿಟ್ಟು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಸ್ಕಾರ್ಫ್ ಧರಿಸದಂತೆ ನಿಷೇಧ ಹೇರಿದ್ದು, ಕಾಲೇಜು ಆವರಣದಿಂದ ಹೊರದಬ್ಬಿದ್ದು ಯಾಕೆ? ಇದರ ಹಿಂದೆ ಯಾರಿದ್ದಾರೆ ಎಂದು ತಿಳಿಯುವುದು ಕಷ್ಟ ಏನಲ್ಲ. ಇದು ಪಕ್ಕಾ ರಾಜಕೀಯ ಆಟ. ಮುಂಬರುವ ಚುನಾವಣೆಗಾಗಿ ಧರ್ಮದ ಆಧಾರದಲ್ಲಿ ಮತದಾರರನ್ನು ಧ್ರುವೀಕರಿಸಲು ಶಿಕ್ಷಣ ಸಂಸ್ಥೆ, ವಿದ್ಯಾರ್ಥಿಗಳನ್ನು ದಾಳವಾಗಿಸಲಾಗುತ್ತಿದೆ. ಕರಾವಳಿ ಜಿಲ್ಲೆಗಳು ಆರ್‌ಎಸ್‌ಎಸ್‌ ಹಾಗೂ ಪಿಎಫ್ಐ ಪ್ರಯೋಗಶಾಲೆಯಾಗಿ ಪರಿವರ್ತ‌ನೆ ಹೊಂದಿದೆ. ಜಾತ್ಯತೀತ ಶಕ್ತಿಗಳನ್ನು ಉಸಿರುಗಟ್ಟಿಸಲಾಗುತ್ತಿದೆ. ಈ ಎರಡೂ ಕೋಮುವಾದಿ ಪರಿವಾರಗಳ ಉದ್ದೇಶಗಳನ್ನು ವಿದ್ಯಾರ್ಥಿಗಳು, ಪೋಷಕರು, ನಾಗರಿಕರು ಅರ್ಥ ಮಾಡಿಕೊಂಡರೆ ಮಾತ್ರ ಈ ವಿವಾದ ತಣ್ಣಗಾಲು ಸಾಧ್ಯ," ಎಂದು ತಿಳಿಸಿದ್ದಾರೆ.

"ಹಿಜಾಬ್‌ ಧರಿಸಿದಾಗ ಕೇಸರಿ ಶಲ್ಯ ಹಾಕುವುದು ಸಹಜ": ಶರಣ್‌ ಪಂಪ್‌ವೆಲ್‌

"ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್‌ನ ವಿವಾದವನ್ನು ಮಾಡುತ್ತಿರುವುದು ಸರಿಯಲ್ಲ. ಸಮಾಜದಲ್ಲಿ ಒಂದು ನೀತಿ, ನಿಯಮ ಎಂಬುವುದು ಇದೆ. ಪ್ರತಿಯೊಂದು ಶಿಕ್ಷಣ ಸಂಸ್ಥೆ ನೀತಿ ನಿಯಮವನ್ನು ಮಾಡಿರುತ್ತದೆ. ಆ ನೀತಿ ನಿಯಮದ ಪ್ರಕಾರ ನಾವು ಇರಬೇಕಾಗುತ್ತದೆ. ಆದರೆ ಇವರು ನಮ್ಮ ಧಾರ್ಮಿಕ ಹಕ್ಕು, ನಾವು ಹಿಜಾಬ್‌ ಹಾಕಿಯೇ ಹೋಗಬೇಕು ಎಂದು ಹೇಳುವುದು ಸರಿಯಲ್ಲ. ಹಿಜಾಬ್‌ ಹಾಕುವುದಕ್ಕೆ ನನಗೂ ಗೌರವ ಇದೆ. ಆದರೆ ಎಲ್ಲಿ ಹಾಕಬೇಕೋ ಅಲ್ಲೇ ಹಾಕಬೇಕು. ಅದನ್ನು ಬಿಟ್ಟು ಕಾಲೇಜಿನಲ್ಲಿ ಈ ವಿವಾದ ಸೃಷ್ಟಿ ಮಾಡುವುದು ಸರಿಯಲ್ಲ. ಈ ವಿದ್ಯಾರ್ಥಿಗಳಿಗೆ ಸರಿಯಾಗಿ ತಿಳಿಹೇಳಬೇಕಾಗಿದೆ. ಇನ್ನು ಈ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸುವಾಗ ಉಳಿದವರು ಕೇಸರಿ ಶಲ್ಯ ಧರಿಸುವುದು ಸಹಜ. ಯಾರೇ ಆದರೂ ಶಾಲೆಯ ನೀತಿ ನಿಯಮವನ್ನು ಪಾಲಿಸಬೇಕು. ಏಕಾಏಕಿ ಈ ರೀತಿ ವಿವಾದವನ್ನು ಸೃಷ್ಟಿ ಮಾಡುವುದು ಖಂಡಿತವಾಗಿ ನಾವಾಗಲಿ, ಈ ಸಮಾಜವಾಗಲ್ಲಿ ಒಪ್ಪಲ್ಲ," ಎಂದು ಹೇಳಿದ್ದಾರೆ.

 ಎಸ್‌ಡಿಪಿಐ ಮುಖಂಡರು ಹೇಳುವುದು ಏನು?

ಎಸ್‌ಡಿಪಿಐ ಮುಖಂಡರು ಹೇಳುವುದು ಏನು?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಡಿಪಿಐ ಪ್ರಧಾನ ಕಾರ್ಯದರ್ಶಿ ಅನ್ವರ್‌ ಸಾದತ್‌ ಬಜತ್ತೂರು, "ಎಲ್ಲರಿಗೂ ಅವರದ್ದೇ ಆದ ಧಾರ್ಮಿಕ ಸ್ವಾತಂತ್ರ್ಯವನ್ನು ಆಚರಣೆ ಮಾಡುವ ಹಕ್ಕನ್ನು ನಮ್ಮ ದೇಶದ ಸಂವಿಧಾನ ನಮಗೆ ನೀಡಿದೆ. ಹಿಜಾಬ್‌ ಹಾಕುವವರು ಹಾಕಬಹುದು, ಹಾಕದೆ ಇರುವವರು ಹಾಕದೆ ಇರಬಹುದು. ಅದು ಅವರವರ ಇಷ್ಟಕ್ಕೆ ಬಿಟ್ಟ ವಿಚಾರ. ಯಾವುದೇ ಹೇರಿಕೆಯೂ ಇಲ್ಲ. ಆದರೆ ಹಾಕುವುದನ್ನು ತಡೆಯುವ ಯಾವ ಅಧಿಕಾರವೂ ಇಲ್ಲ. ಯಾವುದೇ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ. ವಸ್ತ್ರ ಸಂಹಿತೆ ಎಂದು ಹೇಳುವುದು ಪಿಯುಸಿಯ ನಂತರ ಇಲ್ಲ. ಇವರು ಮೊದಲೇ ಅವರು ಹಿಜಾಬ್‌ ಹಾಕುತ್ತಿದ್ದರು. ಆದರೆ ಈಗ ರಾಜಕೀಯ ಉದ್ದೇಶದಿಂದ ವಿರೋಧ ಮಾಡಲಾಗುತ್ತಿದೆ. ಒಂದು ಕಡೆಯಲ್ಲಿ ಮುಸ್ಲಿಂ ಹೆಣ್ಣು ಮಕ್ಕಳು ಶಾಲಾ-ಕಾಲೇಜಿಗೆ ಹೋಗಿ ವಿದ್ಯಾರ್ಜನೆ ಮಾಡುವುದನ್ನು ಸಹಿಸಲು ಸಾಧ್ಯವಾಗದೆ ನಡೆಸುತ್ತಿರುವ ವ್ಯವಸ್ಥಿತ ಷಡ್ಯಂತ್ರ. ಮತ್ತೊಂದು ಕಡೆಯಲ್ಲಿ ಧಾರ್ಮಿಕವಾಗಿ ವಿರೋಧ ಮಾಡಿ ರಾಜಕೀಯ ಬೇಳೆ ಬೇಯಿಸುವ ಪ್ರಯತ್ನವಾಗುತ್ತಿದೆ," ಎಂದಿದ್ದಾರೆ.

 ಮತೀಯ ರಾಜಕಾರಣಕ್ಕೆ ವಿದ್ಯಾರ್ಥಿಗಳ ಬಳಕೆ

ಮತೀಯ ರಾಜಕಾರಣಕ್ಕೆ ವಿದ್ಯಾರ್ಥಿಗಳ ಬಳಕೆ

"ಇದು ನಿಜವಾಗಿ ವಿದ್ಯಾರ್ಥಿಗಳ ನಡುವೆ ಚರ್ಚೆ, ವಿವಾದ ಹುಟ್ಟಿಸುವ ವಿಚಾರವೇ ಅಲ್ಲ. ಶಾಲಾ ಕಾಲೇಜುಗಳಲ್ಲಿ ಕೂಡಾ ವಿದ್ಯಾರ್ಥಿಗಳನ್ನು ಧರ್ಮದ ವಿಚಾರದಲ್ಲಿ ವಿಭಜನೆ ಮಾಡುವ ಅಜೆಂಡಾವನ್ನು ಈ ಮತೀಯವಾದಿ ಸಂಘಟನೆಗಳು ಇಟ್ಟುಕೊಂಡು, ಈ ಅನಗತ್ಯ ವಿಚಾರಗಳನ್ನು ಸುದ್ದಿಯಾಗುವಂತೆ ಮಾಡುತ್ತಿದೆ. ಈಗಿನ ದುಬಾರಿ ಶುಲ್ಕ, ಅವೈಜ್ಞಾನಿಕ ಪಠ್ಯಕ್ರಮ, ಎನ್‌ಇಪಿಯಂತಹ ಅವೈಜ್ಞಾನಿಕ ಕಾಯ್ದೆ ಮೊದಲಾದ ಬಗ್ಗೆ ವಿರೋಧ ಮಾಡುವಂತಹ ಧ್ವನಿಯನ್ನು ಹತ್ತಿಕ್ಕುವ ನಿಟ್ಟಿನಲ್ಲಿ, ವಿದ್ಯಾರ್ಥಿಗಳ ಗಮನ ಬೇರೆಡೆಗೆ ಸೆಳೆಯುವ ತಂತ್ರ ಇದಾಗಿದೆ. ಈ ವಿವಾದಗಳಿಂದಾಗಿ ವಿದ್ಯಾರ್ಥಿಗಳ ಶಿಕ್ಷಣದ ಮೇಲೆ ಪರಿಣಾಮ ಬೀರುವುದು ಖಂಡಿತ. ಉಡುಪಿ, ಕುಂದಾಪುರದ ಕಾಲೇಜುಗಳಲ್ಲಿ ನಡೆದ ಘಟನೆ ನೋಡಿದರೆ, ಇದರಲ್ಲಿ ಎರಡು ಸಂಘಟನೆಗಳು ಮತೀಯ ರಾಜಕೀಯಕ್ಕಾಗಿ ವಿದ್ಯಾರ್ಥಿಗಳನ್ನು ಬಳಕೆ ಮಾಡುತ್ತಿದ್ದಾರೆ ಎಂಬುವುದು ಸ್ಪಷ್ಟವಾಗಿ ತಿಳಿದು ಬರುತ್ತಿದೆ," ಎಂದು ಭಾರತ ವಿದ್ಯಾರ್ಥಿ ಫೆಡರೇಶನ್‌ (ಎಸ್‌ಎಫ್‌ಐ) ಜಿಲ್ಲಾ ಮುಖಂಡರು ಮಾಧುರಿ ಬೋಳಾರ್‌ ತಿಳಿಸಿದ್ದಾರೆ.

ಒಟ್ಟಿನಲ್ಲಿ ಈ ಹಿಜಾಬ್‌ vs ಕೇಸರಿ ಶಲ್ಯ ವಿವಾದವು ಸ್ಪಷ್ಟವಾಗಿ ಎರಡು ಸಂಘಟನೆಗಳ ಅಜೆಂಡಾವಾಗಿದೆಯೇ ಹೊರತು ಶೈಕ್ಷಣಿಕ ಸಂಸ್ಥೆಗಳ ಅಜೆಂಡಾ ಅಲ್ಲ ಎಂಬುವುದು ಸ್ಪಷ್ಟವಾಗಿದೆ. (ಒನ್‌ಇಂಡಿಯಾ ಸುದ್ದಿ)

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+