ಭಾರೀ ಮಳೆ: ಆಗುಂಬೆ ಘಾಟ್‌ನಲ್ಲಿ ಜುಲೈ 27ರಿಂದ ಸೆಪ್ಟೆಂಬರ್ 15ರವರೆಗೆ ಘನ ವಾಹನ ಸಂಚಾರ ನಿಷೇಧ
ಉಡುಪಿ, ಜುಲೈ, 27: ಭಾರೀ ಮಳೆಯಿಂದ ಹಳ್ಳ, ಕೊಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳ ಪ್ರವಾಸಿ ತಾಣಗಳಿಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಅದೇ ರೀತಿ ಕರಾವಳಿ- ಮಲೆನಾಡು ಭಾಗದಲ್ಲಿ ವ್ಯಾಪಕ ಮಳೆ ಹಿನ್ನೆಲೆ ಆಗುಂಬೆ ಘಾಟಿಯಲ್ಲಿ ಜುಲೈ 27 ರಿಂದ ಸೆಪ್ಟೆಂಬರ್ 15ರವರೆಗೆ ಘನ ವಾಹನ ಸಂಚಾರಕ್ಕೆ ನಿಷೇಧ ಹೇರಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆ ಹಿನ್ನೆಲೆ ಆಗುಂಬೆ ಘಾಟಿ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 169 ಎನಲ್ಲಿ ರಸ್ತೆ ಕುಸಿಯುವ ಆತಂಕ ಎದುರಾಗಿದೆ. ಈಗಾಗಲೇ ಘನ ವಾಹನ ಸಂಚಾರದಿಂದ ಆಗುಂಬೆ ಘಾಟಿಯ 6, 7 ಹಾಗೂ 11ನೇ ತಿರುವಿನ ರಸ್ತೆಯಲ್ಲಿ ಅಲ್ಲಲ್ಲಿ ಬಿರುಕು ಬಿಟ್ಟಿರುವ ಹಿನ್ನೆಲೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದೆ. ಆದ್ದರಿಂದ ಉಡುಪಿ ಜಿಲ್ಲಾಡಳಿತ ಬಸ್- ಲಾರಿ ಸೇರಿದಂತೆ ಘನ ವಾಹನಗಳಿಗೆ ಬದಲಿ ಮಾರ್ಗವನ್ನು ಸೂಚಿಸಿದೆ.

ಈ ಮಾರ್ಗದಲ್ಲಿ ತೆರಳುವ ವಾಹನ ಸವಾರರು ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಾಘಾಟ್- ಕಾರ್ಕಳ- ಉಡುಪಿ ಅಥವಾ ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ ಮಾರ್ಗ ಬಳಸಬಹುದು. ಹೀಗೆ ಈ ಎರಡು ಬದಲಿ ಮಾರ್ಗ ಬಳಸುವಂತೆ ಘನ ವಾಹನ ಚಾಲಕರಿಗೆ ಉಡುಪಿ ಜಿಲ್ಲಾಡಳಿತ ಮನವಿ ಮಾಡಿದೆ.
ರೈಲು ಸಂಚಾರ ಸ್ಥಗಿತ
ಹಾಗೆಯೇ ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದ ಹಿನ್ನೆಲೆ ಜೊಯೀಡಾದ ಕ್ಯಾಸಲ್ ರಾಕ್ ಸಮೀಪದ ಕರಂಜೋಲ್ ಬಳಿ ಗುಡ್ಡ ಕುಸಿದಿದ್ದು, ರೈಲ್ವೆ ಸಂಚಾರ ಸ್ಥಗೀತಗೊಂಡಿತ್ತು.
ಕಳೆದ ಕೆಲ ದಿನಗಳಂದ ಬಿಟ್ಟು ಬಿಡದೆ ಮಳೆಯಾಗುತ್ತಿದ್ದು, ಭಾರೀ ಮಳೆಗೆ ಕರಂಜೋಲ್ ರೈಲ್ವೆ ಮಾರ್ಗದಲ್ಲಿಯೇ ಭೂಕುಸಿತವಾಗಿದೆ. ಘಟನೆಯಿಂದ ಹುಬ್ಬಳ್ಳಿ-ಗೋವಾ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಭೂಕುಸಿತದ ಸ್ಥಳದಲ್ಲಿನ ಮಣ್ಣನ್ನು ರೈಲ್ವೆ ಸಿಬ್ಬಂದಿ ಹಾಗೂ ಕಾರ್ಮಿಕರು ಸೇರಿ ತೆರವಿನ ಕಾರ್ಯಾಚರಣೆ ಆರಂಭಿಸಿದ್ದಾರೆ. ಕಳೆದ ಕೆಲ ದಿನಗಳ ಹಿಂದೆಯೂ ಇದೇ ರಿತಿ ರೈಲ್ವೆ ಹಳಿ ಮೇಲೆ ಗುಡ್ಡ ಕುಸಿತವಾಗಿತ್ತು.
ಶಿರಸಿ-ಕುಮಟಾ ಹೆದ್ದಾರಿಯ ರಾಗಿ ಹೊಸಳ್ಳಿ ಬಳಿ ಗುಡ್ಡ ಕುಸಿದು ಹೆದ್ದಾರಿ ಸಂಪೂರ್ಣ ಕೆಸರುಮಯವಾಗಿದ್ದು, ವಾಹನಗಳು ಕೆಸರಿನಲ್ಲಿ ಸಿಲುಕಿಕೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಳೆದ ಮೂರು ದಿನಗಳ ಹಿಂದೆ ಗುಡ್ಡ ಕುಸಿತವಾಗಿ ಸಂಚಾರ ಕೆಲ ಗಂಟೆಗಳವರೆಗೆ ಸಂಪೂರ್ಣವಾಗಿ ಬಂದಾಗಿತ್ತು. ಬಳಿಕ ಮಣ್ಣು ತೆರವುಗೊಳಿಸಲಾಗಿತ್ತು. ಆದರೂ ಇದೇ ಪ್ರದೇಶದಲ್ಲಿ ಮತ್ತೆ ಗುಡ್ಡ ಕುಸಿತವಾಗಿ ಮಣ್ಣು ಹೆದ್ದಾರಿಗೆ ಬಂದಿದೆ. ಸದ್ಯ ಜೆಸಿಬಿ ಮೂಲಕ ಮಣ್ಣು ತೆರವು ಮಾಡಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಆದರೆ ಈ ಪ್ರದೇಶದಲ್ಲಿ ಹೆದ್ದಾರಿ ಸಂಪೂರ್ಣ ಕೆಸರುಮಯವಾದ ಕಾರಣ ವಾಹನಗಳು ಸಂಚರಿಸುವಾಗ ಕೆಸರಿನಲ್ಲಿ ಸಿಲುಕಿಕೊಂಡು ಪರದಾಡಬೇಕಾಗಿದೆ. ಬುಧವಾರ ಮುಂಜಾನೆ ಕೂಡ ಕಾರೊಂದು ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಹೆದ್ದಾರಿ ಕಾಮಗಾರಿಯ ಕಾರ್ಮಿಕರು, ಪ್ರಯಾಣಿಕರು ವಾಹನವನ್ನು ತಳ್ಳಿ ಮೇಲೆತ್ತಲು ಪ್ರಯತ್ನಿಸಿದರು ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೆ ಜೆಸಿಬಿ ಮೂಲಕ ಸಿಲುಕಿರುವ ವಾಹನಕ್ಕೆ ಹಗ್ಗ ಕಟ್ಟಿ ಎಳೆದು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಮುಂದುವರೆದ ಮಳೆ ಆರ್ಭಟ
ಇನ್ನು ಜಿಲ್ಲೆಯಲ್ಲಿ ಮತ್ತೆ ಮಳೆ ಆರ್ಭಟ ಮುಂದುವರೆದಿದೆ. ಜಿಲ್ಲೆಯ ಕರಾವಳಿ ಹಾಗೂ ಘಟ್ಟದ ಮೇಲ್ಭಾಗದ ತಾಲೂಕುಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಮಂಗಳವಾರ ಮಧ್ಯಾಹ್ನದವರೆಗೂ ಮಳೆ ಬಿಡುವು ನೀಡಿದ್ದರಿಂದ ಜಿಲ್ಲೆಯ ನದಿ ತೀರಗಳಲ್ಲಿ ಸೃಷ್ಟಿಯಾಗಿದ್ದ ಪ್ರವಾಹ ಇಳಿಮುಖವಾಗಿತ್ತು. ಆದರೆ ಇದೀಗ ಮತ್ತೆ ಮಳೆ ಆರ್ಭಟ ಮುಂದುವರಿದಿರುವ ಕಾರಣ ಮತ್ತೆ ನೆರೆ ಭೀತಿ ಎದುರಿಸುವಂತಾಗಿದೆ.












Click it and Unblock the Notifications