ಹಿಜಾಬ್ ಕಿಚ್ಚು; ನಡುರಸ್ತೆಯಲ್ಲೇ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರ ಪಾಠ
ಉಡುಪಿ, ಫೆಬ್ರವರಿ 07; ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಆಗಮಿಸಿದ ಹಿಜಾಬ್ ಧಾರಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಕಾಲೇಜಿಗೆ ಪ್ರವೇಶಿಸೋದಾಗಿ ಹಠ ಹಿಡಿದಿದ್ದಾರೆ. ಬುರ್ಖಾ ಧರಿಸಿ ಬಂದ ವಿದ್ಯಾರ್ಥಿನಿಯರು ಹಿಜಾಬ್ಗಾಗಿ ಪಟ್ಟು ಹಿಡಿದಿದ್ದಾರೆ. ನಾವು ಹಿಜಾಬ್ ಹಾಕಿಯೇ ತರಗತಿಗೆ ಹೋಗುವುದಾಗಿ ವಿದ್ಯಾರ್ಥಿನಿಯರ ಆಗ್ರಹಿಸಿದ್ದಾರೆ.
ಸರ್ಕಾರ ಏನೇ ಆದೇಶ ಮಾಡಲಿ ನ್ಯಾಯಾಲಯ ಏನೇ ತೀರ್ಪು ನೀಡಲಿ ಹಿಜಾಬ್ ಹಾಕಿ ತರಗತಿ ಹೋಗುತ್ತೇವೆ ಎಂದು ಪಟ್ಟು ಹಿಡಿದರು. ಆಗ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರಾಂಶುಪಾಲರು ವಿವಾದ ಬಗೆಹರಿಯುವ ತನಕ ತರಗತಿಗೆ ಹಾಜರಾಗದೇ, ತಯಾರು ಮಾಡಿರುವ ಪ್ರತ್ಯೇಕ ಕೊಠಡಿಯಲ್ಲಿ ಇರುವಂತೆ ಮನವಿ ಮಾಡಿದ್ದಾರೆ.
ಪ್ರಾಂಶುಪಾಲರ ಮನವಿ ಮೇಲೆ ಪ್ರತ್ಯೇಕ ಕೊಠಡಿ ಹೋಗಲು ವಿದ್ಯಾರ್ಥಿ ನಿಯರು ಒಪ್ಪಿದ್ದು ಇಡೀ ದಿನ ಪ್ರತ್ಯೇಕ ಕೊಠಡಿಯಲ್ಲೇ ಕೂತು ಬಳಿಕ ನಿರ್ಗಮಿಸಿದ್ದಾರೆ. ಈ ವೇಳೆ ಮಾತನಾಡಿದ ವಿದ್ಯಾರ್ಥಿನಿಯರು, ಪ್ರತ್ಯೇಕ ಕೊಠಡಿಯಲ್ಲಿ ಕುಳಿತುಕೊಳ್ಳೋದು ನೋವನ್ನು ಕೊಡುತ್ತಿದೆ.

ತರಗತಿಗಳಲ್ಲಿ ಪಾಠ ಆಗುತ್ತಿದ್ದರೆ ನಾವು ಬೇರೊಂದು ಕೊಠಡಿಯಲ್ಲಿ ಕುಳಿತುಕೊಂಡಿದ್ದೇವೆ. ನಮಗೂ ಪ್ರಾಧ್ಯಾಪಕರು ಪಾಠ ಮಾಡಬೇಕು ಅಂತ ಆಸೆಯಾಗುತ್ತಿದೆ. ಹಿಜಾಬ್ ತೆಗೆದಿಟ್ಟು ಬರಬೇಕು ಹೇಳುತ್ತಾರೆ. ಆದರೆ ಅದು ಸಾಧ್ಯವಿಲ್ಲ, ನಾಳೆ ನ್ಯಾಯಾಲಯ ತೀರ್ಪು ನಮ್ಮ ಪರವಾಗಿ ಬರುವ ನಿರೀಕ್ಷೆ ಇದೆ ಅಂತಾ ವಿದ್ಯಾರ್ಥಿನಿಯರು ಭರವಸೆ ವ್ಯಕ್ತಪಡಿಸಿದ್ದಾರೆ.
ಇನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಮಾತ್ರವಲ್ಲದೇ ಕುಂದಾಪುರದ ಕಳಾವರ ವರದರಾಜ ಶೆಟ್ಟಿ ಕಾಲೇಜು, ಕೋಟೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೂ ವಿವಾದದ ಬಿಸಿ ತಟ್ಟಿದೆ. ಕಾಳಾವರ ವರದರಾಜ ಶೆಟ್ಟಿ ಪಿಯು ಕಾಲೇಜಿಗೆ ಹಿಜಾಬ್ ಧರಿಸಿ ನಾಲ್ವರು ವಿದ್ಯಾರ್ಥಿನಿಯರು ಬಂದಿದ್ದು, ಅದರಲ್ಲಿ ಓರ್ವ ವಿದ್ಯಾರ್ಥಿನಿ ಮಾತ್ರ ಹಿಜಾಬ್ ಕಳಚಿಟ್ಟು ತರಗತಿಗೆ ಹಾಜರಾಗಿದ್ದಾಳೆ.
ಆದರೆ ಮೂವರು ಮಾತ್ರ ಹಿಜಾಬ್‌ಗಾಗಿ ಪಟ್ಟು ಹಿಡಿದಿದ್ದು, ತರಗತಿಗೆ ಅನುಮತಿ ನೀಡದ ಕಾರಣ ಮನೆ ಕಡೆ ಹೆಜ್ಜೆ ಹಾಕಿದ್ದಾರೆ. ವಿದ್ಯಾರ್ಥಿನಿಯರು ಹಿಜಾಬ್ ಧರಿಸಿದ್ದ ಕಾರಣ ಕಾಲೇಜಿನ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಕ್ತಿ ಪ್ರದರ್ಶನ ಮಾಡಿದ್ದು, ಪೊಲೀಸರ ಎಚ್ಚರಿಕೆ ಬಳಿಕ ಶಾಲು ಕಳಚಿ ತರಗತಿಗಳಿಗೆ ಹಾಜರಾಗಿದ್ದಾರೆ.
ಇನ್ನು ಕೊಟೇಶ್ವರ ಸರ್ಕಾರಿ ಕಾಲೇಜಿನಲ್ಲೂ ಹಿಜಾಬ್‌ಗೆ ಅವಕಾಶ ನೀಡಲಾಗಿಲ್ಲ. ಈ ಬಗ್ಗೆ ಮಾತನಾಡಿದ ಕೋಟೇಶ್ವರ ಪ್ರಥಮ ದರ್ಜೆ ಕಾಲೇಜು ಸಹ ಪ್ರಾಧ್ಯಾಪಕಿ ಡಾ. ಉಷಾದೇವಿ, "ಸರ್ಕಾರದ ಆದೇಶ ಉಲ್ಲಂಘಿಸಿದವರನ್ನು ವಾಪಸ್ ಕಳುಹಿಸಿದ್ದೇವೆ. ನಾವು ಸರ್ಕಾರದ ಆದೇಶವನ್ನು ಪಾಲಿಸಿದ್ದೇವೆ. ವಿದ್ಯಾರ್ಥಿಗಳಿಗೆ ಈಗಾಗಲೇ ಕಾಲೇಜಿನ ನಿಯಮ ಹೇಳಿದ್ದೇವೆ. ಹೀಗಾಗಿ ನಿಯಮ ಉಲ್ಲಂಘಿಸಿದವರಿಗೆ ಕಾಲೇಜು ಆವರಣಕ್ಕೆ ಪ್ರವೇಶಕ್ಕೆ ಅನುಮತಿ ನೀಡಿಲ್ಲ" ಎಂದು ಹೇಳಿದ್ದದಾರೆ.
ಇನ್ನು ಕುಂದಾಪುರದ ವೆಂಕಟರಮಣ ಪದವಿಪೂರ್ವ ಕಾಲೇಜಿನಲ್ಲೂ ಹಿಜಾಬ್ ವಿರುದ್ಧ ವಿದ್ಯಾರ್ಥಿಗಳು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಪ್ರಮುಖ ರಸ್ತೆಯಿಂದ ಕಾಲೇಜಿನವರೆಗೆ ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಮೆರವಣಿಗೆ ಮಾಡಿದ್ದು, ಮೆರವಣಿಗೆ ನಿರತ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಶುಪಾಲ ಗಣೇಶ್ ತಡೆದಿದ್ದಾರೆ. ಹಿಜಾಬ್‌ಗೆ ಕಾಲೇಜಿನಲ್ಲಿ ಅವಕಾಶ ಇಲ್ಲ. ಹೀಗಾಗಿ ನೀವೂ ಕೇಸರಿ ಶಾಲು ತೆಗೆಯಬೇಕೆಂದು ಸೂಚನೆ ನೀಡಿದ್ದಾರೆ. ಈ ವೇಳೆ ವಿದ್ಯಾರ್ಥಿಗಳು, ಅವರು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಹಾಕೋದಾಗಿ ಹಠ ಹಿಡಿದಿದ್ದು, ಕುಂದಾಪುರ ಎಸ್ಐ ಸದಾಶಿವ ಗವರೋಜಿ ಮಧ್ಯಪ್ರವೇಶದ ಬಳಿಕ ಕೇಸರಿ ಶಾಲು ಕಳಚಿಟ್ಟು ವಿದ್ಯಾರ್ಥಿಗಳು ತರಗತಿಗೆ ಹೆಜ್ಜೆ ಹಾಕಿದ್ದಾರೆ.
ಇನ್ನೂ ಈ ಎಲ್ಲಾ ವಿವಾದಗಳಿಗೆ ಮಂಗಳವಾರ ಹೈಕೋರ್ಟ್‌ನಲ್ಲಿ ಬರುವ ತೀರ್ಪು ಇತೀಶ್ರೀ ಹಾಡುವ ವಿಶ್ವಾಸ ಜನರದ್ದಾಗಿದೆ. ಈ ಬಗ್ಗೆ ಮಾತನಾಡಿದ ಉಡುಪಿ ಬಾಲಕಿಯರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ, "ಹಿಜಾಬ್ ಅವರ ಧಾರ್ಮಿಕತೆಗೆ ಒಳಪಟ್ಟಿದೆ, ಸರ್ಕಾರಿ ಕಾಲೇಜಿನಲ್ಲಿ ಶಿಸ್ತು ಮುಖ್ಯವಾಗಿದೆ. ಶಿಕ್ಷಣದೊಂದಿಗೆ ಶಿಸ್ತು ಇದ್ದರೆ ಮಾತ್ರ ಜೀವನದಲ್ಲಿ ಮೇಲೆ ಬರಲು ಸಾಧ್ಯ. ವಿದ್ಯಾರ್ಥಿನಿಯರು ಶೈಕ್ಷಣಿಕ ವಾತಾವರಣ ಹಾಳು ಮಾಡಿದ್ದಾರೆ. ಉಳಿದ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಕೊಳ್ಳಿ ಇಡಲು ಈ ವಿವಾದ ಸೃಷ್ಟಿಸಿದ್ದಾರೆ. ಈ ಆರು ಮುಸ್ಲಿಂ ವಿದ್ಯಾರ್ಥಿನಿಯರ ಬಲಿ ಕೊಡುವ ಕೆಲಸ ಮಾಡುತ್ತಿದ್ದಾರೆ" ಎಂದರು.
"ಅವರಿಗೆ ಹೊರದೇಶದಲ್ಲಿ ಹಣ ಸಂಗ್ರಹ ಮಾಡುವ ಪ್ರಕ್ರಿಯೆಯೂ ನಡೆದಿದೆ. ಖಾಸಗಿ ಕಾಲೇಜಿಗಿಂತ ಸರ್ಕಾರಿ ಬಾಲಕಿಯರ ಕಾಲೇಜು ಕಡಿಮೆಯಿಲ್ಲ. ಈ ಕಾಲೇಜಿನಲ್ಲಿ 900 ವಿದ್ಯಾರ್ಥಿಗಳು ಕಲಿಯುತ್ತಿರಬೇಕಾದರೆ ಗುಣಮಟ್ಟ ಏನು ಗೊತ್ತಾಗುತ್ತದೆ. ಹೈಕೋರ್ಟ್ ತೀರ್ಪು ನಮ್ಮ ಪರ ಬರುತ್ತದೆ. ಕಾಲೇಜಿನ 20 ವರ್ಷದ ನಿರ್ಣಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯ ವಿದ್ಯಾರ್ಥಿಗಳ ಭವಿಷ್ಯದ ಪರ ತೀರ್ಪು ನೀಡುತ್ತದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications